ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕೋಟಾ ಜಲಾಶಯ ಭರ್ತಿ

Last Updated 16 ಸೆಪ್ಟೆಂಬರ್ 2020, 3:32 IST
ಅಕ್ಷರ ಗಾತ್ರ

ಕಮಲಾಪುರ: ತಾಲ್ಲೂಕಿನಾದ್ಯಂತ ರಾತ್ರಿಯಿಡೀ ಮಳೆ ಸುರಿದಿದ್ದು, ನದಿ, ಹಳ್ಳ, ನಾಲೆಗಳೆಲ್ಲ ತುಂಬಿ ಹರಿದಿವೆ. ಕೆರೆ, ಕಟ್ಟೆ, ಜಲಾಶಯಗಳು ಭರ್ತಿಯಾಗಿದ್ದು, ಜಮೀನುಗಳು ಜಲಾವೃತಗೊಂಡಿವೆ.

ಸೋಮವಾರ ರಾತ್ರಿ ಕಮಲಾಪುರ 143.7 ಮಿ.ಮೀ, ಮಹಾಗಾಂವ 140, ಮಹಾಗಾಂವ ಕ್ರಾಸ್ 153 ಅವರಾದ 98.2 ಮಿ.ಮೀ ಮಳೆಯಾಗಿದೆ. ಧಾರಕಾರ ಮಳೆಗೆ ಹಳ್ಳ-ಕೊಳ್ಳ, ಗುಡ್ಡ-ಬೆಟ್ಟಗಳಿಂದ ನೀರು ಹರಿದಿದ್ದು, ಅಳಿದುಳಿದ ಬೆಳೆ ತೇವಾಂಶ ಹೆಚ್ಚಾಗಿ ಕೊಳೆಯುವ ಹಂತದಲ್ಲಿದೆ. ಕೆಲವು ಕಡೆ ಪ್ರವಾಹಕ್ಕೆ ಕೊಚ್ಚಿಹೋಗಿದ್ದು ವರದಿಯಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಚಂದ್ರಕಾಂತ ಜೀವಣಗಿ ತಿಳಿಸಿದರು.

ಅಂಗಡಿಗಳಿಗೆ ನುಗ್ಗಿದ ನೀರು: ಕಮಲಾಪುರ ಪಟ್ಟಣದಲ್ಲಿ ಅಂಗಡಿಗಳಿಗೆ ನೀರು ನುಗ್ಗಿ ಕೆಲವು ಕಡೆಗಳಲ್ಲಿ ಹಾನಿಯಾಗಿದೆ. ನೀರು ಹೊಕ್ಕಿದ್ದರಿಂದ ಜೆರಾಕ್ಸ್ ಮಷಿನ್, ಕಂಪೂಟರ್, ಪ್ರಿಂಟರ್ ಸೇರಿದಂತೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಹಾನಿಯಾಗಿವೆ.

ಬೆಳಕೋಟಾ ಜಲಾಶಯ ಭರ್ತಿ:ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು ಒಳ ಹರಿವು ಹೆಚ್ಚಾಗಿ ಜಲಾಶಯದಲ್ಲಿ ನೀರು ಗರಿಷ್ಠ ಮಟ್ಟ ತಲುಪಿದೆ. 2,000 ಕ್ಯುಸೆಕ್‌ ಒಳ ಹರಿವಿದ್ದು, ಮಂಗಳವಾರ ಬೆಳಿಗ್ಗೆ 3,300 ಕ್ಯುಸೆಕ್‌, ಮಧ್ಯಾಹ್ನ 2,500 ಕ್ಯುಸೆಕ್‌ ನೀರು ಹೊರ ಬಿಡಲಾಗಿದೆ.

ಜಲಾಶಯಕ್ಕೆ 8 ಗೇಟ್‍ಗಳಿದ್ದು, 5 ಗೇಟ್‍ಗಳನ್ನು 1 ಅಡಿ ಎತ್ತಲಾಗಿದೆ. ಜಲಾಶಯದ ಗರಿಷ್ಠ ಮಟ್ಟ 1.887 ಟಿಎಂಸಿ ಇದ್ದು ಸದ್ಯ 1.822 ಟಿಎಂಸಿ ನೀರಿನ ಸಂಗ್ರಹವಿದೆ. ಮಳೆ ಕಡಿಮೆಯಾದರೆ ಹೊರ ಹರಿವು ಕಡಿಮೆ ಮಾಡುವುದಾಗಿ ಜಲಾಶಯದ ಕಿರಿಯ ಎಂಜಿನಿಯರ್‌ ಶ್ರೀಕಾಂತ ತಿಳಿಸಿದ್ದಾರೆ.

ಅಪಾರ ಬೆಳೆ ಹಾನಿ: ಜಲಾಶಯದ ಹೊರ ಹರಿವಿನಿಂದ ದಸ್ತಾಪುರ, ಮಹಾಗಾಂವ, ಕುರಿಕೋಟಾ ಗ್ರಾಮದ ಜಮೀನುಗಳಲ್ಲಿನ ಕಬ್ಬು, ಬಾಳೆ, ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳು ಕೊಚ್ಚಿಹೋಗಿವೆ. ಜಮೀನುಗಳಲ್ಲಿ ಮಣ್ಣಿನ ಸವಕಳಿಯಾಗಿ ಭೂಮಿ ಬರಡಾಗಿದೆ ಎಂದು ರೈತರು ಅಳಲು ತೋಡಿಕೊಂಡರು.

ಮಹಾಗಾಂವ ಸೇತುವೆ ಮೇಲೆ ಪ್ರವಾಹ: ಬೆಳಕೋಟಾ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಮಹಾಗಾಂವ ಸೇತುವೆ ಮೇಲೆ ಪ್ರವಾಹ ಉಂಟಾಗಿದೆ. ಆಳಂದ, ಬಸವಕಲ್ಯಾಣ, ಮಹಾರಾಷ್ಟ್ರದ ಉಮಾರ್ಗಾಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಜಲಾಶಯದ ಹೊರ ಹರಿವು ಕಡಿಮೆಯಾದರೆ ಮಾತ್ರ ಪ್ರವಾಹ ತಗ್ಗಲಿದ್ದು ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಸಿಪಿಐ ಶಂಕರ್ ಗೌಡ ಪಾಟೀಲ ತಿಳಿಸಿದರು.

ನವನಿಹಾಳ, ದಸ್ತಾಪುರ, ಜಂಬಗಾ, ಓಕಳಿ-ವರನಾಳ ಮತ್ತಿತರ ಗ್ರಾಮಗಳ ಸೇತುವೆಗಳ ಮೇಲೂ ಪ್ರವಾಹ ಉಂಟಾಗಿದೆ. ಸಂಪರ್ಕ ಕಡಿತಗೊಂಡಿದೆ. ಪ್ರವಾಹ ಉಂಟಾಗಿರುವ ಎಲ್ಲೆಡೆ ಸಂಚರಿಸಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸಂಚಾರ ತಡೆಯಲು ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ ಎಂದರು.

ಅಳ್ಳಿಹಳ್ಳಕ್ಕೆ ಪ್ರವಾಹದಿಂದಾಗಿ ರಾಷ್ಟ್ರೀಯ ಹೆದ್ದಾರಿ 218 ರ ಅವರಾದ (ಬಿ) ಬಳಿಯ ಸೇತುವೆ ಎರಡು ಬದಿಯ ಮಣ್ಣು, ಮುರುಮ್ ಕೊಚ್ಚಿಹೋಗಿದೆ. ನೀರಿನ ರಭಸಕ್ಕೆ ಹೆದ್ದಾರಿ ಕೆಳೆಗೆ ಕೋರೆ ಕೋರೆದಿದಿ. ಈ ರಸ್ತೆಮೇಲೆ ವಾಹನ ಸಂಚರಿಸದರೆ ಬೀಳುವ ಸಂಭವವಿದೆ. ಹೀಗಾಗಿ ಒಂದೆ ಬದಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಹಳ್ಳದ ಪಕ್ಕದ ಸಾವಿರಾರು ಎಕರೆ ಜಮೀನಿನಲ್ಲಿ ಕೆರೆಯಂತೆ ನೀರು ಆವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT