ಭಾಲ್ಕಿ: ‘ಸಾರ್ವಜನಿಕ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು’ ಎಂದು ಶಾಸಕ ಈಶ್ವರ ಖಂಡ್ರೆ ವೈದ್ಯರಿಗೆ ಸೂಚಿಸಿದರು ನೀಡಿದರು.
ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಆರೋಗ್ಯ ಕಚೇರಿಯ ಸಹಯೋಗದಲ್ಲಿ 75ನೇ ಆಜಾದಿ ಕಾ ಅಮೃತ್ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಆರೋಗ್ಯ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ ಕೋವಿಡ್ ಮಹಾಮಾರಿಗೆ ಜನ ತತ್ತರಿಸಿ ಹೋಗಿದ್ದಾರೆ. ಆರೋಗ್ಯವಂತ ವ್ಯಕ್ತಿಯಿಂದ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ತಾಲ್ಲೂಕಿನ ಸಾರ್ವಜನಿಕ, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಲ್ಲ ವಿಧದ ರೋಗಗಳಿಗೆ ಚಿಕಿತ್ಸೆ ನೀಡುವ ಕಾರ್ಯ ನಡೆಯಬೇಕು. ಆಯುಷ್ಮಾನ ಭಾರತ ಮತ್ತು ಆರೋಗ್ಯ ಕರ್ನಾಟಕ ಸೌಲಭ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು ಎಂದು ಹೇಳಿದರು.
ತಾಯಿ-ಮಗು ಆಸ್ಪತ್ರೆ ತೆರೆಯಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಸಕಲ ಸೌಲಭ್ಯವುಳ್ಳ ತಾಯಿ-ಮಗು ಆಸ್ಪತ್ರೆ ಆರಂಭಿಸಲಾಗುವುದು. ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉಚಿತವಾಗಿ ಔಷಧಿಗಳು ವಿತರಿಸಬೇಕು. ಔಷಧದ ಅಭಾವ ಎಂದು ರೋಗಿಗಳಿಗೆ ಬೇರೆಡೆ ಕಳುಹಿಸಬಾರದು. ಪ್ರಸ್ತುತವಾಗಿ ಸ್ತ್ರೀ ರೋಗತಜ್ಞೆ, ಆರ್ಥೋ, ಹೃದಯ ತಜ್ಞ ಸೇರಿದಂತೆ ಎಲ್ಲ ವೈದ್ಯಕೀಯ ಪರಿಣಿತರನ್ನು ನೇಮಿಸಲಾಗಿದೆ. ಗ್ರಾಮೀಣ ಭಾಗದ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು
ತಿಳಿಸಿದರು.
ತಪಾಸಣೆ: ಆರೋಗ್ಯ ಮೇಳದಲ್ಲಿ 117 ಶುಗರ್, 435 ಬಿಪಿ, 218 ಚಿಕ್ಕ ಮಕ್ಕಳಿಗೆ ತಪಾಸಣೆ ನಡೆಸಲಾಯಿತು. 195 ರೋಗಿಗಳಿಗೆ ಮಾಹಿತಿ ಸಂವಹನ ಮೂಲಕ ಚಿಕಿತ್ಸೆ ನೀಡಿ, ಒಟ್ಟು 1850 ಜನರು ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದಂತೆ ತಪಾಸಣೆ ಮಾಡಿಕೊಂಡರು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜ್ಞಾನೇಶ್ವರ ನಿರಗೂಡೆ ಮಾಹಿತಿ ನೀಡಿದರು.
ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ತಹಶೀಲ್ದಾರ್ ಕೀರ್ತಿ ಚಾಲಾಕ್, ಟಿಎಚ್‍ಒ ಡಾ.ಜ್ಞಾನೇಶ್ವರ ನಿರಗುಡೆ, ಸಿಎಂಒ ಡಾ.ಅಬ್ದುಲ್ ಖಾದರ್, ಡಾ.ದೇವಕಿ ಖಂಡ್ರೆ, ಡಾ.ನಿತೀನ ಪಾಟೀಲ, ಡಾ.ಶಶಿಕಾಂತ ಭೂರೆ, ಡಾ.ವಿಕ್ರಮ ದೇವಪ್ಪ, ಪ್ರವೀಣ ಇದ್ದರು. ಸೋಮನಾಥ ನಿರೂಪಿಸಿ, ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.