ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ತತ್ವ ವಿಶ್ವಮಾನ್ಯ: ಭಾಲ್ಕಿ ಶ್ರೀ

ಜಾಗತಿಕ ಲಿಂಗಾಯತ ಮಹಾಸಭಾ ಆಳಂದ ಘಟಕದ ಉದ್ಘಾಟನೆ, ಸದಸ್ಯತ್ವ ಪಡೆಯಲು ಕರೆ
Last Updated 10 ಫೆಬ್ರುವರಿ 2020, 11:27 IST
ಅಕ್ಷರ ಗಾತ್ರ

ಆಳಂದ: ಸಕಲ ಜೀವಾತ್ಮರ ಕಲ್ಯಾಣ ಬಯಸಿದ 12ನೇ ಶತಮಾನದ ಶರಣರ ಬಸವ ತತ್ವವು ಇಂದು ವಿಶ್ವಮಾನ್ಯವಾಗಿದೆ. ಇದನ್ನು ಸಂಘಟನಾತ್ಮಕವಾಗಿ ಬಲಿಷ್ಠಗೊಳಿಸುವ ಅಗತ್ಯವಿದೆ ಎಂದು ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ನುಡಿದರು.

ಪಟ್ಟಣದ ಶರಣ ಏಕಾಂತರಾಮಯ್ಯ ಅನಭವ ಮಂಟಪದಲ್ಲಿ ಭಾನುವಾರ ಜಾಗತಿಕ ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಏಸುಕ್ರಿಸ್ತ ಮಡಿದಾಗ ಅವನ ಅನುಯಾಯಿಗಳು 12 ಜನ ಮಾತ್ರ ಇದ್ದರು. ಇಂದು ಕ್ರೈಸ್ತ ಧರ್ಮ ಜಗತ್ತಿನ ಎಲ್ಲಡೆ ವ್ಯಾಪಿಸಿದೆ. ಲಿಂಗಾಯತ ಧರ್ಮಕ್ಕೆ ಆರಂಭದಲ್ಲಿ ಸಮಸ್ಯೆ, ಸವಾಲುಗಳಿವೆ. ಇಂದಿನ ಜನಾಂಗಕ್ಕೆ ವಚನ ಸಾಹಿತ್ಯದ ಅರಿವು ಮೂಡಿಸಿದರೆ ಲಿಂಗಾಯತವು ಎಲ್ಲರನ್ನು ಒಳಗೊಳ್ಳುವ ಧರ್ಮವಾಗಲಿದೆ ಎಂದರು.

ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖುಬಾ ಮಾತನಾಡಿ, ‘ಲಿಂಗಾಯತರಲ್ಲಿನ ಉಪ ಪಂಗಡಗಳ ನಡುವೆ ಸಮನ್ವಯತೆ ಸಾಧಿಸಬೇಕಿದೆ. ಮನೆ, ಮಠಗಳು ಲಿಂಗಾಯತ ಆಚರಣೆಗಳ ಕೇಂದ್ರಗಳಾಗಬೇಕು’ ಎಂದರು.

ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ‘ವೈದಿಕ ಶಾಹಿ ವ್ಯವಸ್ಥೆಯು ಲಿಂಗಾಯತ ಹೋರಾಟವನ್ನು ಹತ್ತಿಕ್ಕುವ ಹುನ್ನಾರ ನಡೆಸಿದೆ. ಆದ್ದರಿಂದ ಲಿಂಗಾಯತರನ್ನು ಜಾಗೃತಗೊಳಿಸುವ ಕಾರ್ಯವು ಈ ಸಂಘಟನೆಯಿಂದ ನಡೆಯಲಿದೆ’ ಎಂದರು.

ಧುತ್ತರಗಾಂವದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ, ಲಿಂಗಾಯತ ಮಹಾ ಸಭಾದ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್‌, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕುಪೇಂದ್ರ ಪಾಟೀಲ ಮಾತನಾಡಿ, ‘ ಲಿಂಗಾಯತ ಮಹಾಸಭಾದ ಸದಸ್ಯತ್ವ ಪಡೆಯುವ ಮೂಲಕ ಧರ್ಮ ಮಾನ್ಯತೆಗಾಗಿ ಹೋರಾಟ ನಡೆಸಬೇಕು’ ಎಂದರು.

ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಲೋಹಾರ, ಜಿಲ್ಲಾ ಕಾರ್ಯದರ್ಶಿ ರವೀಂದ್ರ ಶಾಬಾದಿ, ಆರ್‌.ಜಿ.ಶೇಟಗಾರ, ಸೋಮಣ್ಣಾ ನಡಕಟ್ಟಿ, ಬಾಬುರಾವ ಅರುಣೋದಯ, ಮೌಲಾ ಮುಲ್ಲಾ, ಶಿವಣ್ಣ ಇಂಜೇರಿ, ಎಸ್.ಎಂ.ದುಲಂಗೆ, ಪೂಜಾ ಲೋಹಾರ, ಬಸವರಾಜ ಪವಾಡಶೇಟ್ಟಿ, ಮಲ್ಲಿನಾಥ ಹತ್ತರಕಿ, ಬಾಬುರಾವ ಮಡ್ಡೆ, ಶ್ರೀಮಂತರಾವ ಪಾಟೀಲ, ಭೀಮಾಶಂಕರ ಜಮಗಿ, ಗುಂಡಯ್ಯ ಸ್ವಾಮಿ, ಅಪ್ಪಾಸಾಹೇಬ ತೀರ್ಥೆ ಇದ್ದರು.

ಇದೇ ಸಂದರ್ಭದಲ್ಲಿ ರಮೇಶ ಲೋಹಾರ ಅವರಿಗೆ ಷಟಸ್ಥಲ ಧ್ವಜ ನೀಡಿ ಸತ್ಕರಿಸಲಾಯಿತು. ಕಲಾವಿದ ಶಿವಶರಣಪ್ಪ ಪೂಜಾರಿ, ಅಶೋಕ ಆಳಂದ ಅವರಿಂದ ವಚನ ಗಾಯನ ಜರುಗಿತು. ಮಹಾದೇವ ವಡಗಾಂವ, ರಾಜೇಂದ್ರ ಗುಂಡೆ ನಿರೂಪಿಸಿದರೆ, ರಮೇಶ ಲೋಹಾರ ಸ್ವಾಗತಿಸಿದರು. ಸಂಜಯ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT