ಶನಿವಾರ, ಜೂನ್ 25, 2022
25 °C
‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮ

ಧರ್ಮಕ್ಕಿಂತಲೂ ದೇಶ ಮೊದಲು: ಶಾಸಕ ಖಂಡ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ದೇಶದ ಏಕತೆ ದೃಷ್ಟಿಯಿಂದ ಧರ್ಮಕ್ಕಿಂತ ರಾಷ್ಟ್ರ ಮುಖ್ಯ ಎನ್ನುವ ಭಾವ ಎಲ್ಲರದಾಗಬೇಕು ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಪುರಭವನ ಸಭಾಂಗಣ ದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಅಮೃತ ಭಾರತಿಗೆ ಕನ್ನಡದಾರತಿ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂಭ್ರಮ ಇದ್ದರೂ ಕೂಡ ಗಡಿ ಭಾಗ ನಿಜಾಂನ ಆಳ್ವಿಕೆಗೆ ಒಳಪಟ್ಟಿತು. ಇಂತಹ ಸಂದರ್ಭದಲ್ಲಿ ಡಾ.ಚನ್ನಬಸವ ಪಟ್ಟದ್ದೇವರು, ಡಾ.ಭೀಮಣ್ಣ ಖಂಡ್ರೆ ಸೇರಿ ಹೋರಾಟಗಾರರು ನಡೆಸಿದ ಹೋರಾಟದಿಂದ ಗಡಿ ಭಾಗ ಅಖಂಡ ಕರ್ನಾಟಕದಲ್ಲಿ ಉಳಿಯುವಂತಾಯಿತು ಎಂದು ಸ್ಮರಿಸಿದರು.

ಮೊದಲ ಪ್ರಧಾನಿಯಾಗಿದ್ದ ಜವಹರಲಾಲ್ ನೆಹರು ಅವರು, ಪಂಚವಾರ್ಷಿಕ ಯೋಜನೆ, ಇಂದಿರಾ ಗಾಂಧಿ ಅವಧಿಯಲ್ಲಿ ಗರಿಬೀ ಹಟಾವೋ, ರಾಜೀವ ಗಾಂಧಿ ಕಾಲದಲ್ಲಿ ಮಾಹಿತಿ ತಂತ್ರಜ್ಞಾನ ಯೋಜನೆ ಸೇರಿ ಹೀಗೆ ಅನೇಕರ ಅವಧಿಯಲ್ಲಿ ಮಹತ್ವ ಪೂರ್ಣ ಯೋಜನೆ ತಂದಿದ್ದರ ಪರಿಣಾಮ ಇಂದು ಭಾರತ್ ಅಭಿವೃದ್ಧಿಯತ್ತ ದಿಟ್ಟ ಹೆಜ್ಜೆ ಇರಿಸಿದೆ. ಆದರೂ ಇಂದಿಗೂ ದೇಶದಲ್ಲಿ ಅರಾಜಕತೆ, ಭ್ರಷ್ಟಾಚಾರ, ಅತ್ಯಾಚಾರ, ಕೊಲೆ, ಸುಲಿಗೆ, ಜಾತಿಯತೆ ತಾಂಡವಾಡುತ್ತಿರುವುದು ಕಳವಳಕಾರಿ ಸಂಗತಿ. ಇದನ್ನು ತಡೆಗಟ್ಟಲು ಗಂಭೀರ ಚಿಂತನೆ ನಡೆಯಬೇಕು ಎಂದರು.

ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ದೇಶದ ಸ್ವಾತಂತ್ರ್ಯದ ಹಿಂದೆ ಅನೇಕರ ತ್ಯಾಗ ಬಲಿದಾನ ಅಡಗಿದೆ. ಇತಿಹಾಸವನ್ನು ತಿಳಿದು ಮಹನೀಯರನ್ನು ಸ್ಮರಿಸುವುದರ ಜತೆಗೆ ಅದೇ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು ಎಂದು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಕೊಟ್ರೇಶ್ ಉಪನ್ಯಾಸ ನೀಡಿದರು.ಜಿ.ಪಂ. ಸಿಇಒ ಜಹೀರಾ ನಸೀಮ್ ಮಾತನಾಡಿದರು.

ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಸೇನಾನಿ ರಾಮರಾವ್ ಕುಲಕರ್ಣಿ, ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಬಸವಕಲ್ಯಾಣ ಎಸಿ ರಮೇಶ ಕೋಲಾರ್, ತಹಶೀಲ್ದಾರ್ ಕೀರ್ತಿ ಚಾಲಕ್, ತಾಲ್ಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವಂತರಾಯ ಜಿಡ್ಡೆ, ಸ್ವಾಮಿದಾಸ್ ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು.

 ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ್ ಚವ್ಹಾಣ, ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ತಹಶೀಲ್ದಾರ್ ಕೀರ್ತಿ ಚಾಲಕ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜಪ್ಪ ಪಾಟೀಲ, ತಾಲ್ಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ, ಎಇಇ ಶಿವಶಂಕರ ಕಾಮಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ ಸಂಗನ್, ಸೋಮನಾಥಪ್ಪ ಅಷ್ಟೂರೆ, ಸಿದ್ರಾಮ ಶಿಂಧೆ, ಕಲಾವಿದ ವಿಜಯಕುಮಾರ ಸೋನಾರೆ ಇದ್ದರು.

ಕಲಾ ತಂಡಗಳ ಸೊಬಗು
ಕಾರ್ಯಕ್ರಮದ ನಿಮಿತ್ತ ಪಟ್ಟಣದಲ್ಲಿ ವೈಭವದಿಂದ ಮೆರವಣಿಗೆ ನಡೆಯಿತು. ಪಟ್ಟಣದ ಪುರಸಭೆ ಆವರಣದಲ್ಲಿ ಶನಿವಾರ ಶಾಸಕ ಈಶ್ವರ ಖಂಡ್ರೆ ಅವರು ತಾಯಿ ಭಾರತಾಂಬೆ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಬೊಮಗೊಂಡೇಶ್ವರ ವೃತ್ತ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ ಸೇರಿ ವಿವಿಧ ಪ್ರಮುಖ ರಸ್ತೆಗಳ ಮೂಲಕ ಟೌನ್ ಹಾಲ್ ಸಭಾಂಗಣದಲ್ಲಿ ಮೆರವಣಿಗೆ ಸಮಾವೇಶಗೊಂಡಿತು.

ಮೆರವಣಿಗೆಯುದ್ದಕ್ಕೂ ವಿವಿಧ ಕಲಾ ತಂಡಗಳ ನೃತ್ಯ, ಡೊಳ್ಳು ಕುಣಿತ, ಕೋಲಾಟ, ಭಜನೆ, ಲಂಬಾಣಿ ನೃತ್ಯ, ಭಾಜಾ ಭಜಂತ್ರಿ, ಮಕ್ಕಳ ವೇಷಭೂಷಣ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರವಣಿಗೆ ಕಳೆ ಹೆಚ್ಚಿಸಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.