ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಶ್ಚಿಯನ್‌ ಕಾರ್ಪೊರೇಷನ್‌ಗೆ ಶೀಘ್ರ ಅಧ್ಯಕ್ಷ, ನಿರ್ದೇಶಕರ ನೇಮಕ: ಡಿಸೋಜಾ

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ತಿಳಿಸಿದರು
Published 3 ಜುಲೈ 2024, 13:16 IST
Last Updated 3 ಜುಲೈ 2024, 13:16 IST
ಅಕ್ಷರ ಗಾತ್ರ

ಬೀದರ್‌: ‘ಕರ್ನಾಟಕ ಕ್ರಿಶ್ಚಿಯನ್‌ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ಲಿಮಿಟೆಡ್‌ ನೋಂದಣಿ ಆಗಿದ್ದು, ರಾಜ್ಯ ಸರ್ಕಾರದಿಂದ ಕೆಲವೇ ದಿನಗಳಲ್ಲಿ ನೂತನ ಅಧ್ಯಕ್ಷ, ನಿರ್ದೇಶಕರನ್ನು ನೇಮಕ ಮಾಡಲಾಗುವುದು’ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ತಿಳಿಸಿದರು.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕಾರ್ಪೊರೇಷನ್‌ಗೆ ₹200 ಕೋಟಿ ಮೀಸಲಿಡಲಾಗಿದೆ. ಈಗಾಗಲೇ ₹80 ಕೋಟಿ ಬಿಡುಗಡೆಗೊಳಿಸಲಾಗಿದೆ. ಕಾರ್ಪೊರೇಷನ್‌ ಅಸ್ತಿತ್ವಕ್ಕೆ ಬಂದ ನಂತರ ವಿವಿಧ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ, ವಿದೇಶದಲ್ಲಿ ಅಧ್ಯಯನಕ್ಕಾಗಿ ಸಾಲ, ಸಮುದಾಯ ಆಧಾರಿತ ತರಬೇತಿಗೆ ಅನುದಾನ ನೀಡಲಾಗುವುದು ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳು ಮೆಡಿಕಲ್‌, ಎಂಜಿನಿಯರಿಂಗ್‌ ಸೇರಿದಂತೆ ಇತರೆ ವೃತ್ತಿಪರ ಕೋರ್ಸ್‌ಗಳಿಗೆ ಸೇರಿದರೆ ಅವರ ಸಂಪೂರ್ಣ ಶುಲ್ಕವನ್ನು ಭರಿಸಲಾಗುವುದು. ಯಾರು ಬಡತನ ರೇಖೆಗಿಂತ ಕೆಳಗಿದ್ದಾರೋ ಅವರಿಗೆ ಪ್ರಯೋಜನ ಸಿಗಲಿದೆ. ಹಣವಿಲ್ಲದೇ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅದನ್ನು ತಡೆಯುವುದು ಸರ್ಕಾರದ ಉದ್ದೇಶ ಎಂದು ವಿವರಿಸಿದರು.

ಬಿಜೆಪಿ ಸೋತು ಸುಣ್ಣ

ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಸೋತು ಸುಣ್ಣವಾಗಿದೆ. ಮೋದಿ ಎದುರು ರಾಜ್ಯದ ಮುಖಂಡರಿಗೆ ನಿಲ್ಲುವ ಗೌರವವಿಲ್ಲ. ಮತದಾರರು ಬಿಜೆಪಿ ವಿರುದ್ಧ ತೀರ್ಮಾನ ಕೊಟ್ಟಿದ್ದಾರೆ. ಇದರಿಂದ ಹತಾಶರಾಗಿ ಬಿಜೆಪಿಯವರು ಕಾಂಗ್ರೆಸ್‌ ವಿರುದ್ಧ, ‘ಗ್ಯಾರಂಟಿ’ ಯೋಜನೆಗಳ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ ಎಂದರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ 1.25 ಕೋಟಿ ಕುಟುಂಬಗಳು ಪ್ರಯೋಜನ ಪಡೆಯುತ್ತಿವೆ. ಸ್ವತಃ ಬಿಜೆಪಿಯ ಕಾರ್ಯಕರ್ತರು ಇದರ ಫಲಾನುಭವಿಗಳಾಗಿದ್ದಾರೆ. ಎಲ್ಲಾದರೂ ದುರುಪಯೋಗವಾಗುತ್ತಿದ್ದರೆ ತೋರಿಸಲಿ ಅದು ಬಿಟ್ಟು ವಿನಾಕಾರಣ ಟೀಕೆ ಮಾಡುವುದು ಸರಿಯಲ್ಲ. ಗ್ಯಾರಂಟಿಗಳ ಪರಿಣಾಮಕಾರಿ ಅನುಷ್ಠಾನಕ್ಕೆ ತಾಲ್ಲೂಕು, ಜಿಲ್ಲಾಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್‌ ಚಿಮಕೋಡೆ, ಪ್ರಮುಖರಾದ ವನಿಲಾ, ರಾಜಶೇಖರ್‌, ಸಂಜಯ್‌ ಜಾಹಗೀರದಾರ್‌, ಮಹೇಶ, ಅರ್ಜುನ್‌, ಜಾರ್ಜ್‌ ಫರ್ನಾಂಡಿಸ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT