ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ ‌| ಕಳಪೆ ಕಾಮಗಾರಿ ಪ್ರಶ್ನಿಸಿದ್ದಕ್ಕೆ ಶಾಸಕರ ಇಬ್ಬರು ಸಹೋದರರಿಂದ ಹಲ್ಲೆ

Published 31 ಮೇ 2024, 23:47 IST
Last Updated 31 ಮೇ 2024, 23:47 IST
ಅಕ್ಷರ ಗಾತ್ರ

ಬೀದರ್‌: ಜಲಜೀವನ್‌ ಮಿಷನ್‌ ಯೋಜನೆ (ಜೆಜೆಎಂ) ಅಡಿ ಕೈಗೆತ್ತಿಕೊಂಡ ಕಾಮಗಾರಿ ಕಳಪೆಯಾಗಿದೆ ಎಂದು ವಿರೋಧಿಸಿದ ವ್ಯಕ್ತಿಯನ್ನು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರ ಇಬ್ಬರು ಸಹೋದರರು ಸೇರಿ ಹತ್ತು ಜನರು ಹುಮನಾಬಾದ್‌ ತಾಲ್ಲೂಕಿನ ಹಣಕುಣಿ ರಸ್ತೆಯ ನಿರ್ಜನ ಪ್ರದೇಶಕ್ಕೆ ಗುರುವಾರ ರಾತ್ರಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ.

ಘಟನೆ ಸಂಬಂಧ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಸಕರ ಸಹೋದರರರು ತಲೆ ಮರೆಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಲ್ಲೂಕಿನ ಕಠಳ್ಳಿ ಗ್ರಾಮದ ಬಸವರಾಜ ಗಾಯಗೊಂಡ ವ್ಯಕ್ತಿ. ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರ ಸಹೋದರರಾದ ಸಂತೋಷ್ ಪಾಟೀಲ, ಸುನೀಲ ಪಾಟೀಲ ಹಾಗೂ ಅವರ ಜೊತೆಗಿದ್ದ ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಕಠಳ್ಳಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ನಡೆದಿದೆ. ಗ್ರಾಮದ ಹಳೆ ನೀರಿನ ಟ್ಯಾಂಕಿಗೆ ಬಣ್ಣ ಬಳಿದು ಹೊಸದಾಗಿ ಕಾಣುವಂತೆ ಮಾಡಲಾಗಿದೆ ಎಂದು ದೂರಿ ಬಸವರಾಜ ಅವರು ಕೆಲಸ ನಿಲ್ಲಿಸಿದ್ದರು. ಈ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡಿದ್ದರು. ಗುರುವಾರ ಗ್ರಾಮದ ಮರಿಗೆಮ್ಮ ದೇವಸ್ಥಾನದ ಬಳಿ ಬಸವರಾಜ ಅವರು ಇದ್ದಾಗ ಸಂದೀಪ್‌ ಮತ್ತು ಪಾಣಿ ಎಂಬುವರು ಅವರ ಬಳಿಗೆ ಹೋಗಿ ಗೌಡರು (ಶಾಸಕರು) ಮಾತನಾಡಬೇಕು. ನೀವು ಬರಬೇಕೆಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಅದನ್ನು ನಿರಾಕರಿಸಿ ನಾನು ಬೆಳಿಗ್ಗೆ ಬರುತ್ತೇನೆ ಎಂದು ಬಸವರಾಜ ಹೇಳಿದಾಗ ಬಲವಂತವಾಗಿ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಹಣಕುಣಿ ರಸ್ತೆಯ ಬಯಲು ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡ ಬಸವರಾಜ ಅವರನ್ನು ಹುಮನಾಬಾದ್‌ ಪಟ್ಟಣದ ಆಸ್ಪತ್ರೆಗೆ ತಡರಾತ್ರಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ವಿಷಯ ತಿಳಿಯುತ್ತಿದ್ದಂತೆ ಕಾಂಗ್ರೆಸ್‌ ಮುಖಂಡ ರಾಜಶೇಖರ ಪಾಟೀಲ ಹುಮನಾಬಾದ್‌ ಹಾಗೂ ಪಕ್ಷದ ಕಾರ್ಯಕರ್ತರು ಬಂದು ಘಟನೆಯನ್ನು ಖಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT