ಭಾಲ್ಕಿ: ಪಟ್ಟಣದ ರಸ್ತೆಗಳ ಅಕ್ಕ–ಪಕ್ಕ, ರಸ್ತೆ ವಿಭಜಕಗಳಲ್ಲಿ ನೆಟ್ಟಿರುವ ಗಿಡಗಳು ಎಲ್ಲೆಡೆ ಹಸಿರು ವಾತಾವರಣ ಸೃಷ್ಟಿಸಿದ್ದು, ನೋಡುಗರಿಗೆ, ದಾರಿ ಹೋಕರಿಗೆ ನೆರಳಿನೊಂದಿಗೆ ಆಹ್ಲಾದಕರ ಅನುಭವ ನೀಡುತ್ತಿವೆ.
ಚನ್ನಬಸವಾಶ್ರಮದ ಹಿಂಬದಿಯ ಕೆರೆಯ ಸುತ್ತ, ಲೋಕೋಪಯೋಗಿ ಇಲಾಖೆ, ತಹಶೀಲ್ದಾರ್ ಕಚೇರಿ, ಡಿವೈಎಸ್ಪಿ ಕಚೇರಿ, ನಗರ, ಗ್ರಾಮೀಣ ಪೊಲೀಸ್ ಠಾಣೆ, ತಾಲ್ಲೂಕು ಪಂಚಾಯಿತಿ ಆವರಣ, ಅಗ್ನಿ ಶಾಮಕ ಠಾಣೆಯಲ್ಲಿ ಅಧಿಕಾರಿಗಳ ಆಸಕ್ತಿ, ಅರಣ್ಯಾಧಿಕಾರಿಗಳ ಸಹಕಾರದ ಫಲವಾಗಿ ಪಟ್ಟಣದಲ್ಲಿ ಹಸಿರ ಸಿರಿ ಹೆಚ್ಚಿದೆ.
ಇವುಗಳಿಗೆ ಕಳಸಪ್ರಾಯದಂತೆ ಅನುಭವ ಮಂಟಪದ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರ ಆಸಕ್ತಿ ಫಲವಾಗಿ ಚನ್ನಬಸವ ಪಟ್ಟದ್ದೇವರ ಸಮಾಧಿ ಸ್ಥಳವಾದ ಚನ್ನಬಸವಾಶ್ರಮದಲ್ಲಿ ಸಾವಿರಾರು ಗಿಡಗಳ ಹಸಿರು ನಳನಳಿಸುತ್ತಿದೆ. ಉಪನ್ಯಾಸಕರ ಬಡಾವಣೆ, ಸಿದ್ದಾರ್ಥ ಕಾಲೊನಿ, ಹಳೇ ಪಟ್ಟಣ ಸೇರಿದಂತೆ ಬಹುತೇಕ ಎಲ್ಲೆಡೆಯ ಸುಮಾರು 25 ಸಾವಿರ ಗಿಡಗಳು ಭಾಲ್ಕಿಯನ್ನು ಹಸಿರಿನ ನಂದನವನ ಆಗಿ ನಿರ್ಮಿಸಿವೆ.
ರಸ್ತೆ ಬದಿ ಸಮೃದ್ಧವಾಗಿ ಬೆಳೆಯುತ್ತಿರುವ ಬೇವು ಸೇರಿದಂತೆ ಇತರ ಗಿಡಗಳು ಅಂಗಡಿಗಳ ಮಾಲೀಕರು ಮತ್ತು ಗ್ರಾಹಕರಿಗೆ ನಿತ್ಯ ತಂಪಿನ ಅನುಭವ ನೀಡುತ್ತಿವೆ ಎಂದು ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ವಸಂತ ಹುಣಸನಾಳೆ ಹರ್ಷ ವ್ಯಕ್ತಪಡಿಸುತ್ತಾರೆ.
‘ಅರಣ್ಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಈಶ್ವರ ಖಂಡ್ರೆ ಅವರ ಆಸಕ್ತಿಯಿಂದ ತಾಲ್ಲೂಕಿನಲ್ಲಿ ಗುರಿಗಿಂತ ಹೆಚ್ಚಿನ ಸಸಿಗಳನ್ನು ನೆಟ್ಟಿದ್ದೇವೆ. ಈ ವರ್ಷ ತಾಲ್ಲೂಕಿನಲ್ಲಿ ಸುಮಾರು 3.23 ಲಕ್ಷ ಸಸಿಗಳನ್ನು ನಾಟಿ ಮಾಡಲಾಗಿದೆ. ಇನ್ನು, ಅರಣ್ಯ ಅತಿಕ್ರಮಣಕಾರರಿಂದ ಸ್ವಾಧೀನಕ್ಕೆ ಪಡೆದ ವಾಂಜರಖೇಡೆ, ಮಾಣಿಕೇಶ್ವರ, ಮೆಹಕರ್ ಸೇರಿ ವಿವಿಧೆಡೆ ಅಂದಾಜು 31 ಸಾವಿರ ಹಾಗೂ ಅರಣ್ಯ ಪ್ರದೇಶದಲ್ಲಿ 17 ಸಾವಿರ ಗಿಡಗಳನ್ನು ನೆಡಲಾಗಿದೆ’ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳುತ್ತಾರೆ.
ಪೋಷಣೆಗೆ ಬೇಕಿದೆ ಕಾಳಜಿ:
‘ರಸ್ತೆ ಅಕ್ಕ–ಪಕ್ಕ ನೆಟ್ಟಿರುವ ಗಿಡಗಳಿಂದ ಮಂಗಗಳ ಹಾವಳಿ ಹೆಚ್ಚಾಗುತ್ತದೆ ಎಂಬ ಭಯದಿಂದ ರೈತರು ಅವುಗಳ ಬೆಳವಣಿಗೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಜೊತೆಗೆ ಹೊಲ ಸ್ವಚ್ಛತಾ ಸಮಯದಲ್ಲಿ ಹೊಲದಲ್ಲಿನ ಕಸಕಡ್ಡಿಗಳನ್ನು ಗಿಡಗಳನ್ನು ನೆಟ್ಟಿರುವ ಸ್ಥಳದಲ್ಲಿ ಹಾಕುತ್ತಿದ್ದಾರೆ. ಹಾಗಾಗಿ, ಇದು ಗಿಡಗಳ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಕೆಲ ಗಿಡಗಳು ಬೆಳೆಯದೆ ಒಣಗುತ್ತಿವೆ’ ಎಂಬುದು ಪ್ರಾದೇಶಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಪ್ರವೀಣಕುಮಾರ ಮೋರೆ ಕಳವಳ.
‘ಕಳೆದ ವರ್ಷ ನೆಟ್ಟಿರುವ 2.81 ಲಕ್ಷ ಗಿಡಗಳಲ್ಲಿ ನಾನಾ ಕಾರಣಗಳಿಂದ ಶೇಕಡಾ 20ರಷ್ಟು ಗಿಡಗಳು ನಶಿಸಿವೆ. ನಶಿಸಿಹೋದ ಸ್ಥಳಗಳಲ್ಲಿ ಶೀಘ್ರವೇ ಪುನಃ ಸಸಿಗಳನ್ನು ನೆಡಲಾಗುವುದು’ ಎನ್ನುತ್ತಾರೆ ಡಿಎಫ್‌ಒ ವಾನತಿ ಎಂ.ಎಂ.
ಭಾಲ್ಕಿ ತಾಲ್ಲೂಕಿನಲ್ಲಿ ಕಳೆದೆರಡು ವರ್ಷಗಳಲ್ಲಿ ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯಿಂದ ರೈತರಿಗೆ ವಿತರಿಸಿದ್ದು ಸೇರಿದಂತೆ ಸುಮಾರು 6 ಲಕ್ಷ ಸಸಿ ನೆಡಲಾಗಿದೆವಾನತಿ ಎಂ.ಎಂ. ಡಿಎಫ್‌ಒ
ಸಚಿವ ಈಶ್ವರ ಖಂಡ್ರೆ ಅವರ ವಿಶೇಷ ಆಸಕ್ತಿಯಿಂದ ಗುರಿಗಿಂತ ಹೆಚ್ಚಿನ ಸಸಿಗಳನ್ನು ನೆಟ್ಟಿದ್ದೇವೆ. ಜನರ ಸಹಕಾರ ಸಿಕ್ಕರೆ ಇನ್ನಷ್ಟು ಸಸಿ ನೆಡಬಹುದುಪ್ರವೀಣಕುಮಾರ ಮೋರೆ ವಲಯ ಅರಣ್ಯಾಧಿಕಾರಿ ಪ್ರಾದೇಶಿಕ ಅರಣ್ಯ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.