ಭಾನುವಾರ, ಆಗಸ್ಟ್ 14, 2022
28 °C
ಬಸವಕಲ್ಯಾಣ ತಾಲ್ಲೂಕಿನಲ್ಲಿ ಮುಂಗಾರು ಮಳೆ ಉತ್ತಮ; ಹಸಿಯಾದ ಜಮೀನು

ಬಿತ್ತನೆ ಆರಂಭವಾದರೂ ಬೀಜಕ್ಕಾಗಿ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ಮುಂಗಾರು ಹಂಗಾಮಿನ ಮಳೆ ಉತ್ತಮ ಆಗಿದ್ದರಿಂದ ತಾಲ್ಲೂಕಿನ ಕೆಲ ಭಾಗದಲ್ಲಿ ಬಿತ್ತನೆ ಆರಂಭ ಆಗಿದೆ. ಆದರೆ, ರೈತ ಸಂಪರ್ಕ ಕೇಂದ್ರಗಳಲ್ಲಿ ಸೋಯಾಬೀನ್ ಬಿತ್ತನೆ ಬೀಜ ದೊರಕದೆ ರೈತರು ಪರದಾಡುವಂತಾಗಿದೆ.

ಜೂನ್‌ನಲ್ಲಿ ಎರಡು ಸಲ ಮಳೆ ಬಂತು. ಎರಡನೇ ಸಲ ಸುರಿದ ಮಳೆಗೆ ಕೆಂಪು ಮಣ್ಣಿನ ಪ್ರದೇಶವಾದ ಮಂಠಾಳ ಹೋಬಳಿ ಹಾಗೂ ಇತರೆಡೆ ಜಮೀನು ಹಸಿಯಾಗಿದೆ. ಹೀಗಾಗಿ ಶೇ 20ರಷ್ಟು ರೈತರು ನಾಲ್ಕು ದಿನಗಳಿಂದ ಬಿತ್ತನೆ ಕೈಗೊಂಡಿದ್ದಾರೆ.

ಆದರೆ, ಮಂಠಾಳ, ಮುಡಬಿ, ಕೊಹಿನೂರ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜದ ಕೊರತೆಯಿದೆ ಎಂದು ದಿಢೀರನೆ ಬೀಜ ವಿತರಣೆ ನಿಲ್ಲಿಸಿದ್ದರಿಂದ ರೈತರಿಗೆ ತೊಂದರೆ ಆಗಿದೆ.

ಖಾಸಗಿ ಅಂಗಡಿಗಳಲ್ಲಿ ₹1000 ಹೆಚ್ಚಿನ ಬೆಲೆಗೆ ಬೀಜ ದೊರಕುತ್ತಿದೆ. ಆದ್ದರಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ನೂಕುನುಗ್ಗಲು ಆಗುತ್ತಿದೆ. ಹೀಗಾಗಿ ಖಾಸಗಿಯವರ ವ್ಯಾಪಾರ ನಿಂತು ಹೋಗಿದೆ. ಅವರಿಗೆ ಸಹಕರಿಸುವುದಕ್ಕೆ ಹೀಗೆ ಬೇಕೆಂತಲೇ ಕೆಲವೆಡೆ ಬೀಜದ ಅಭಾವ ಸೃಷ್ಟಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಮಳೆ ಬೀಳುವ ಮೊದಲು ಬಿತ್ತನೆ ಬೀಜ ಪೂರೈಕೆ ಮಾಡಬೇಕು ಎಂದು ರೈತರು ಆಗ್ರಹಿಸಿದರೂ ಸಮಸ್ಯೆ ಬಗೆಹರಿದಿಲ್ಲ.

‘ತಾಲ್ಲೂಕಿನ ಮಂಠಾಳ ಹಾಗೂ ಮುಡಬಿ ಹೋಬಳಿಗಳಲ್ಲಿ ಬಿತ್ತನೆ ಬೀಜ ವಿತರಣೆ ಆಗುತ್ತಿಲ್ಲ. ಈ ಕಾರಣ ರೈತರು ನಿತ್ಯ ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ ವಾಪಸು ಬರುತ್ತಿದ್ದಾರೆ. ನಾಲ್ಕು ದಿನಗಳಿಂದ ಹೆಸರು ನೋಂದಣಿ ಮಾಡಿಕೊಂಡು ಬರೀ ಟೋಕನ್ ನೀಡಲಾಗುತ್ತಿದೆ. ಬೀಜದ ದಾಸ್ತಾನು ಮುಗಿದಿದ್ದರಿಂದ ವಿತರಣೆ ನಿಲ್ಲಿಸಲಾಗಿದೆ. ಎಲ್ಲೆಡೆ ಪ್ರಮಾಣೀಕೃತ ಬೀಜದ ಅಭಾವವಿದೆ. ಅಂತಹ ಬೀಜ ಪೊರೈಕೆಯಾದ ನಂತರ ರೈತರಿಗೆ ಹಂಚುತ್ತೇವೆ ಎಂಬುದು ಕೃಷಿ ಅಧಿಕಾರಿಗಳ ಸ್ಪಷ್ಟಿಕರಣವಾಗಿದೆ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ಸಂತೋಷಕುಮಾರ ಗುದಗೆ ಹೇಳುತ್ತಾರೆ.

‘ಖಾಸಗಿ ಅಂಗಡಿಗಳಲ್ಲಿ ಅಗತ್ಯವಿದ್ದಷ್ಟು ಸೋಯಾಬೀನ್ ಬಿತ್ತನೆ ಬೀಜ ದೊರಕುತ್ತಿರುವಾಗ ರೈತ ಸಂಪರ್ಕ ಕೇಂದ್ರಗಳಲ್ಲೇಕೆ ಬೀಜ ಇಲ್ಲ ಎಂದು ಕೃಷಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅದಕ್ಕೆ ಸಮರ್ಪಕವಾದ ಉತ್ತರ ಸಿಗುತ್ತಿಲ್ಲ. ಹೀಗಾಗಿ ಭೂಮಿ ಹಸಿಯಾದರೂ ಕೆಲವರು ಬಿತ್ತನೆ ಕೈಗೊಂಡಿಲ್ಲ. ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರೆದರೆ ಧರಣಿ ನಡೆಸಲಾಗುತ್ತದೆ’ ಎಂದೂ ಅವರು ಎಚ್ಚರಿಸಿದ್ದಾರೆ.

‘ಈಗಾಗಲೇ ಸಾಕಷ್ಟು ಸೋಯಾಬೀನ್ ಬೀಜ ವಿತರಿಸಲಾಗಿದೆ. ಇನ್ನೂ ಹೆಚ್ಚಿನ ಬೀಜದ ಬೇಡಿಕೆ ಇರುವ ಕಾರಣ ಈ ಬಗ್ಗೆ ಸಂಬಂಧಿತರಿಗೆ ತಿಳಿಸಲಾಗಿದ್ದು, ಒಂದೆರಡು ದಿನದಲ್ಲಿ 500 ಕ್ವಿಂಟಲ್ ಬೀಜ ಪೂರೈಕೆ ಆಗಲಿದೆ. ಬೀಜ ದೊರಕದೆ ಯಾರೂ ತೊಂದರೆ ಅನುಭವಿಸದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೀರಶೆಟ್ಟಿ ರಾಠೋಡ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.