ಶನಿವಾರ, ಜುಲೈ 31, 2021
27 °C
ಮನೆ ಸೇರಿದ 11ನೇ ದಿನಕ್ಕೆ ಬಂದ ವೈದ್ಯಕೀಯ ವರದಿ

ಬೀದರ್: ಯುವತಿಗೆ ಮೂರನೇ ಬಾರಿ ಕ್ವಾರಂಟೈನ್‌

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಒಂದಿಲ್ಲೊಂದು ಎಡವಟ್ಟು ಮಾಡುತ್ತಲೇ ಇದ್ದಾರೆ. ಸಕಾಲದಲ್ಲಿ ವೈದ್ಯಕೀಯ ವರದಿಗಳು ಕೈಸೇರದ ಕಾರಣ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲೂ ಆತಂಕ ಮನೆ ಮಾಡಿದೆ. ಎರಡೆರಡು ಬಾರಿ ಗಂಟಲು ಮಾದರಿ ಪಡೆದು ಪರೀಕ್ಷೆ ನಡೆಸಿ ಮನೆಗೆ ಕಳಿಸಿದ 11 ದಿನಗಳ ನಂತರ ಮತ್ತೆ ಯುವತಿಯೊಬ್ಬರನ್ನು ಕ್ವಾರಂಟೈನ್‌ಗೆ ಕರೆದೊಯ್ದಿದ್ದಾರೆ.

ಎರಡು ತಿಂಗಳ ಹಿಂದೆ ನಗರದ ಓಲ್ಡ್‌ಸಿಟಿಯ ಮನಿಯಾರ್ ತಾಲೀಮ್‌ನಲ್ಲಿ ನಾಲ್ವರಿಗೆ ಕೋವಿಡ್‌ 19 ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಮನಿಯಾರ್‌ ತಾಲೀಮ್‌ನ ಒಂದು ಓಣಿಯನ್ನು ಸೀಲ್‌ಡೌನ್‌ ಮಾಡಿದ ನಂತರ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಗಂಟಲು ದ್ರವ ಮಾದರಿ ಪಡೆದುಕೊಂಡಿದ್ದರು. ಸುತ್ತಮುತ್ತಲಿನ ಮನೆಯವರನ್ನು ಕ್ವಾರಂಟೈನ್‌ನಲ್ಲಿ ಇಟ್ಟು ವೈದ್ಯಕೀಯ ಪರೀಕ್ಷೆ ನಡೆಸಿ ಮನೆಗೆ ಕಳಿಸಲಾಗಿತ್ತು.

ಮೇ 10 ರಂದು ಇಲ್ಲಿನ ಕುಟುಂಬವೊಂದರ ಮಹಿಳೆಗೆ ಕೋವಿಡ್ 19 ಪರೀಕ್ಷಾ ವರದಿ ಪಾಸಿಟಿವ್ ಬಂದಿತ್ತು. ಹೀಗಾಗಿ ಅವರ 20 ವರ್ಷದ ಮಗ, 18, 16, 11 ಹಾಗೂ 10 ವರ್ಷದ ಹೆಣ್ಣುಮಕ್ಕಳನ್ನು ಶಾಹೀನ್‌ ಶಿಕ್ಷಣ ಸಂಸ್ಥೆ ವಸತಿ ಗೃಹದ ಕ್ವಾರಂಟೈನ್‌ನಲ್ಲಿ ಇಡಲಾಯಿತು. 16 ದಿನಗಳ ನಂತರ ಎಲ್ಲರನ್ನೂ ಬಿಡುಗಡೆ ಮಾಡಲಾಯಿತು.

ಮೇ 24 ರಂದು ಮತ್ತೆ ಕುಟುಂಬದ ಎಲ್ಲ ಸದಸ್ಯರ ಗಂಟಲು ದ್ರವ ಮಾದರಿ ಪಡೆದುಕೊಳ್ಳಲಾಯಿತು. ಸೋಂಕಿನ ಲಕ್ಷಣಗಳು ಕಂಡು ಬರದ ಕಾರಣ ಮೇ 28ರಂದು ಮಹಿಳೆಯನ್ನು ಬಿಟ್ಟು ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರದಿಂದ ಬಿಡುಗಡೆ ಮಾಡಿ ಮನೆಗೆ ಕಳಿಸಲಾಯಿತು. ಮೂರು ದಿನಗಳ ನಂತರ ಆ ಮಹಿಳೆಯನ್ನು ಸಹ ಮನೆಗೆ ಕಳಿಸಿಕೊಡಲಾಯಿತು.

ಈ ಬಾರಿ ಕುಟುಂಬದ ಸದಸ್ಯರಿಗೆ ರಂಜಾನ್ ಆಚರಣೆ ಸಾಧ್ಯವಾಗಲಿಲ್ಲ. ಆದರೆ, ಆ ಕುಟುಂಬದ ಹಿರಿಯ ಮಗಳ ಮದುವೆ ಮಾಡಿಕೊಡಲು ವರನ ಸಂಬಂಧಿಗಳೊಂದಿಗೆ ಮಾತುಕತೆ ನಡೆಸಲಾಗಿತ್ತು. ಮದುವೆ ಸಿದ್ಧತೆಯಲ್ಲಿರುವಾಗಲೇ ಮೇ 3 ರಂದು ಯುವತಿ, ಬ್ರಿಮ್ಸ್‌ ಆಸ್ಪತ್ರೆಯ ವಿಶೇಷ ನಿಗಾ ಘಟಕದಲ್ಲಿ ದಾಖಲಾಗಬೇಕಾಯಿತು.

‘ಕೋವಿಡ್ 19 ಸೋಂಕಿನಿಂದ ಈಗಾಗಲೇ ಒಂದು ತಿಂಗಳು ಮಾನಸಿಕ ಯಾತನೆ ಅನುಭವಿಸಿದ್ದೇವೆ. ಸರ್ಕಾರ ಸೂಚಿಸಿದಂತೆ ನಿಯಮಗಳನ್ನು ಪಾಲನೆ ಮಾಡಿದ್ದೇವೆ. ಆದರೆ, 11 ದಿನಗಳ ನಂತರ ನನ್ನ ಹಿರಿಯ ಮಗಳಿಗೆ ಸೋಂಕು ತಗುಲಿರುವುದು ಆತಂಕ ತಂದಿದೆ’ ಎಂದು ಆ ಕುಟುಂಬದ ಮುಖ್ಯಸ್ಥ ಹೇಳಿದರು.

‘ಬಹುತೇಕ ಎಲ್ಲರ ವೈದ್ಯಕೀಯ ವರದಿಗಳು ಎರಡು, ಮೂರು ದಿನಗಳಲ್ಲೇ ಬರುತ್ತವೆ. ಆದರೆ, ನನ್ನ ಮಗಳ ವರದಿ 11 ದಿನಗಳ ಬಳಿಕ ಬಂದಿದೆ. ನಾನು ಪೇಂಟರ್‌ ಕೆಲಸ ಮಾಡುತ್ತೇನೆ. ಲಾಕ್‌ಡೌನ್‌ನಿಂದಾಗಿ ಮೊದಲೇ ಕೆಲಸ ಇಲ್ಲವಾಗಿದೆ. ಈಗ ಮತ್ತೆ ಹೋಮ್‌ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಪಡಿತರ ಅಂಗಡಿಯವರು ಕೊಟ್ಟ ಅಕ್ಕಿ ಮಾತ್ರ ಉಳಿದಿದೆ. ಬಾಕಿ ಮನೆಯಲ್ಲಿ ಏನೂ ಇಲ್ಲ’ ಎಂದು ಅಳಲು ತೋಡಿಕೊಂಡರು.

‘ಜನರು ಕೋವಿಡ್‌ 19 ಸೋಂಕನ್ನು ಹಗುರವಾಗಿ ಪರಿಗಣಿಸಬಾರದು. ಆರೋಗ್ಯ ಇಲಾಖೆ ಅಧಿಕಾರಿಗಳು ವರದಿ ಕೊಡಲು ವಿಳಂಬ ಮಾಡಿದರೆ ಹಲವು ಕುಟುಂಬಗಳು ತೊಂದರೆಗೆ ಸಿಲುಕಲಿವೆ. ಹೋಮ್‌ ಕ್ವಾರಂಟೈನ್‌ ನಿಂದ ಬಂದ ಕುಟುಂಬಗಳಿಗೆ ಜಿಲ್ಲಾ ಆಡಳಿತ ಆಹಾರಧಾನ್ಯ ಕೊಟ್ಟು ನೆರವಾಗಬೇಕು’ ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು