ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ನಲ್ಲಿ ಸಿಲುಕಿದ 46 ವಲಸೆ ಕಾರ್ಮಿಕರು: ಅನ್ನ, ನೀರು ಕೊಟ್ಟು ಆಶ್ರಯ

Last Updated 10 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಬೀದರ್‌: ಲಾಕ್‌ಡೌನ್‌ ಘೋಷಣೆಯಾದ ನಂತರ ರಾಜ್ಯದ ಗಡಿಗಳು ಬಂದ್‌ ಆಗಿ ತಮಿಳುನಾಡು, ಮಧ್ಯಪ್ರದೇಶ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನೇಕ ಕಾರ್ಮಿಕರು ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದಾರೆ.

ಎಲ್ಲಿಯೂ ಊಟ ಸಿಗದೆ ತಮ್ಮೂರಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದ 46 ಕಾರ್ಮಿಕರಿಗೆ ಜಿಲ್ಲಾಡಳಿತ ನಗರದಲ್ಲಿ ಆಶ್ರಯ ಒದಗಿಸಿದೆ.

ಮಹಾರಾಷ್ಟ್ರದಲ್ಲಿ ನಿರ್ಬಂಧ ಜಾರಿಗೊಳಿಸಿದ ನಂತರ ಕೆಲವು ಕಾರ್ಮಿಕರು ಪ್ರಯಾಸಪಟ್ಟು ಹುಮನಾಬಾದ್‌ವರೆಗೆ ಬಂದಿದ್ದರು. ಬೀದರ್‌ಗೆ ಬಂದಾಗ ಕೇಂದ್ರ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿತ್ತು. ಜಿಲ್ಲಾ ಆಡಳಿತ ಇವರನ್ನು ಎರಡು ದಿನ ಸಮುದಾಯ ಭವನದಲ್ಲಿ ಇರಿಸಿ ಇದೀಗ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿದೆ. ಇವರಿಗೆ ತಮಿಳು ಬಿಟ್ಟರೆ ಯಾವ ಭಾಷೆಯೂ ಬರುವುದಿಲ್ಲ. ಹೀಗಾಗಿ ಇವರು ಸಂಜ್ಞೆಯ ಮೂಲಕವೇ ಸಂವಹನ ನಡೆಸಿದ್ದಾರೆ.

ಹೈದರಾಬಾದ್‌ನಿಂದ ಮಧ್ಯಪ್ರದೇಶಕ್ಕೆ ಕಾಲ್ನಡಿಗೆಯಲ್ಲಿ ಹೊರಟಿದ್ದ ಒಟ್ಟು 18 ಜನರನ್ನು ವಸತಿನಿಲಯದಲ್ಲಿ ಇರಿಸಲಾಗಿತ್ತು. ಇಬ್ಬರು ಮಾತ್ರ ತಮ್ಮೂರಿನ ಒಂದು ಲಾರಿಯಲ್ಲಿ ತೆರಳಿದ್ದಾರೆ. 16 ಜನ ಕಟ್ಟಡ ಕಾರ್ಮಿಕರು ಇಲ್ಲಿಯೇ ವಾಸವಾಗಿದ್ದಾರೆ. ಇವರೆಲ್ಲರೂ ಯಾವಾಗ ಲಾಕ್‌ಡೌನ್‌ ಆದೇಶ ತೆರವುಗೊಳ್ಳಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರು ಹಾಗೂ ಕೋಲಾರ ಜಿಲ್ಲೆಯ ಇಬ್ಬರು ಭಾಲ್ಕಿ ಗಡಿಯಿಂದ ನಡೆದುಕೊಂಡು ಬರುತ್ತಿದ್ದಾಗ ಪೊಲೀಸರು ಅವರನ್ನು ತಡೆದು ವಸತಿನಿಲಯದಲ್ಲಿ ಆಶ್ರಯ ಕಲ್ಪಿಸಿಕೊಟ್ಟಿದ್ದಾರೆ.

ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ ಉದಗಿರ್‌ನಲ್ಲಿ ಕೃಷಿ ತಾಂತ್ರಿಕ ತರಬೇತಿಯಲ್ಲಿ ಪಾಲ್ಗೊಂಡಿದ್ದ ಚಿಕ್ಕಬಳ್ಳಾಪುರದ 10 ಯುವಕರು ಲಾಕ್‌ಡೌನ್‌ ಆಗುವ ಮೊದಲೇ ಅನುಮತಿ ಪಡೆದು ಊರಿಗೆ ಹೊರಡಲು ಸಜ್ಜಾಗಿದ್ದರು. ಅಷ್ಟರಲ್ಲಿ ಮಹಾರಾಷ್ಟ್ರದಲ್ಲಿ ಸಾರಿಗೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಅಲ್ಲಿಂದ ರೈಲು ಮಾರ್ಗದಲ್ಲಿ ನಡೆದುಕೊಂಡು ಕಮಲನಗರದವರೆಗೂ ಬಂದಿದ್ದರು. ಅಷ್ಟೊತ್ತಿಗೆ ಇಡೀ ರಾಷ್ಟ್ರವೇ ಲಾಕ್‌ಡೌನ್‌ ಆಗಿತ್ತು.

ಕಮಲನಗರದ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಅವರನ್ನು ತಡೆದು ಊಟದ ವ್ಯವಸ್ಥೆ ಮಾಡಿ ಮರಳಿ ಉದಗಿರ್‌ಗೆ ಹೋಗುವಂತೆ ಸೂಚಿಸಿದ್ದರು. ಅಂದು ರಾತ್ರಿ ಪೊಲೀಸರ ಡ್ಯೂಟಿ ಮುಗಿಯುವವರೆಗೂ ಅಲ್ಲಿಯೇ ಉಳಿದಿದ್ದ ಈ ಯುವಕರು ಮತ್ತೆ ಊರಿನತ್ತ ಪಾದಯಾತ್ರೆ ಆರಂಭಿಸಿದರು. ಬೀದರ್‌ ಗಡಿ ಪ್ರವೇಶಿಸಿದ ನಂತರ ಇಲ್ಲಿಯ ಪೊಲೀಸರು ಇವರೆಲ್ಲರನ್ನೂ ಜಿಲ್ಲಾಡಳಿತ ವಶಕ್ಕೆ ಒಪ್ಪಿಸಿದರು. ಈಗ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ವಾಸವಾಗಿದ್ದಾರೆ.

‘ಗುರುದ್ವಾರದ ಪ್ರಬಂಧಕ ಕಮಿಟಿ ಎಲ್ಲ 46 ಜನರಿಗೆ ಉಚಿತ ಊಟದ ವ್ಯವಸ್ಥೆ ಮಾಡಿದೆ. ಇಂದಿರಾ ಕ್ಯಾಂಟೀನ್‌ನಿಂದ ಬೆಳಿಗ್ಗೆ ಉಪಾಹಾರ ಕೊಡಲಾಗುತ್ತಿದೆ. ವಸತಿನಿಲಯದಿಂದ ಎಲ್ಲರಿಗೂ ಸಾಬೂನು, ಟೂತ್ ಪೇಸ್ಟ್ ಹಾಗೂ ಬ್ರಶ್ ಕೊಡಲಾಗಿದೆ’ ಎಂದು ವಸತಿ ನಿಲಯದ ವಾರ್ಡನ್‌ ಬಲಭೀಮ ತಿಳಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅವಿನಾಶ ಹಾಗೂ ತಾಲ್ಲೂಕು ಅಧಿಕಾರಿ ಕಾರ್ಮಿಕರ ಮೇಲೆ ನಿಗಾ ಇಟ್ಟಿದ್ದಾರೆ. ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ಬೀದರ್‌ ಜಿಲ್ಲಾಡಳಿತವು ಸಂಕಷ್ಟದಲ್ಲಿದ್ದ ನಮ್ಮೆಲ್ಲರ ನೆರವಿಗೆ ಬಂದಿದೆ. ಬೆಳಿಗ್ಗೆ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯ ಪೊಲೀಸರು ಮಾನವೀಯತೆಯಿಂದ ನಡೆದುಕೊಂಡಿದ್ದಾರೆ. ಕರ್ನಾಟಕ ಸರ್ಕಾರಕ್ಕೆ ಋಣಿಯಾಗಿದ್ದೇವೆ ಎಂದು ಮಧ್ಯಪ್ರದೇಶದ ಕಾರ್ಮಿಕರು ಕೃತಜ್ಞತೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT