ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜರಂಗ ದಳದಿಂದ ಪ್ರತಿಭಟನಾ ಮೆರವಣಿಗೆ

ಹಿಂದೂ ಧಾರ್ಮಿಕ ಕೇಂದ್ರಗಳ ಮೇಲಿನ ದಾಳಿಗೆ ಖಂಡನೆ
Last Updated 9 ಜುಲೈ 2019, 13:00 IST
ಅಕ್ಷರ ಗಾತ್ರ

ಬೀದರ್: ಜಿಹಾದ್ ಹೆಸರಲ್ಲಿ ದೇಶದಲ್ಲಿ ಹಿಂದೂ ಸಮುದಾಯ ಹಾಗೂ ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ಬಜರಂಗ ದಳದ ಸದಸ್ಯರು ಮಂಗಳವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ಪ್ರತ್ಯೇಕತಾವಾದಿ ಮನಸ್ಥಿತಿ ಉಳ್ಳವರಿಂದ ದೇಶದಲ್ಲಿ ಕೆಲ ವರ್ಷಗಳಿಂದ ದೇಶ ವಿರೋಧಿ ಹಾಗೂ ಹಿಂದೂ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಗುಂಪು ಹಲ್ಲೆ ಹೆಸರಲ್ಲಿ ಸಣ್ಣ ಚಟುವಟಿಕೆಗಳನ್ನು ದೊಡ್ಡದಾಗಿ ಬಿಂಬಿಸಿ ಗ್ರಾಮೀಣ ಜನ, ರಾಮ ಭಕ್ತರು, ಗೋ ರಕ್ಷಕರು ಹಾಗೂ ರಾಷ್ಟ್ರವಾದಿಗಳನ್ನು ಅಪಮಾನಗೊಳಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆಪಾದಿಸಿದರು.

ಮುಗ್ಧ ಬಾಲಕಿಯರು ಹಾಗೂ ಹಿಂದೂ ಸಹೋದರಿಯರೊಂದಿಗಿನ ಜಿಹಾದಿಗಳ ದುರ್ವ್ಯವಹಾರಗಳು ಭಾರತವನ್ನು ನಾಚಿಕೆಗೀಡು ಮಾಡಿವೆ. ಹಿಂದೂಗಳ ಬಲವಂತದ ಮತಾಂತರ, ಹಿಂದೂಗಳ ಪಲಾಯನ, ಕಾಶ್ಮಿರ ಪ್ರತ್ಯೇಕತಾವಾದ, ಕೇರಳ, ಪಶ್ಚಿಮ ಬಂಗಾಳ, ಕರ್ನಾಟಕದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಆಕ್ರಮಣ, ದೆಹಲಿಯ ಚಾಂದಿನಿ ಚೌಕ್ ಕ್ಷೇತ್ರದಲ್ಲಿನ ಹಿಂದೂ ಮಂದಿರ ಹಾಗೂ ಮನೆಗಳ ಅತಿಕ್ರಮಣ, ಸೂರತ್, ಜೈಪುರ, ರಾಂಚಿಯಲ್ಲಿ ನಡೆಸಿದ ಭಾರತ ವಿರೋಧಿ ಪ್ರದರ್ಶನಗಳಿಂದ ಹಿಂದೂ ಸಮಾಜ ಆಕ್ರೋಶಗೊಂಡಿದೆ ಎಂದು ತಿಳಿಸಿದರು.

ಗೋವುಗಳ ಕಳ್ಳರು, ಗೋವು ಹಂತಕರನ್ನು ರಕ್ಷಿಸಲು ಅಥವಾ ಅವರ ದುಷ್ಕೃತ್ಯಗಳನ್ನು ಮರೆಮಾಚಲು ಯೋಜನಾ ಬದ್ಧ ರೀತಿಯಲ್ಲಿ ಹಿಂದೂ ಶ್ರದ್ಧಾ ಕೇಂದ್ರಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಜೈಶ್ರೀರಾಮ ಘೋಷಣೆಯನ್ನು ತಪ್ಪಾಗಿ ಅರ್ಥೈಸಿ ಅಪಪ್ರಚಾರ ಮಾಡುವ ಕಾರ್ಯ ನಡೆದಿದೆ. ಜಾತ್ಯತೀತರು ಇದಕ್ಕೆ ಪುಷ್ಟಿ ನೀಡುತ್ತಿದ್ದಾರೆ ಎಂದು ದೂರಿದರು.

ಹಿಂದೂ ಶ್ರದ್ಧಾ ಕೇಂದ್ರಗಳ ಮೇಲಿನ ದಾಳಿಗಳನ್ನು ನಿಯಂತ್ರಿಸಬೇಕು. ಹಿಂದೂ ಸಮುದಾಯ ಹಾಗೂ ಜೀವನ ಮೌಲ್ಯಗಳನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದರು.

ಬಜರಂಗ ದಳದ ಜಿಲ್ಲಾ ಸಂಯೋಜಕ ಸುನೀಲ ದಳವೆ, ಸಹ ಸಂಯೋಜಕ ಬಸವರಾಜ ಕನ್ನಳ್ಳಿ, ಮಹೇಶ, ವೀರೇಶ ಸ್ವಾಮಿ, ವಿನೋದ, ಸತೀಶ, ಮಾರುತಿ, ಮಲ್ಲಿಕಾರ್ಜುನ, ವಿಜಯ, ಮಾರುತಿ ಡಿ.ಕೆ., ರವಿ, ಸಂತೋಷ, ರಾಜು, ಸತೀಶ, ಮಲ್ಲಿಕಾರ್ಜುನ ಕುಂಬಾರ, ಆಕಾಶ ಸ್ವಾಮಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT