ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣವಾನಂದ ಸ್ವಾಮೀಜಿ ವಿರುದ್ಧ ಹೇಳಿಕೆ: ಕ್ಷಮೆಗೆ ಆರ್ಯ ಈಡಿಗ ಸಮಾಜ ಸಂಘ ಆಗ್ರಹ

Published 22 ಸೆಪ್ಟೆಂಬರ್ 2023, 9:39 IST
Last Updated 22 ಸೆಪ್ಟೆಂಬರ್ 2023, 9:39 IST
ಅಕ್ಷರ ಗಾತ್ರ

ಬೀದರ್‌: ‘ಆರ್ಯ ಈಡಿಗ ಸಮಾಜ ಸಂಘದ ರಾಜ್ಯ ಘಟಕದ ಅಧ್ಯಕ್ಷ ತಿಮ್ಮೇಗೌಡ ಅವರು ರಾಷ್ಟ್ರೀಯ ಈಡಿಗ ಮಹಾಮಂಡಳದ ಚಿತ್ತಾಪುರದ ಕರದಾಳು ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಅವರು ಈಡಿಗ ಸಮಾಜಕ್ಕೆ ಸಂಬಂಧಿಸಿದವರಲ್ಲ ಎಂದು ಹೇಳಿಕೆ ಕೊಟ್ಟಿರುವುದು ಖಂಡನಾರ್ಹ. ಕೂಡಲೇ ಅವರು ಕ್ಷಮೆಯಾಚಿಸಬೇಕು. ತಮ್ಮ ಹೇಳಿಕೆ ಹಿಂಪಡೆಯಬೇಕು’ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಡಾ. ರಾಜಶೇಖರ ಸೇಡಂಕರ್‌ ಆಗ್ರಹಿಸಿದರು.

ಸ್ವಾಮೀಜಿ ವಿರುದ್ಧ ತಿಮ್ಮೇಗೌಡ ಅವರು ಕೊಟ್ಟಿರುವ ಹೇಳಿಕೆ ವಿರುದ್ಧ ರಾಜ್ಯದ ಹಲವೆಡೆ ಸಮಾಜದವರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಅಧ್ಯಕ್ಷರು ಸಮಾಜ ಒಡೆಯುವ ಕೆಲಸ ಮಾಡಬಾರದು. ಅನಗತ್ಯ ವಿವಾದ ಸೃಷ್ಟಿಸುವುದು ಸರಿಯಲ್ಲ. ಅವರ ನಡೆ ಖಂಡನಾರ್ಹ ಎಂದು ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕಟುವಾದ ಶಬ್ದಗಳಲ್ಲಿ ಹೇಳಿದರು.

ರಾಜ್ಯದಲ್ಲಿ ಸರಿಸುಮಾರು 70 ಲಕ್ಷ ಜನ ಆರ್ಯ ಈಡಿಗ ಸಮಾಜದವರಿದ್ದಾರೆ. ಬೀದರ್‌ ಜಿಲ್ಲೆಯಲ್ಲಿ 30 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಹಿಂದೆ ವಿಧಾನಸಭೆಯಲ್ಲಿ ಸಮಾಜದ 20ರಿಂದ 30 ಜನ ಶಾಸಕರು, ಲೋಕಸಭೆಯಲ್ಲಿ 7ರಿಂದ 8 ಜನ ಸಂಸದರು ಇರುತ್ತಿದ್ದರು. ಬೇರೆ ಬೇರೆ ಕ್ಷೇತ್ರಗಳಲ್ಲಿ, ಉದ್ಯಮಗಳಲ್ಲಿ ಈಗ ತೊಡಗಿಸಿಕೊಂಡಿದ್ದಾರೆ. ನಿರ್ಲಕ್ಷಿತ ಸಮಾಜ ಒಗ್ಗಟ್ಟು ಆಗುತ್ತಿರುವ ಹಂತದಲ್ಲಿ ತಿಮ್ಮೇಗೌಡ ಅವರು ಕೊಟ್ಟಿರುವ ಹೇಳಿಕೆಯಿಂದ ಒಡಕು ಉಂಟಾಗುತ್ತಿದೆ ಎಂದರು.

ಪ್ರಣವಾನಂದ ಸ್ವಾಮೀಜಿ ಅವರ ಶ್ರಮದಿಂದ ರಾಜ್ಯ ಸರ್ಕಾರ ಆರ್ಯ ಈಡಿಗ ನಿಗಮ ಮಂಡಳಿ ರಚಿಸಿದೆ. ಅದಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ. ಹೀಗಿರುವಾಗ ಅವರ ವಿರುದ್ಧ ಹೇಳಿಕೆ ಕೊಟ್ಟಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಆರ್ಯ ಈಡಿಗ ಸಮಾಜ ಸಂಘದಲ್ಲಿ ಒಟ್ಟು 12,000 ಸದಸ್ಯರಿದ್ದಾರೆ. ಇದರಲ್ಲಿ ಬೆಂಗಳೂರು, ಮೈಸೂರು, ಉಡುಪಿ, ಮಂಗಳೂರಿನವರದ್ದೇ ಸಿಂಹಪಾಲು ಇದೆ. ಕಲ್ಯಾಣ ಕರ್ನಾಟಕ ಭಾಗದಿಂದ 3 ಸಾವಿರ ಸದಸ್ಯರಿರಬಹುದು. ಸಂಘದಲ್ಲಿ ಉತ್ತರ ಕರ್ನಾಟಕ ಭಾಗದ ಸಮಾಜದವರನ್ನು ಮೊದಲಿನಿಂದಲೂ ಕಡೆಗಣಿಸುತ್ತ ಬರಲಾಗಿದೆ. ಈ ಭಾಗದವರ ಮಾತಿಗೆ ಯಾವುದೇ ಬೆಲೆಯಿಲ್ಲ. ರಾಷ್ಟ್ರೀಯ ಆರ್ಯ ಈಡಿಗ ಮಹಾಮಂಡಳದ ಮೂಲಕ ಸ್ವಾಮೀಜಿ ಎಲ್ಲರನ್ನೂ ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಯಾರೋ ತಪ್ಪು ಮಾಹಿತಿ ಕೊಟ್ಟಿದ್ದರಿಂದ ಅವರು ಕೂಡ ಪ್ರಣವಾನಂದ ಸ್ವಾಮೀಜಿ ಅವರು ಈಡಿಗ ಸಮಾಜದ ಸ್ವಾಮೀಜಿ ಅಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ರಾಷ್ಟ್ರೀಯ ಈಡಿಗ ಮಹಾಮಂಡಳದ ಜಿಲ್ಲಾಧ್ಯಕ್ಷ ಶಿವಕುಮಾರ ತೆಲಂಗ ಮಾತನಾಡಿ, ಹಿಂದೆ ಗಂಗಾವತಿಯಲ್ಲಿ ಏರ್ಪಡಿಸಿದ್ದ ಸಮಾಜದ ಕಾರ್ಯಕ್ರಮದಲ್ಲಿ ಪ್ರಣವಾನಂದ ಸ್ವಾಮೀಜಿ ಅವರೊಂದಿಗೆ ತಿಮ್ಮೇಗೌಡ ಹಾಗೂ ಸಚಿವ ಮಧು ಬಂಗಾರಪ್ಪ ಅವರ ವೇದಿಕೆ ಹಂಚಿಕೊಂಡಿದ್ದರು. ಈಗ ಅವರು ಸ್ವಾಮೀಜಿ ಸಮಾಜಕ್ಕೆ ಸಂಬಂಧಿಸಿದವರಲ್ಲ ಎಂದು ಹೇಳಿಕೆ ಕೊಟ್ಟಿದ್ದು ಸರಿಯಲ್ಲ ಎಂದರು.

ಹಿಂದೆ ಸಂಘದ ಸದಸ್ಯತ್ವ ಪಡೆಯಬೇಕಾದರೆ ₹160 ಶುಲ್ಕ ಒಬ್ಬರಿಗೆ ನಿಗದಿಪಡಿಸಲಾಗಿತ್ತು. ತಿಮ್ಮೇಗೌಡರು ಅದನ್ನು ₹1,260ಕ್ಕೆ ಹೆಚ್ಚಿಸಿದ್ದಾರೆ. ಬೀದರ್‌ ಜಿಲ್ಲೆಯಿಂದ 169 ಜನರಷ್ಟೇ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ. ತಿಮ್ಮೇಗೌಡರು ಬೆಂಗಳೂರು ಹೊರತುಪಡಿಸಿ ಬೇರೆಲ್ಲೂ ಹೋಗಿ ಸಂಘಟನೆ ಮಾಡಿಲ್ಲ. ಸ್ವಾಮೀಜಿಯವರು ಉತ್ತಮ ಕೆಲಸ ಮಾಡುತ್ತಿರುವಾಗ ಅವರಿಗೆ ಅಡ್ಡಿ ಪಡಿಸುತ್ತಿರುವುದು ಸರಿಯಲ್ಲ. ಸಮಾಜದವರು ಈ ಹಿಂದೆ ಸೇಂದಿ ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದರು. ಅದರ ಮೇಲೆ ನಿರ್ಬಂಧ ಹೇರಿದ ನಂತರ ಅನೇಕರು ರಾಜ್ಯ ಬಿಟ್ಟು ಬೇರೆ ಕಡೆಗಳಿಗೆ ವಲಸೆ ಹೋಗಿದ್ದಾರೆ. ಅವರ ಉದ್ದಾರದ ಬಗ್ಗೆ ಎಲ್ಲರೂ ಯೋಚಿಸಬೇಕಿದೆ ಎಂದು ಹೇಳಿದರು.

ಸಮಾಜದ ಮುಖಂಡರಾದ ಪ್ರದೀಪ ತೆಲಂಗ, ಪ್ರಕಾಶ, ಅನಿಲ್‌, ಸಂಗಮೇಶ ಹಾಜರಿದ್ದರು.

ಹರಿಪ್ರಸಾದ್‌ಗೆ ಅನ್ಯಾಯ
‘ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ, ಆರ್ಯ ಈಡಿಗ ಸಮಾಜದ ಮುಖಂಡ ಬಿ.ಕೆ. ಹರಿಪ್ರಸಾದ್‌ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸೇರಿಸಿಕೊಂಡು ಮಂತ್ರಿ ಮಾಡದೆ ಅನ್ಯಾಯ ಮಾಡಲಾಗಿದೆ’ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಡಾ. ರಾಜಶೇಖರ ಸೇಡಂಕರ್‌ ಹೇಳಿದರು. ಈ ಸಂಬಂಧ ಇತ್ತೀಚೆಗೆ ಸಮಾಜದ 25 ಸಾವಿರ ಜನ ಒಂದೇ ಕಡೆ ಸೇರಿ ಚರ್ಚೆ ನಡೆಸಿದ್ದೆವೆ. ಅವರಿಗೆ ಸೂಕ್ತ ಸ್ಥಾನಮಾನ ಕೊಡಬೇಕು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಮಾಜಕ್ಕೆ ಭವನ ನಿರ್ಮಿಸಿಕೊಡಬೇಕು. ಸಮಾಜದ ನಿಗಮ ಮಂಡಳಿಗೆ ಅನುದಾನ ಮೀಸಲಿಡಬೇಕೆಂದು ಒತ್ತಾಯಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT