ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಡಪದ ಅಪ್ಪಣ್ಣ ಸ್ಮಾರಕಕ್ಕಾಗಿ ಹೋರಾಟ ತೀವ್ರ

ತಂಡಗಗಿ ಅನ್ನದಾನಿ ಭಾರತಿ ಹಡಪದ ಅಪ್ಪಣ್ಣ ಸ್ವಾಮೀಜಿ ಹೇಳಿಕೆ
Published : 18 ಆಗಸ್ಟ್ 2024, 16:15 IST
Last Updated : 18 ಆಗಸ್ಟ್ 2024, 16:15 IST
ಫಾಲೋ ಮಾಡಿ
Comments

ಬಸವಕಲ್ಯಾಣ: ‘ಶರಣ ಹಡಪದ ಅಪ್ಪಣ್ಣನವರ ಸ್ಮಾರಕದ ಅಭಿವೃದ್ಧಿಗಾಗಿ ಹೋರಾಟ ತೀವ್ರಗೊಳಿಸುವುದು ನಿಶ್ಚಿತ. ಈ ಬಗ್ಗೆ ರೂಪುರೇಷೆ ಸಿದ್ಧಪಡಿಸಿ ರಾಜ್ಯದಲ್ಲಿನ ಸಮಾಜ ಬಾಂಧವರನ್ನು ಇಲ್ಲಿಗೆ ಕರೆತಂದು ಶಕ್ತಿ ಪ್ರದರ್ಶಿಸಲಾಗುವುದು’ ಎಂದು ತಂಗಡಗಿ ಹಡಪದ ಅಪ್ಪಣ್ಣ ಪೀಠಾಧ್ಯಕ್ಷ ಅನ್ನದಾನಿ ಭಾರತಿ ಹಡಪದ ಅಪ್ಪಣ್ಣ ಸ್ವಾಮೀಜಿ ಹೇಳಿದರು.

ನಗರದ ಬಸವೇಶ್ವರ ವೃತ್ತದಲ್ಲಿನ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಶರಣ ಹಡಪದ ಅಪ್ಪಣ್ಣನವರ 890 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವಣ್ಣನವರು ಇದ್ದಲ್ಲಿ ಹಡಪದ ಅಪ್ಪಣ್ಣನವರು ಇರುತ್ತಿದ್ದರು. ಅವರ ಆಪ್ತ ಕಾರ್ಯದರ್ಶಿಯಾಗಿ, ಹಿತೈಷಿಯಾಗಿ ಅವರೊಂದಿಗೆ ವಾಸಿಸುತ್ತಿದ್ದರು. ಹೀಗಾಗಿಯೇ ನಗರದ ಬಸವಣ್ಣನವರ ಅರಿವಿನ ಮನೆ ಪಕ್ಕದಲ್ಲಿಯೇ ಅಪ್ಪಣ್ಣನವರ ಗವಿಯಿದೆ. ಆದರೂ ಈಚೆಗೆ ಅಲ್ಲಿನ ನಾಮಫಲಕ ತೆಗೆದು ಅನ್ಯಾಯ ಮಾಡಲಾಗಿದೆ. ಪುನಃ ಅಲ್ಲಿಯೇ ಫಲಕ ಅಳವಡಿಸಿ ಗವಿಯ ಅಭಿವೃದ್ಧಿ ಕೈಗೊಳ್ಳಬೇಕು. ಅನೇಕ ವರ್ಷಗಳಿಂದ ಈ ಕುರಿತು ಹೋರಾಟ ನಡೆಸಿದರೂ ಪ್ರಯೋಜನ ಆಗಿಲ್ಲ. ಇನ್ನು ಮುಂದೆ ತಾಳ್ಮೆ ಕಳೆದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬಾರದು. ಹಡಪದ ಸಮಾಜದವರು ಇಷ್ಟಲಿಂಗ ಧರಿಸುತ್ತಾರೆ. ನಿಜವಾದ ಬಸವಭಕ್ತ ಆಗಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು’ ಎಂದರು.

ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಹಡಪದ ಅಪ್ಪಣ್ಣನವರ ಗವಿಯ ಜೀರ್ಣೋದ್ಧಾರಕ್ಕಾಗಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸುತ್ತೇನೆ’ ಎಂದರು.

ಹಡಪದ ಸಮಾಜ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಸಣ್ಣೂರು ಮಾತಣಾಡಿ, ‘ಹಡಪದ ಸಮಾಜ ಹಿಂದುಳಿದಿದ್ದರೂ ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿದೆ. ಆದರೂ, ಸರ್ಕಾರ ನೀಡಿರುವ ಭರವಸೆಗಳು ಈಡೇರಿಲ್ಲ. ವಿವಿಧ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಆಗ್ರಹಿಸಿದರು.

ಬೆಲ್ದಾಳ ಸಿದ್ದರಾಮ ಶರಣರು, ಹರಳಯ್ಯ ಪೀಠಾಧ್ಯಕ್ಷೆ ಅಕ್ಕ ಗಂಗಾಂಬಿಕಾ, ದತ್ತಾತ್ರಿ ಮೂಲಗೆ, ಶಿವರಾಜ ನೀಲಕಂಠೆ, ಬಸವರಾಜ ಕರಹರಿ, ನವಲಿಂಗಕುಮಾರ ಪಾಟೀಲ ಮಾತನಾಡಿದರು.

ಬಸವ ಮಹಾಮನೆ ಪೀಠಾಧ್ಯಕ್ಷ ಸಿದ್ಧರಾಮೇಶ್ವರ ಸ್ವಾಮೀಜಿ, ಹುಲಸೂರು ಶಿವಾನಂದ ಸ್ವಾಮೀಜಿ, ಮಂಠಾಳ ಅಭಿನವ ಚನ್ನಬಸವ ಸ್ವಾಮೀಜಿ, ಡಾ.ಬಸವರಾಜ ಪಂಡಿತ್, ಪ್ರದೀಪ ವಾತಡೆ, ಸಮಾಜ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಮೃತ ಹಡಪದ, ಪ್ರಮುಖರಾದ ಅಮರನಾಥ ಸೋಲಪುರೆ, ಸೋನಾಲಿ ನೀಲಕಂಠೆ, ಪಾಂಡುರಂಗ ಗದ್ಲೇಗಾಂವ, ದತ್ತಾತ್ರಿ ಬಾಂದೇಕರ್, ಶ್ರೀನಾಥ ದಾವಲಜಿ, ಜಗದೀಶ ನೆಲವಾಡಕರ್, ಶರಣಪ್ಪ ಬಾಲ್ಕುಂದಾ, ವಿಶ್ವನಾಥ ಮಂಠಾಳ, ಸದಾನಂದ ಮಂಠಾಳ, ಸುಮಿತ್ರಾ ದಾವಣಗಾವೆ, ಮಹಾದೇವಿ ಮೂಲಗೆ ಪಾಲ್ಗೊಂಡಿದ್ದರು.

ಧೂಳಪ್ಪ ಹಡಪದ ಮುಡಬಿ ಅವರಿಂದ ಸಂಗೀತ ಪ್ರಸ್ತುತಪಡಿಸಲಾಯಿತು. ಕಾರ್ಯಕ್ರಮದ ಮೊದಲು ಬಸವೇಶ್ವರ ದೇವಸ್ಥಾನದಿಂದ ಮುಖ್ಯ ರಸ್ತೆಯ ಮೂಲಕ ವಚನ ಗ್ರಂಥಗಳನ್ನು ತಲೆಮೇಲೆ ಹೊತ್ತುಕೊಂಡು ಮೆರವಣಿಗೆ ನಡೆಸಲಾಯಿತು. ಸಾಧಕರನ್ನು ಸನ್ಮಾನಿಸಲಾಯಿತು.

ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಶರಣ ಹಡಪದ ಅಪ್ಪಣ್ಣನವರ ಜಯಂತಿಯ ಮೆರವಣಿಗೆಗೆ ತಂಗಡಗಿ ಅನ್ನದಾನಿ ಭಾರತಿ ಸ್ವಾಮೀಜಿ ಚಾಲನೆ ನೀಡಿದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಶರಣ ಹಡಪದ ಅಪ್ಪಣ್ಣನವರ ಜಯಂತಿಯ ಮೆರವಣಿಗೆಗೆ ತಂಗಡಗಿ ಅನ್ನದಾನಿ ಭಾರತಿ ಸ್ವಾಮೀಜಿ ಚಾಲನೆ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT