ಮಂಗಳವಾರ, ಆಗಸ್ಟ್ 16, 2022
20 °C
ಬೀದರ್‌ನ 7, ಕಲಬುರಗಿಯ ಒಬ್ಬರು ಸ್ಥಳದಲ್ಲೇ ಸಾವು; 8 ಜನರಿಗೆ ಗಾಯ

ಉತ್ತರಪ್ರದೇಶ ರಸ್ತೆ ಅಪಘಾತದಲ್ಲಿ ಬೀದರ್‌ನ 7, ಕಲಬುರಗಿಯ ಒಬ್ಬರು ಸ್ಥಳದಲ್ಲೇ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಉತ್ತರಪ್ರದೇಶದ ಲಖಿಂಪುರ ಖೇರಿ ಮತ್ತು ಮೋತಿಪುರ ನಡುವಿನ ನೌನಿಹಾಲ್‌ನ ಖೇರಿ-ನನ್‌ಪಾರಾ ಹೆದ್ದಾರಿಯಲ್ಲಿ ಟೆಂಪೊ ಟ್ರಾವೆಲರ್ ಮತ್ತು ಲಾರಿ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೀದರ್‌ನ 8 ಮಂದಿ ಮೃತಪಟ್ಟಿದ್ದು, 8 ಜನ ಗಾಯಗೊಂಡಿದ್ದಾರೆ.

ಕಲಬುರಗಿಯ ತಾಜ್‌ ಸುಲ್ತಾನಪುರದ ಶಿವಕುಮಾರ್ ಪೂಜಾರಿ ಶಿವಶರಣಪ್ಪ (28), ಬೀದರ್‌ನ ಜಗದೇವಿ ಛೇವಣಿ (52) ಮನ್ಮಥ ಮಾರುತಿ (36), ಅನಿಲ್ ವಿಜಯಕುಮಾರ್ (30), ಸಂತೋಷ ಕಾಶಿನಾಥ್ (38), ಶಶಿಕಲಾ ರಾಜಕುಮಾರ್ (38), ಸರಸ್ವತಿ ಜಗನ್ನಾಥ(47) ಮತ್ತು ಶಿವಾನಿ ಅನಿಲ್‌ (25) ಮೃತರು.

ಸುಜಾತಾ ಸಂತೋಷ (35), ದೀಪಿಕಾ ಸಂತೋಷ (16), ವೇದಾವತಿ ವಶೋರಾಜ್ (45), ಶೀತಲ್ (15). ಸಂಗಮ್ಮ ಶಿವಕುಮಾರ್ (62), ಅನಿಲ್ ವಿಜಯಕುಮಾರ (30) ಗಂಭೀರವಾಗಿ ಗಾಯಗೊಂಡಿದ್ದಾರೆ. ಭೂಮಿಕಾ ಸಂತೋಷ (15) ಮತ್ತು ಇಶಾನ್ವಿ ಅನಿಲಕುಮಾರ ಪಾಟೀಲ (3) ಸಾಮಾನ್ಯ ಗಾಯಗಳಾಗಿವೆ ಎಂದು ಮೋತಿಪುರ ಬಹರಾಇಚ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಉತ್ತರಭಾರತದ ಪ್ರವಾಸಕ್ಕೆ ತೆರಳಿದ್ದ ಟೆಂಪೊ ಟ್ರಾವೆಲರ್‌ನಲ್ಲಿ ಒಟ್ಟು 16 ಪ್ರಯಾಣಿಕರು ಇದ್ದರು. ಖೇರಿಯಿಂದ ಟ್ರಾವೆಲರ್ ಬಸ್ ಮೂಲಕ ಅಯೋಧ್ಯೆಗೆ ಹೋಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಮೃತದೇಹಗಳನ್ನು ಬಹರಾಇಚ್ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.

‘ಗಾಯಾಳುಗಳಿಗೆೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಅಲ್ಲಿನ ಜಿಲ್ಲಾಧಿಕಾರಿ ದಿನೇಶ ಚಂದ್ರಸಿಂಗ್ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಮೃತರ ಮೂವರು ಸಂಬಂಧಿಗಳು ಬೀದರ್‌ನಿಂದ ಲಖನೌ ತಲುಪಿದ್ದಾರೆ’ ಎಂದು ಬೀದರ್‌ ಜಿಲ್ಲಾಧಿಕಾರಿ ಗೋವಿಂದ ರಡ್ಡಿ ತಿಳಿಸಿದ್ದಾರೆ.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದಾರೆ. ಉತ್ತರಪ್ರದೇಶ ಸರ್ಕಾರ ಮೃತರ ಶವಗಳನ್ನು ಲಖನೌದಿಂದ ಹೈದರಾಬಾದ್‌ಗೆ ವಿಮಾನದ ಮೂಲಕ ಕಳುಹಿಸಲು ವ್ಯವಸ್ಥೆ ಮಾಡಿದೆ. ಹೈದರಾಬಾದ್‌ ವಿಮಾನನಿಲ್ದಾಣಕ್ಕೆ ಶವವಾಹಕ ವಾಹನ ಹಾಗೂ ಪೊಲೀಸ್‌ ಬೆಂಗಾಲು ವಾಹನ ಕಳಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

‘ಮೃತದೇಹಗಳು ಸೋಮವಾರ ಬೆಳಗಿನ ಜಾವ ಹೈದರಾಬಾದ್‌ ವಿಮಾನ ನಿಲ್ದಾಣ ಮೂಲಕ ಬೀದರ್‌ಗೆ ಬರಲಿವೆ. ಬೀದರ್‌ ಉಪ ವಿಭಾಗಾಧಿಕಾರಿ ನಯಿಮ್‌ ಮೊಸಿನ್ ಅವರು ಉತ್ತರಪ್ರದೇಶದ ಅಧಿಕಾರಿಗಳ ಸಂಪರ್ಕದಲ್ಲಿದ್ದಾರೆ‌’ ಎಂದು ಅವರು ತಿಳಿಸಿದ್ದಾರೆ.

‘ಬೀದರ್‌ ಹಾಗೂ ಸುಲ್ತಾನಪುರದ ನಾಲ್ಕು ಕುಟುಂಬಗಳು ಒಂದೇ ವಾಹನದಲ್ಲಿ ಪ್ರವಾಸಕ್ಕೆ ತೆರಳಿದ್ದವು. ಪ್ರವಾಸಕ್ಕೆ ಹೋದವರು ಈಗ ಹೆಣವಾಗಿ ಮರಳುತ್ತಿದ್ದಾರೆ’ ಎಂದು ವಿಜಯಕುಮಾರ ಸಂಬಂಧಿಕರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು