ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಹಸಿರು ತಾಣ ‘ಬಸವ ವನ’

ಬಸವೇಶ್ವರರ ಅಷ್ಟ ಶತಮಾನೋತ್ಸವ ನೆನಪಿಗಾಗಿ ನಿರ್ಮಾಣ
Last Updated 25 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಬಸವಕಲ್ಯಾಣ: ನಗರದ ಶರಣ ಹರಳಯ್ಯ ವೃತ್ತದಲ್ಲಿನ ‘ಬಸವ ವನ’ವು ವಿವಿಧ ಜಾತಿಯ ಗಿಡ–ಮರಗಳಿಂದ ಕಂಗೊಳಿಸುತ್ತಿದೆ. ಹಸಿರು ಹೊದ್ದು ಗಮನ ಸೆಳೆಯುತ್ತಿದೆ.

ಮೈಸೂರು ರಾಜ್ಯದ ಮುಖ್ಯಮಂತ್ರಿ ಆಗಿದ್ದ ಎಸ್.ನಿಜಲಿಂಗಪ್ಪ ಅವರ ನೇತೃತ್ವದಲ್ಲಿ ಇಲ್ಲಿ ಬಸವಣ್ಣನವರ ಅಷ್ಟ ಶತಮಾನೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತ್ತು. ಅದರ ಸವಿ ನೆನಪಿಗಾಗಿ ಈ ವನ ನಿರ್ಮಿಸಲಾಗಿದೆ. 26-12-1967 ರಂದು ನಿಜಲಿಂಗಪ್ಪ ಅವರೇ ಇದರ ಉದ್ಘಾಟನೆ ನೆರವೇರಿಸಿದ್ದರು. ಶಾಸಕರಾಗಿದ್ದ ಅಣ್ಣಾರಾವ್ ಪಾಟೀಲ ಕೊರಳ್ಳಿ, ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ಮರಿಗೌಡರ ಮೊದಲಾದವರು ಪಾಲ್ಗೊಂಡು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಿದ್ದರು.

ಈಗ ಈ ಸ್ಥಳ ನಗರದ ಮಧ್ಯ ಭಾಗದಲ್ಲಿ ಇದ್ದರೂ ಆಗ ಹೊರ ಭಾಗದಲ್ಲಿತ್ತು. ಎರಡು ಎಕರೆ ಜಾಗದಲ್ಲಿ ತೋಟಗಾರಿಕೆ ಇಲಾಖೆಯಿಂದಲೇ ವನ ಅಭಿವೃದ್ಧಿಪಡಿಸಲಾಗಿತ್ತು. 12 ನೇ ಶತಮಾನದಲ್ಲಿ ಬಸವಣ್ಣನವರೊಂದಿಗೆ 770 ಅಮರ ಗಣಂಗಳು ಇದ್ದರು. ಆದ್ದರಿಂದ ವನದಲ್ಲಿ ಅಷ್ಟೇ ಸಂಖ್ಯೆಯ ಸಸಿಗಳನ್ನು ನೆಟ್ಟು ಪ್ರತಿಯೊಂದಕ್ಕೆ ಒಬ್ಬೊಬ್ಬ ಶರಣರ ಹೆಸರು ಇಡುವ ಯೋಜನೆ ರೂಪಿಸಲಾಗಿತ್ತು.

ವನದ ಮಧ್ಯದಲ್ಲಿ ಸುಂದರ ನಂದಿ ಮೂರ್ತಿ ಪ್ರತಿಷ್ಠಾಪಿಸಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಗಿತ್ತು. ಹುಲ್ಲು, ಹೂಗಿಡಗಳನ್ನು ಕೂಡ ಬೆಳೆಸಲಾಗಿತ್ತು. ಆದರೆ, ಕೆಲವೊಂದು ಗಿಡಗಳು ಬೆಳೆಯಲಿಲ್ಲ. ಮಳೆ ಅಭಾವದಿಂದ ನೀರು ಸಿಗದೆ ಕೆಲವೊಂದು ಸಲ ವನದ ಕೆಲ ಭಾಗ ಒಣಗಿತ್ತು. ಆದರೂ, ತೋಟಗಾರಿಕೆ ಇಲಾಖೆಯವರು ಮತ್ತೆ ಮತ್ತೆ ಪ್ರಯತ್ನಿಸಿ ಇದನ್ನು ಹಸಿರಾಗಿಡುವಲ್ಲಿ ಶ್ರಮಿಸಿದ್ದಾರೆ.

ಬರೀ ಗಿಡಗಳಷ್ಟೇ ಅಲ್ಲ; ಕೆಲ ವರ್ಷಗಳ ಹಿಂದೆ ಕಲ್ಲುಗಳನ್ನು ಹೊಂದಿಸಿ ಕಾರಂಜಿ ಹಾಗೂ ಇತರೆ ಆಕರ್ಷಕ ಪ್ರತಿಕೃತಿಗಳನ್ನು ಸಿದ್ಧಪಡಿಸಲಾಗಿದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಸುಂದರ ಪ್ರವೇಶದ್ವಾರ ನಿರ್ಮಿಸಲಾಗಿದೆ. ಸುತ್ತಲು ಆವರಣಗೋಡೆ ನಿರ್ಮಾಣ ಮಾಡಲಾಗಿದೆ. ಹೀಗಾಗಿ ವನವು ಇನ್ನಷ್ಟು ಸುಂದರವಾಗಿ ಕಂಗೊಳಿಸುತ್ತಿದೆ. ಅಲ್ಲದೆ, ರಾತ್ರಿ ವಿದ್ಯುತ್ ದೀಪಗಳ ವ್ಯವಸ್ಥೆ ಕೂಡ ಮಾಡಿದ್ದರಿಂದ ಪ್ರವಾಸಿಗರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುವಂತಾಗಿತ್ತು. ಕೊರೊನಾ ಕಾಲದಲ್ಲಿ ಮಾತ್ರ ಇಲ್ಲಿಗೆ ಬರುವವರ ಸಂಖ್ಯೆ ಕ್ಷೀಣಿಸಿದೆ.

‘ಬಸವ ವನವು ನಗರದ ಮಹತ್ವದ ಮತ್ತು ಐತಿಹಾಸಿಕ ಸ್ಥಳವಾಗಿದೆ. ಆದರೆ, ಬೇಸಿಗೆಯಲ್ಲಿ ನೀರಿನ ಅಭಾವದಿಂದ ಹುಲ್ಲು, ಗಿಡಗಳು ಒಣಗುತ್ತವೆ. ಆದ್ದರಿಂದ ಸಮರ್ಪಕ ನೀರಿನ ವ್ಯವಸ್ಥೆ ಕೈಗೊಳ್ಳಬೇಕು. ಇನ್ನೂ ಹೆಚ್ಚಿನ ಹೂ ಗಿಡಗಳನ್ನು ಬೆಳೆಸಿ, ಎಲ್ಲೆಡೆ ಹುಲ್ಲಿನ ಹೊದಿಕೆ ಇರುವಂತೆ ನೋಡಿಕೊಳ್ಳಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗಡಿನಾಡು ಪ್ರತಿನಿಧಿ ಬಸವಣ್ಣಪ್ಪ ನೆಲ್ಲಗಿ ಕೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT