ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ | ಮೂರು ದಿನಗಳಿಂದ ಬಿಸಿಯೂಟ ಬಂದ್: ಅಧಿಕಾರಿಗೆ ಶಾಸಕ ತರಾಟೆ

ಮುಖ್ಯಶಿಕ್ಷಕಿ, ಬಿಸಿಯೂಟ
Last Updated 22 ಜುಲೈ 2022, 5:17 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಬಟಗೇರಾದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡದ ಕಾರಣ ವಿದ್ಯಾರ್ಥಿಗಳು ಉಪವಾಸ ಇದ್ದುದನ್ನು ಕಂಡ ಶಾಸಕ ಶರಣು ಸಲಗರ ಕೆಂಡಾಮಂಡಲವಾಗಿ ಮುಖ್ಯಶಿಕ್ಷಕಿ ಹಾಗೂ ಬಿಸಿಯೂಟದ ಅಧಿಕಾರಿಯನ್ನು ಮೊಬೈಲ್ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡರು.

ಶಾಸಕರು ಗುರುವಾರ ಶಾಲೆಗೆ ದಿಢೀರ್ ಭೇಟಿ ನೀಡಿದರು. ಅಲ್ಲಿ ವಿದ್ಯಾರ್ಥಿಗಳು ಬಿಸಿಯೂಟ ಇಲ್ಲದೆ ಉಪವಾಸ ಇರುವುದನ್ನು ಕಂಡು ಅವರಿಗೆ ಬಿಸ್ಕತ್ತು ವಿತರಿಸಿದರಲ್ಲದೆ ಸ್ವಂತ ಖರ್ಚಿನಿಂದ ಊಟದ ವ್ಯವಸ್ಥೆ ಮಾಡಿದರು.

‘ಶಾಲೆಯಲ್ಲಿ ಯಾವಾಗಲೂ ಅವ್ಯವಸ್ಥೆ ಇರುತ್ತದೆ. ಮೂರು ದಿನಗಳಿಂದ ಶಾಲೆಯಲ್ಲಿ ಊಟ ನೀಡಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸುತ್ತಲಿನ ಹತ್ತರ್ಗಾ, ಚಿತ್ತಕೋಟಾ, ಗಿಲಗಿಲಿ, ಬಟಗೇರಾವಾಡಿ ಹೀಗೆ 7 ಗ್ರಾಮಗಳ ಮಕ್ಕಳು ಇಲ್ಲಿಗೆ ಬರುತ್ತಾರೆ. ಅಕ್ಕಿ ಇಲ್ಲದಿದ್ದಾಗ ನಮಗೆ ತಿಳಿಸಿದರೆ ನಾವೇ ಊಟದ ವ್ಯವಸ್ಥೆ ಮಾಡುತ್ತೇವೆ ಎಂದರೂ ಮುಖ್ಯಶಿಕ್ಷಕಿ ನಮ್ಮ ಮಾತು ಕೇಳುತ್ತಿಲ್ಲ. ಪಂಚಾಯಿತಿ ಸದಸ್ಯರು ಮತ್ತು ಅಭಿವೃದ್ಧಿ ಅಧಿಕಾರಿ ಕೆಲ ದಿನಗಳ ಹಿಂದೆ ಶಾಲೆಗೆ ಭೇಟಿ ನೀಡಿ ಪರಿಸ್ಥಿತಿ ಸುಧಾರಿಸಲು ಕೇಳಿಕೊಂಡರೂ ಪ್ರಯೋಜನ ಆಗಿಲ್ಲ’ ಎಂದು ಗ್ರಾಮಸ್ಥರು ಶಾಸಕರಿಗೆ ದೂರು ನೀಡಿದರು.

ಇದೆಲ್ಲವನ್ನೂ ಕೇಳಿ ಕುಪಿತಗೊಂಡ ಶಾಸಕರು ಮುಖ್ಯಶಿಕ್ಷಕಿ ಮತ್ತು ಬಿಸಿಯೂಟದ ಅಧಿಕಾರಿಯನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಎಲ್ಲೆಡೆ ಬಿಸಿಯೂಟ ಕೊಡುತ್ತಿರುವಾಗ ಈ ಶಾಲೆಯಲ್ಲೇ ಏಕೆ ಊಟ ನೀಡಿಲ್ಲ ಎಂದು ವಿಚಾರಿಸಿದರು.

ನಂತರ ಶಿಕ್ಷಣ ಇಲಾಖೆ ಉಪ ನಿರ್ದೇಶಕರನ್ನು ಸಂಪರ್ಕಿಸಿ,‘ನಾನು ಮೂರು ಸಲ ಈ ಶಾಲೆಗೆ ಭೇಟಿ ನೀಡಿದ್ದೇನೆ. ಒಮ್ಮೆಯೂ ಮುಖ್ಯಶಿಕ್ಷಕಿ ಹಾಜರಿರಲಿಲ್ಲ. ಮೂರು ದಿನಗಳಿಂದ ಸತತವಾಗಿ ಬಿಸಿಯೂಟ ನೀಡಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮುಖ್ಯಶಿಕ್ಷಕಿ ಯಾವಾಗಲೂ ನಿಷ್ಕಾಳಜಿ ತೋರುತ್ತಾರೆ. ಈ ಕುರಿತು ಮೊಬೈಲ್‌ ಕಾನ್ಫರೆನ್ಸ್ ಕಾಲ್ ಮೂಲಕ ಸಂಪರ್ಕಿಸಿದರೆ ಮುಖ್ಯಶಿಕ್ಷಕಿ ಹಾಗೂ ಬಿಸಿಯೂಟದ ಅಧಿಕಾರಿ ಮಕ್ಕಳು ಕಚ್ಚಾಡಿದಂತೆ ಮಾತನಾಡುತ್ತಿದ್ದಾರೆ. ಆದ್ದರಿಂದ ಈ ಸಮಸ್ಯೆಗೆ ಈ ಇಬ್ಬರನ್ನೂ ಜವಾಬ್ದಾರರನ್ನಾಗಿ ಮಾಡಿ ತಕ್ಷಣ ನೋಟಿಸ್ ಜಾರಿಗೊಳಿಸಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಸೂಚಿಸಿದರು.

ತಹಶೀಲ್ದಾರ್ ಸಾವಿತ್ರಿ ಸಲಗರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ ಗೌಡೆ, ಉಪಾಧ್ಯಕ್ಷ ಜ್ಯೋತಿಬಾ ಸಾಳುಂಕೆ, ಅಭಿವೃದ್ಧಿ ಅಧಿಕಾರಿ ಕೆ.ಆನಂದ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಜ್ಞಾನೇಶ್ವರ ಮುಳೆ, ಮುಖಂಡ ಬಸವರಾಜಸ್ವಾಮಿ, ಶಿವಾಜಿ ಭುರೆ, ಶಿವಶರಣಪ್ಪ ಗೌಡೆ, ಮಲ್ಲಿಕಾರ್ಜುನ ಜಮಾದಾರ, ಪ್ರಕಾಶ ಜಾಧವ, ಅಣ್ಣೆಪ್ಪ ನವಣೆ, ಶರಣು ಮಹಾಲಿಂಗಗೋಳ, ದಯಾನಂದ ಹಾಗೂ ಬಸವರಾಜ ಸೇರಿ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT