ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಸುಳಿಯಲ್ಲಿ ಗಾಂಧಿಗ್ರಾಮ ಪುರಸ್ಕಾರದ 'ಚಂಡಕಾಪುರ’

Last Updated 9 ನವೆಂಬರ್ 2021, 5:36 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಚಂಡಕಾಪುರ ಗ್ರಾಮವು ‘ಗಾಂಧಿಗ್ರಾಮ ಪುರಸ್ಕಾರ’ (2019–20) ಪಡೆದಿದ್ದರೂ ಕೆಲವು ಸೌಲಭ್ಯಗಳಿಂದ ವಂಚಿತವಾಗಿದೆ.

ಗ್ರಾಮದ ಕೆಲವು ಓಣಿಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಗೃಹ ಬಳಕೆಯ ನೀರು ರಸ್ತೆಯ ಮೇಲೆ ಹರಿದಾಡುತ್ತಿದೆ. ಸಿಸಿ ರಸ್ತೆ ಇಲ್ಲದೆ ರಸ್ತೆಗಳು ಕೆಸರು ಗದ್ದೆಯಂತೆ ಬದಲಾಗಿವೆ.

ಗ್ರಾಮ ಪಂಚಾಯಿತಿಯು ₹ 24 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡುತ್ತಿದೆ. ಆದರೆ, ಗ್ರಾಮದ ಅನೇಕ ಕಡೆ ಸಿಸಿ ರಸ್ತೆ ಹಾಗೂ ಚರಂಡಿ ವ್ಯವಸ್ಥೆಯೇ ಇಲ್ಲ. ಹೀಗಾಗಿ, ಪ್ರತಿ ಮನೆಗೂ ಶೌಚಾಲಯದ ವ್ಯವಸ್ಥೆ ಇದ್ದರೂ ಕೊಳಚೆ ನೀರಿನಿಂದ ರಸ್ತೆಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.

ಇಂದಿರಾನಗರ ಓಣಿಯಿಂದ ಪ್ರಸಿದ್ಧ ಅಮೃತಕುಂಡ ದೇವಸ್ಥಾನದ ಕಚ್ಚಾ ರಸ್ತೆಯು ಸ್ವಲ್ಪವೇ ಮಳೆ ಬಿದ್ದರೂ ಕೆಸರುಮಯವಾಗಿ ಬದಲಾಗುತ್ತದೆ. ಸಿಸಿ ರಸ್ತೆ ನಿರ್ಮಾಣ ಮಾಡುವಂತೆ ನಿವಾಸಿಗಳು ಬಹುದಿನಗಳಿಂದ ಬೇಡಿಕೆ ಇರಿಸಿದ್ದಾರೆ. ಇದುವರೆಗೂ ಅವರ ಬೇಡಿಕೆಗೆ ಯಾರೂ ಸ್ಪಂದಿಸಿಲ್ಲ ಎನ್ನುತ್ತಾರೆ ಸ್ಥಳೀಯರು,

ಮನೆಗಳಲ್ಲಿ ಶೌಚಾಲಯ ಇದ್ದರೂ ಕೆಲವರು ಬಯಲು ಬಹಿರ್ದೆಸೆಗೆ ತೆರಳುತ್ತಾರೆ. ಗ್ರಾಮದ ಸುತ್ತಲಿನ ಪರಿಸರ ದುರ್ನಾತ ಬೀರುತ್ತದೆ. ನೊಣ, ಸೊಳ್ಳೆಗಳ ಕಾಟ ಹೆಚ್ಚುತ್ತಿದೆ. ಸಾಮೂಹಿಕ ಶೌಚಾಲಯ ನಿರ್ಮಾಣ ಮಾಡಿ ಇದಕ್ಕೆಲ್ಲ ಅಂತ್ಯವಾಡಬೇಕು ಎನ್ನುತ್ತಾರೆ ಗ್ರಾಮಸ್ಥ ಮಾರುತಿರಾವ.

ಅಂಗನವಾಡಿ ಕೇಂದ್ರ, ಗ್ರಾಮ ಪಂಚಾಯಿತಿ ಸಂಪರ್ಕಿಸಲು ಸಮರ್ಕಪಕವಾದ ರಸ್ತೆ ಇಲ್ಲ. ಸುಗಮ ಓಡಾಟಕ್ಕೆ ಈ ಮಾರ್ಗಗಳಲ್ಲಿ ಸಿಸಿ ರಸ್ತೆ ನಿರ್ಮಿಸಬೇಕು. ಭೀಮನಗರ ಹಾಗೂ ಪರಿಶಿಷ್ಟ ಪಂಗಡದವರ ಓಣಿಯಲ್ಲಿಯೂ ಕೆಲವೆಡೆ ಸಿಸಿ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಮಾಡಬೇಕು ಎಂದು ಬೀರೇಶ ಒತ್ತಾಯಿಸಿದರು.

ಗ್ರಾಮದ ಎಲ್ಲ ಕಡೆಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೇ 100ರಷ್ಟು ಶೌಚಾಲಯ ಕಟ್ಟಿಸುವ ಗುರಿ ಸಾಧಿಸಲಾಗಿದೆ. ಆದರೂ, ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೂ ಪ್ರಯತ್ನಿಸಲಾಗುವುದು ಎಂದು ಪಿಡಿಒ ಚಂದ್ರಾಮ ಧೂಳಖೇಡ ಹೇಳಿದರು.

ಡಿಜಿಟಲ್ ಗ್ರಂಥಾಲಯ

ಗ್ರಾಮ ಪಂಚಾಯಿತಿಯಿಂದ 14ನೇ ಹಣಕಾಸು ಯೋಜನೆ ಯಲ್ಲಿ ಈಚೆಗೆ ಡಿಜಿಟಲ್ ಗ್ರಂಥಾಲಯ ತೆರೆಯಲಾಗಿದೆ. ಸಾವಿರಕ್ಕೂ ಅಧಿಕ ಗ್ರಂಥಗಳಿವೆ. ನಾಲ್ಕು ಕಂಪ್ಯೂಟರ್ ಇದ್ದು, ಅಂತರ್ಜಾಲದ ಮೂಲಕ 2 ಲಕ್ಷ ಡಿಜಿಟಲ್‌ ಪುಸ್ತಕಗಳನ್ನು ಓದುವ ವ್ಯವಸ್ಥೆ ಇದೆ.

ಈಚೆಗೆ ಶಾಸಕ ಶರಣು ಸಲಗರ ಅವರು ಹೈಟೆಕ್ ಅಂಗನವಾಡಿ ಕೂಡ ಉದ್ಘಾಟಿಸಿದ್ದಾರೆ. ಈ ಕಟ್ಟಡದಲ್ಲಿ ಉತ್ತಮ ಅಡುಗೆ ಕೊಠಡಿ, ಆಟಿಕೆ ಸಾಮಾನು, ಆಸನ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲವೂ ಇದೆ. ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲು ಟಿವಿ ಹಾಕಲಾಗಿದೆ. ಇಂತಹುದ್ದೇ ಮತ್ತೊಂದು ಅಂಗನವಾಡಿ ನಿರ್ಮಿಸಲಾಗುವುದು ಎನ್ನುತ್ತಾರೆ ಪಂಚಾಯಿತಿ ಅಧಿಕಾರಿಗಳು.

*ಹೊಸ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಸಭಾಂಗಣ ನಿರ್ಮಾಣಕ್ಕೆ ಅನುದಾನ ಒದಗಿಸುವುದಾಗಿ ಶಾಸಕ ಶರಣು ಸಲಗರ ಭರವಸೆ ನೀಡಿದ್ದಾರೆ, ಚಂದ್ರಾಮ ಧೂಳಖೇಡ, ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT