ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಕೋಟೆ ನಗರಿ ಕಳೆಗಟ್ಟಿದ ರಸ್ತೆ ಸುರಕ್ಷತಾ ಓಟ, ಆರು ಸಾವಿರ ಜನ ಭಾಗಿ

Published 27 ಆಗಸ್ಟ್ 2023, 1:56 IST
Last Updated 27 ಆಗಸ್ಟ್ 2023, 1:56 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಓಟವು ಕೋಟೆ ನಗರಿ ಬೀದರ್‌ಗೆ ಕಳೆ ತಂದುಕೊಟ್ಟಿತು.

ಇನ್ನೂ ಸೂರ್ಯ ಉದಯಿಸಿರಲಿಲ್ಲ. ತಂಗಾಳಿ ಬೀಸುತ್ತಿತ್ತು. ಅಷ್ಟಾರಲ್ಲಾಗಲೇ ನಗರದ ವಿವಿಧ ಬಡಾವಣೆಗಳಿಂದ ಜನರು ಕಾಲ್ನಡಿಗೆ, ದ್ವಿಚಕ್ರ ವಾಹನ ಹಾಗೂ ಕಾರುಗಳಲ್ಲಿ ಕೋಟೆ ಕಡೆಗೆ ಮುಖ ಮಾಡಿದ್ದರು. ಎಲ್ಲೆಲ್ಲೂ ಬಿಳಿ ವರ್ಣದ ಟೋಪಿ, ಟೀ ಶರ್ಟ್‌ ಧರಿಸಿದ ಶ್ವೇತವಸ್ತ್ರಧಾರಿಗಳೇ ಕಂಡು ಬಂದರು. ಕೋಟೆಯ ಒಳಭಾಗದಲ್ಲಂತೂ ಜನಜಾತ್ರೆ ಕಂಡು ಬಂತು. ಒಂದು ಕಡೆ ಓಟಕ್ಕೆ ಕೊನೆಯ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರೆ, ಬೃಹತ್‌ ವೇದಿಕೆಯ ಮೇಲೆ ಯುವಕರು ಸಂಗೀತಕ್ಕೆ ಹೆಜ್ಜೆ ಹಾಕಿ, ಅಲ್ಲಿದ್ದವರಲ್ಲಿ ಹುಮ್ಮಸ್ಸು ತುಂಬುವ ಕೆಲಸ ಮಾಡಿದರು.

6 ಗಂಟೆ 10 ನಿಮಿಷಕ್ಕೆ 10 ಕಿ.ಮೀ ಓಟದ ಸ್ಪರ್ಧೆಗೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌, ಡಿಸಿಎಫ್‌ ಎಂ.ಎಂ. ವಾನತಿ ಹಸಿರು ನಿಶಾನೆ ತೋರಿದರು. 

ಅದಾದ ನಂತರ 5 ಕಿ.ಮೀ ಓಟದ ಸ್ಪರ್ಧೆ ನಡೆಯಿತು. ಕೊನೆಯಲ್ಲಿ 2.5 ಕಿ.ಮೀ ಓಟ ನಡೆಯಿತು. ಓಟದ ಸ್ಪರ್ಧೆಗೆ ಒಟ್ಟು 4,277 ಜನ ಹೆಸರು ನೋಂದಣಿ ಮಾಡಿಸಿಕೊಂಡಿದ್ದರು. 10 ಕಿ.ಮೀ ಓಟಕ್ಕೆ 544 ಮಂದಿ, 5 ಕಿ.ಮೀಗೆ 238 ಜನ ಹಾಗೂ 2.5 ಕಿ.ಮೀ 3,495 ಜನ ಹೆಸರು ನೋಂದಾಯಿಸಿದ್ದರು. ಹೆಸರು ನೋಂದಣಿ ಮಾಡಿಸದೆ ಕೊನೆಯ ಕ್ಷಣದಲ್ಲಿ ಆಸಕ್ತಿ ತೋರಿ ಬಂದವರಿಗೂ ಓಟದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಸುಮಾರು ಆರು ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು.

ಕೋಟೆ ಮಧ್ಯ ಭಾಗದಿಂದ ಆರಂಭಗೊಂಡ 10 ಕಿ.ಮೀ ಓಟವು ಮುಖ್ಯ ಪ್ರವೇಶ ದ್ವಾರದ ಮೂಲಕ ಸಿದ್ದಾರ್ಥ ಕಾಲೇಜು, ಹೊಸ ಬಸ್‌ ನಿಲ್ದಾಣ, ಹಳೆ ಬಸ್‌ ನಿಲ್ದಾಣ, ಬಸವೇಶ್ವರ ವೃತ್ತ, ಚೌಬಾರ, ಮಹಮೂದ್ ಗವಾನ್‌ ಮದರಸಾ ಮೂಲಕ ಹಾದು ಪುನಃ ಕೋಟೆಯಲ್ಲಿ ಕೊನೆಗೊಂಡಿತು. 5 ಕಿ.ಮೀ ಸ್ಪರ್ಧೆಯು ಕೋಟೆ, ಸಿದ್ದಾರ್ಥ ಕಾಲೇಜು, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ನಯಾಕಮಾನ್‌, ಚೌಬಾರ ಮೂಲಕ ಕೋಟೆಗೆ ಸೇರಿತು. 2.5 ಕಿ.ಮೀ ಓಟದ ಸ್ಪರ್ಧೆ ಕೋಟೆಯಿಂದ ಪ್ರಾರಂಭಗೊಂಡು ಮಾಜಿಸಚಿವ ಬಂಡೆಪ್ಪ ಕಾಶೆಂಪುರ್‌ ಅವರ ನಿವಾಸದಿಂದ ಮಹಮೂದ್‌ ಗವಾನ ಮದರಸಾ ಮೂಲಕ ಕೋಟೆಯಲ್ಲಿ ಕೊನೆಗೊಂಡಿತು. ಡಿಸಿ, ಎಸ್ಪಿ, ಡಿಸಿಎಫ್‌ ಸೇರಿದಂತೆ ಹಲವರು 2.5 ಕಿ.ಮೀ ಓಟದಲ್ಲಿ ಹೆಜ್ಜೆ ಹಾಕಿದರು.

ಯುವಕ/ಯುವತಿಯರು, ಮಹಿಳೆಯರು, ಮಧ್ಯ ವಯಸ್ಕರು, ಕೆಲ ಹಿರಿಯ ನಾಗರಿಕರು ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು. ಮಾರ್ಗದುದ್ದಕ್ಕೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಮೂರು ವಿಭಾಗಗಳಲ್ಲಿ ಪಾಲ್ಗೊಂಡವರಿಗೆ ಅವರು ಮಾರ್ಗದರ್ಶನ ಮಾಡಿದರು. ರಸ್ತೆಬದಿಯಲ್ಲಿ ಪೊಲೀಸ್‌ ಬ್ಯಾಂಡ್‌, ವಿವಿಧ ಸಂಘ ಸಂಸ್ಥೆಗಳವರು ಬ್ಯಾಂಡ್‌ ಬಾರಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡವರಲ್ಲಿ ಹುಮ್ಮಸ್ಸು ತುಂಬುವ ಕೆಲಸ ಮಾಡಿದರು. ಇನ್ನು, ಕೆಲವೆಡೆ ಸಾರ್ವಜನಿಕರು ಸ್ಪರ್ಧಿಗಳ ಮೇಲೆ ಹೂಮಳೆಗರೆದು ಸ್ವಾಗತಿಸಿದರು.

ಓಟದಲ್ಲಿ ಪಾಲ್ಗೊಂಡ ಎಲ್ಲರಿಗೂ ಮೆಡಲ್‌ಗಳನ್ನು ವಿತರಿಸಲಾಯಿತು. ಸೆಲ್ಫಿ ಪಾಯಿಂಟ್‌ಗಳನ್ನು ನಿರ್ಮಿಸಲಾಗಿತ್ತು. ಎಲ್ಲರೂ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಕೇಸರಿಬಾತ್‌, ಉಪ್ಪಿಟ್ಟು ಉಪಾಹಾರ, ಬಾಳೆಹಣ್ಣಿನ ವ್ಯವಸ್ಥೆ ಮಾಡಲಾಗಿತ್ತು. ಕೋಟೆಯ ಆವರಣದಲ್ಲಿ ಅಲ್ಲಲ್ಲಿ ನಿಂತುಕೊಂಡು ಜನ ಉಪಾಹಾರ ಸೇವಿಸಿದರು. ಹಬ್ಬದ ಸಂಭ್ರಮ ಮನೆ ಮಾಡಿತ್ತು. ಬಹುತೇಕರು ಎಸ್ಪಿಯವರ ಕೈಕುಲುಕಿ ಸೆಲ್ಪಿ ತೆಗೆದುಕೊಂಡು ಖುಷಿಪಟ್ಟರು.

ಎಸ್ಪಿ ಚನ್ನಬಸವಣ್ಣ ಮಾತನಾಡಿ, ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ತಗ್ಗಿಸುವ ಉದ್ದೇಶದಿಂದ ರಸ್ತೆ ಸುರಕ್ಷತಾ ಓಟ ಆಯೋಜಿಸಲಾಗಿತ್ತು. ನಿರೀಕ್ಷೆಗೂ ಮೀರಿ ಜನ ಪಾಲ್ಗೊಂಡಿದ್ದಕ್ಕೆ ಖುಷಿಯಾಗಿದೆ. ಜಿಲ್ಲೆಯಲ್ಲಿ ಕಳೆದ ವರ್ಷ 332, ಪ್ರಸಕ್ತ ವರ್ಷ 210 ಜನ ರಸ್ತೆ ಅಪಘಾತಗಳಲ್ಲಿ ಮರಣ ಹೊಂದಿದ್ದಾರೆ. ಇವರ ಸಾವಿಗೆ ಕಾರಣ ಹುಡುಕಿದಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದೇ ಇರುವುದು ಗೊತ್ತಾಗಿದೆ. ಹೆಲ್ಮೆಟ್ ಧರಿಸದೆ ಇರುವುದು, ಕಾರು ಚಲಾಯಿಸುವಾಗ ಸೀಟ್‌ ಬೆಲ್ಟ್ ಧರಿಸಲಿಲ್ಲ ಎನ್ನುವುದು ತಿಳಿದು ಬಂದಿದೆ. ಎಲ್ಲರೂ ನಿಯಮ ಪಾಲಿಸಿದರೆ ಯಾವುದೇ ರಸ್ತೆ ಅಪಘಾತಗಳು ಉಂಟಾಗುವುದಿಲ್ಲ ಎಂದರು.

ಈ ಓಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಕುಟುಂಬದ ಪ್ರತಿ ಸದಸ್ಯರಿಗೂ ನಿಯಮಗಳನ್ನು ಪಾಲಿಸುವಂತೆ ತಿಳಿಸಬೇಕು. ಪೊಲೀಸರಿಗೆ ಸಹಕರಿಸಬೇಕು ಎಂದು ಕೋರಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ, ಡಿವೈಎಸ್ಪಿ ಕೆ.ಎಂ ಸತೀಶ, ಸಮಾಜ ಸೇವಕ ಗುರುನಾಥ ಕೊಳ್ಳೂರ, ಶಾಹೀನ್‌ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ಖದೀರ್‌, ಬುಡಾ ಮಾಜಿ ಅಧ್ಯಕ್ಷ ಬಾಬುವಾಲಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

 ಅಂಜಲಿ, ಭೀಮಾಶಂಕರ ಪ್ರಥಮ

ಮೊದಲು ನಡೆದ 10 ಕಿ.ಮೀ ಓಟದ ಸ್ಪರ್ಧೆಯ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಕ್ರಮವಾಗಿ ಭೀಮಾಶಂಕರ ಹಾಗೂ ಅಂಜಲಿ ಪ್ರಥಮ, ಕಾವ್ಯಶ್ರೀ ವಲ್ಲೆಪುರೆ ದ್ವಿತೀಯ ಸ್ಥಾನ ಗಳಿಸಿದರು. ಸದಾನಂದ ಮೇತ್ರೆ ದ್ವಿತೀಯ, ರಮೇಶ ತೃತೀಯ ಬಹುಮಾನ ಗಳಿಸಿದರು. 

5 ಕಿ.ಮೀ.ನಲ್ಲಿ ಮಲ್ಲಿಕಾರ್ಜುನ ಪುಂಡಲೀಕ್‌, ಮಹೇಶ ಭೀಮು ರಾಠೋಡ್‌ ಮತ್ತು ದತ್ತು ಪರಶುರಾಮ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು. ಐಶ್ವರ್ಯ, ಪೂಜಾ ಜಾಧವ ಮತ್ತು ಶ್ರುತಿ ಚಿದ್ರೆ ಮಹಿಳೆಯರ ವಿಭಾಗದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಗಳಿಸಿದರು. 

ಅಚ್ಚುಕಟ್ಟು ವ್ಯವಸ್ಥೆಗೆ ಮೆಚ್ಚುಗೆ

ಓಟದ ಸ್ಪರ್ಧೆಯಲ್ಲಿ ಆರು ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಆದರೆ, ಯಾವುದೇ ರೀತಿಯ ಸಮಸ್ಯೆ ಎದುರಾಗಲಿಲ್ಲ. ಓಟದ ಸ್ಪರ್ಧೆಯ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗದಿರಲೆಂದು ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸ್ಥಳದಲ್ಲಿ ನಾಲ್ಕು ಆಂಬ್ಯುಲೆನ್ಸ್‌ಗಳನ್ನು ಇರಿಸಲಾಗಿತ್ತು. ಬಹುತೇಕ ಕಡೆ ಏಕಮುಖ ವಾಹನ ಸಂಚಾರದ ವ್ಯವಸ್ಥೆ ಇತ್ತು. ಸ್ಪರ್ಧಿಗಳಿಗೆ ಮಾರ್ಗದಲ್ಲಿ ಕುಡಿಯುವ ನೀರು, ಓಆರ್‌ಎಸ್‌ ಇಡಲಾಗಿತ್ತು. ಉಪಾಹಾರದ ವ್ಯವಸ್ಥೆ ಸೇರಿದಂತೆ ಎಲ್ಲವೂ ಅಚ್ಚುಕಟ್ಟಾಗಿತ್ತು ಎಂದು ಓಟದಲ್ಲಿ ಪಾಲ್ಗೊಂಡವರು ಪೊಲೀಸ್‌ ಇಲಾಖೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT