ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಕಮಲಕ್ಕೆ ಸೈ ಎಂದ ಕಲ್ಯಾಣದ ಜನತೆ

ನೆರವಿಗೆ ಬಾರದ ಅನುಕಂಪದ ಅಲೆ; ಪಟ್ಟು ಬಿಡದೇ ಶಾಸಕ ಸ್ಥಾನ ಗಿಟ್ಟಿಸಿಕೊಂಡ ಶರಣು ಸಲಗರ; ಸ್ವಾಭಿಮಾನಕ್ಕೆ ಸಿಗಲಿಲ್ಲ ಮನ್ನಣೆ
Last Updated 3 ಮೇ 2021, 4:09 IST
ಅಕ್ಷರ ಗಾತ್ರ

ಬೀದರ್: ಬಸವಕಲ್ಯಾಣದ ಜನತೆಗೆ ಬಿಜೆಪಿ ಮಾಡಿದ್ದ ಜನಪ್ರಿಯ ಘೋಷಣೆಗಳು, ಅದರ ಅನುಷ್ಠಾನಕ್ಕೆ ತೋರಿದ್ದ ಆಸಕ್ತಿ ಹಾಗೂ ಸಂಘಟಿತ ಫಲವಾಗಿ ಅಲ್ಲಿನ ಮತದಾರರು ಪಕ್ಷದ ಅಭ್ಯರ್ಥಿ ಶರಣು ಸಲಗರ ಅವರನ್ನು ‘ಇವನಮ್ಮವ, ಇವನಮ್ಮವ’ ಎಂದು ಅಪ್ಪಿಕೊಂಡಿದ್ದಾರೆ.

20,629 ಮತಗಳ ಅಂತರದಿಂದ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಶಾಸಕರಾಗಿದ್ದ ದಿವಂಗತ ಬಿ. ನಾರಾಯಣರಾವ್ ಅವರ ಪತ್ನಿ ಮಾಲಾ ನಾರಾಯಣರಾವ್ ಅವರಿಗೆ ಟಿಕೆಟ್ ನೀಡಿ ಅನುಕಂಪದ ಅಲೆಯಲ್ಲಿ ಗೆಲುವು ಸಾಧಿಸುವ ಕಾಂಗ್ರೆಸ್ ಯತ್ನ ಕೈಗೂಡಿಲ್ಲ. ಜೆಡಿಎಸ್‌ನ ಸಯ್ಯದ್ ಯಶ್ರಬ್ ಅಲಿ ಹೆಚ್ಚಿನ ಪೈಪೋಟಿ ನೀಡಲಿಲ್ಲ. ಬಂಡಾಯದ ಬಾವುಟ ಹಾರಿಸಿ ಕೊನೆ ಕ್ಷಣದ ಪ್ರಯತ್ನಕ್ಕೂ ಜಗ್ಗದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರೂ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ.

ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇತರ ಎಂಟು ಅಭ್ಯರ್ಥಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಹೆಚ್ಚಿನ ಮತಗಳನ್ನು ಪಡೆಯಲಿಲ್ಲ. ಎಐಎಂಐಎಂ ಪಕ್ಷದಿಂದ ಸ್ಪರ್ಧಿಸಿದ್ದ ಅಬ್ದುಲ್ ರಜಾಕ್ ಬಾಬಾ ಚೌಧರಿ ಅವರು 2174 ಮತಗಳನ್ನು ಪಡೆದಿದ್ದು ಬಿಟ್ಟರೆ ಉಳಿದ ಅಭ್ಯರ್ಥಿಗಳು ಮತಗಳಿಕೆಯಲ್ಲಿ ಮೂರಂಕಿಯನ್ನು ದಾಟಲಿಲ್ಲ. ಮಧ್ಯಾಹ್ನ 1.20ರ ವೇಳೆಗೆ ಎಲ್ಲ ಸುತ್ತಿನ ಮತ ಎಣಿಕೆ ಮುಕ್ತಾಯವಾದ ಬಳಿಕ ಅದಾಗಲೇ ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದ ಸಂಸದ ಭಗವಂತ ಖೂಬಾ ಅವರ ಕಾಲಿಗೆ ನಮಸ್ಕರಿಸಿ ಶರಣು ಸಲಗರ ಆಶೀರ್ವಾದ ಪಡೆದರು. ನಂತರ ಬಂದ ಸಚಿವ ಪ್ರಭು ಚವ್ಹಾಣ ಅವರಿಂದ ಅಭಿನಂದನೆ ಸ್ವೀಕರಿಸಿದರು.

ಎಣಿಕೆ ಕೇಂದ್ರದಿಂದ ನಿರ್ಗಮಿಸಿದ ಮಾಲಾ: 23ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾದ ಬಳಿಕ ತಮ್ಮ ಸೋಲು ಖಚಿತ ಎಂಬುದನ್ನು ಅರಿತ ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್ ಅವರು ಬೆಂಬಲಿಗರೊಂದಿಗೆ ಸ್ಥಳದಿಂದ ನಿರ್ಗಮಿಸಿದರು. ಶರಣು ಸಲಗರ ಅವರನ್ನು ಹುಡುಕಿಕೊಂಡು ಬಂದ ಜೆಡಿಎಸ್‌ ಅಭ್ಯರ್ಥಿ ಸಯ್ಯದ್ ಯಶ್ರಬ್ ಅಲಿ ಖಾದ್ರಿ ಶರಣು ಅವರನ್ನು ಅಪ್ಪಿಕೊಂಡು ಗೆಲುವಿಗೆ ಅಭಿನಂದನೆ ತಿಳಿಸಿದರು.

ಫಲಿತಾಂಶ ತಡ: ಇವಿಎಂ ಮತಗಳ ಎಣಿಕೆ 1.20ಕ್ಕೆ ಮುಕ್ತಾಯವಾದರೂ ಅಂಚೆ ಮತಗಳನ್ನು ಎಣಿಕೆ ಮಾಡಿ ಅಂತಿಮ ಫಲಿತಾಂಶವನ್ನು ಪ್ರಕಟಿಸಲು ತಡವಾಯಿತು. ಎಲ್ಲ ಪ್ರಕ್ರಿಯೆ ಮುಗಿಯುವವರೆಗೆ ಅಧಿಕೃತ ಘೋಷಣೆ ಮಾಡುವುದು ಬೇಡ ಎಂದು ಜಿಲ್ಲಾಧಿಕಾರಿ ಡಾ.ರಾಮಚಂದ್ರನ್ ಆರ್. ಅವರು ಸೂಚಿಸಿದ್ದರು.

ಮತ ಎಣಿಕೆ ಕೇಂದ್ರಕ್ಕೇ ಊಟ: ಸಂಸದ ಭಗವಂತ ಖೂಬಾ, ನೂತನ ಶಾಸಕ ಶರಣು ಸಲಗರ ಮತ ಎಣಿಕೆ ಕೇಂದ್ರದಲ್ಲಿಯೇ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಊಟವನ್ನು ಸೇವಿಸಿದರು. ಜಿಲ್ಲಾಧಿಕಾರಿ ರಾಮಚಂದ್ರನ್ ಸಹ ಸಾಮಾನ್ಯರಂತೆ ಸಾಲಿನಲ್ಲಿ ನಿಂತು ಊಟ ಮಾಡಿದರು.

ಇಬ್ಬರಿಗೆ ಕೋವಿಡ್ ಪಾಸಿಟಿವ್
ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಂದಿದ್ದ ಸಿಬ್ಬಂದಿ, ಮತ ಎಣಿಕೆ ಏಜೆಂಟರು, ಅಭ್ಯರ್ಥಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಮುಂಚೆಯೇ ಆರ್‌ಟಿ–ಪಿಸಿಆರ್‌ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಚುನಾವಣಾ ಆಯೋಗ ಸೂಚನೆ ನೀಡಿತ್ತು. ಕೆಲವರ ಪರೀಕ್ಷಾ ವರದಿಗಳ ಬಂದಿರಲಿಲ್ಲ. ಕೆಲವರು ಪರೀಕ್ಷೆ ಮಾಡಿಸಿಕೊಳ್ಳದೇ ಬಂದಿದ್ದರು. ಅವರಿಗಾಗಿ ಸ್ಥಳದಲ್ಲೇ 200 ರ‍್ಯಾಪಿಡ್ ಆಂಟಿಜೆನ್ ಟೆಸ್ಟಿಂಗ್ ಕಿಟ್‌ಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿ ವ್ಯವಸ್ಥೆ ಮಾಡಿದ್ದರು.

ಸ್ಥಳದಲ್ಲೇ ಪರೀಕ್ಷೆ ಮಾಡಿಸಿಕೊಂಡ ‍ಪೊಲೀಸ್ ಕಾನ್‌ಸ್ಟೆಬಲ್ ಹಾಗೂ ದೂರವಾಣಿ ಸಂಪರ್ಕ ಕಲ್ಪಿಸಲು ಬಂದಿದ್ದ ಬಿಎಸ್‌ಎನ್‌ಎಲ್ ಉದ್ಯೋಗಿಯೊಬ್ಬರಿಗೆ ಕೋವಿಡ್ ಪಾಸಿಟಿವ್ ಇರುವುದು ಪತ್ತೆಯಾಯಿತು. ನಂತರ ಅವರನ್ನು ಐಸೋಲೇಷನ್‌ನಲ್ಲಿರುವಂತೆ ತಿಳಿಸಿ ಕರ್ತವ್ಯದಿಂದ ಬಿಡುಗಡೆ ಮಾಡಿ ಕಳಿಸಲಾಯಿತು.

889 ನೋಟಾ ಮತಗಳು!
ಬಸವ ಕಲ್ಯಾಣ ಉಪಚುನಾವಣೆಯಲ್ಲಿ 889 ನೋಟಾ (ಸ್ಪರ್ಧಿಸಿದ ಯಾರಿಗೂ ಮತವಿಲ್ಲ) ಮತಗಳು ಚಲಾವಣೆಯಾಗಿವೆ. ಇವು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಏಳು ಅಭ್ಯರ್ಥಿಗಳು ಗಳಿಸಿರುವ ವೈಯಕ್ತಿಕ ಮತಗಳಿಗಿಂತ ಹೆಚ್ಚಾಗಿವೆ. ಚುನಾವಣಾ ಆಯೋಗವು ಅಭ್ಯರ್ಥಿ ಒಪ್ಪಿಗೆ ಇಲ್ಲದಿದ್ದರೆ ನೋಟಾ ಚಲಾಯಿಸುವ ಹಕ್ಕನ್ನು ಮತದಾರರಿಗೆ ನೀಡಿದೆ.

198 ತಿರಸ್ಕೃತ: ಅಂಚೆ ಮತಗಳ ಎಣಿಕೆ ಸಂದರ್ಭದಲ್ಲಿ ನಿಯಮಬದ್ಧವಾಗಿ ಚಲಾವಣೆಯಾದ 198 ಮತಗಳನ್ನು ಚುನಾವಣಾ ಸಿಬ್ಬಂದಿ ತಿರಸ್ಕರಿಸಿದರು.

ಕ್ಷೇತ್ರದಲ್ಲಿ 2,39,782 ಮತದಾರರಿದ್ದು, ಅವರಲ್ಲಿ 1,47,234 ಜನರು ತಮ್ಮ ಹಕ್ಕು ಚಲಾಯಿಸಿದ್ದರು.

ಮತಗಟ್ಟೆ ಹತ್ತಿರ ಸುಳಿಯದ‌ ಬೆಂಬಲಿಗರು
ಕೊರೊನಾ ಸೋಂಕಿನ ಭಯದಿಂದ ವಿವಿಧ ಪಕ್ಷಗಳ ‌ಬೆಂಬಲಿಗರು ಬಸವ ಕಲ್ಯಾಣ ‌ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದ ಇಲ್ಲಿನ ಬಿ.ವಿ. ಭೂಮರೆಡ್ಡಿ ಕಾಲೇಜಿನತ್ತ ಸುಳಿಯಲಿಲ್ಲ.

ಮತ ಎಣಿಕೆ ‌ಕೇಂದ್ರದಿಂದ ಒಂದು ‌ಕಿಲೋ ಮೀಟರ್ ‌ಅಂತರದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಪಾಸ್ ಇದ್ದವರು ಹಾಗೂ ‌ಕೊರೊನಾ ನೆಗೆಟಿವ್ ‌ಇದ್ದವರಿಗಷ್ಟೇ ಒಳಗಡೆ ಪ್ರವೇಶ ಅವಕಾಶ ಕಲ್ಪಿಸಲಾಗಿತ್ತು. ಕೊರೊನಾ ಭಯದಿಂದ ಪಾಸ್ ಇದ್ದ ಕೆಲವರೂ ಅತ್ತ ಹೋಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT