ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

71 ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ

ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ
Last Updated 16 ಅಕ್ಟೋಬರ್ 2021, 15:19 IST
ಅಕ್ಷರ ಗಾತ್ರ

ಬೀದರ್‌: ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ (ಕೆ) ಗ್ರಾಮದ ಕಿನ್ನರಿ ಬ್ರಹ್ಮೇಶ್ವರ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಯಿತು.

ಶಾಲೆಯ ಆವರಣದಲ್ಲಿ ಪೆಂಡಾಲ್‌ ಹಾಕಿ ಅನೇಕ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಗ್ರಾಮಸ್ಥರಿಂದ ಸಲ್ಲಿಕೆಯಾದ 195 ಅರ್ಜಿಗಳಲ್ಲಿ 71 ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಯಿತು. 19 ಮಾಸಾಶನ, 29 ಚುನಾವಣಾ ಗುರುತಿನ ಚೀಟಿಯಲ್ಲಿನ ಲೋಪಗಳ ತಿದ್ದುಪಡಿ, 16 ಪಡಿತರ ಚೀಟಿಗಳ ಆಧಾರ್ ಲಿಂಕ್ ಮಾಡಲಾಯಿತು. ನಾಡ ಕಚೇರಿಗೆ ಸಂಬಂಧಿಸಿದ 7 ಅರ್ಜಿಗಳನ್ನು ಇತ್ಯರ್ಥಗೊಳಿಸಲಾಯಿತು.

ಜಿಲ್ಲಾಧಿಕಾರಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಅಹವಾಲು ಆಲಿಸಿದರು. ಕಂದಾಯ, ಭೂ ಮಾಪನ ಹಾಗೂ ಭೂ ದಾಖಲೆಗಳ ಇಲಾಖೆ, ಕೃಷಿ, ತೋಟಗಾರಿಕೆ, ಆಹಾರ ಮತ್ತು ನಾಗರಿಕ ಪೂರೈಕೆ, ಲೋಕೋಪಯೋಗಿ ಇಲಾಖೆ, ಜೆಸ್ಕಾಂ, ಪಶು ಸಂಗೋಪನೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

‘ಗ್ರಾಮ ಮಟ್ಟದಲ್ಲೇ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಸುವ ಸರ್ಕಾರದ ಆಶಯದಂತೆ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಸಲಾಗಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್ ಅವರು ಗ್ರಾಮಸ್ಥರಿಗೆ ಕೋವಿಡ್‌ ಲಸಿಕೆ ಪಡೆಯುವಂತೆ ತಿಳಿವಳಿಕೆ ನೀಡಿದರು. ಕೆಲವರಿಗೆ ಸ್ಥಳದಲ್ಲೇ ಕೋವಿಡ್‌ ಲಸಿಕೆ ಕೊಡಿಸಿದರು. ಗ್ರಾಮದ ಕೆಲವು ಬೀದಿಗಳಲ್ಲಿ ಸಂಚರಿಸಿ, ಮನೆಮನೆಗೆ ತೆರಳಿ ಅಹವಾಲು ಸ್ವೀಕರಿಸಿದ್ದು ವಿಶೇಷವಾಗಿತ್ತು.

ಶಾಸಕ ರಾಜಶೇಖರ ಪಾಟೀಲ ಹಾಗೂ ವಿಧಾನ ಪರಿಷತ್‌ ಸದಸ್ಯ ಚಂದ್ರಶೇಖರ ಪಾಟೀಲ ಅವರು ಗ್ರಾಮಸ್ಥರಿಗೆ ಮಾಸಾಶನ ಹಾಗೂ ಪಡಿತರ ಚೀಟಿ ಮಂಜೂರಾತಿ ಪತ್ರ ನೀಡಿದರು.

ಇದಕ್ಕೂ ಮೊದಲು ಜಿಲ್ಲಾಧಿಕಾರಿ ರಾಮಚಂದ್ರನ್‌ ಮಳೆಯಲ್ಲಿ ಕೊಡೆ ಹಿಡಿದುಕೊಂಡು ಗ್ರಾಮದಲ್ಲಿ ಸಂಚರಿಸಿದರು. ಕೋವಿಡ್‌ ಲಸಿಕೆ ಪಡೆಯದ ಮಹಿಳೆಯೊಬ್ಬರಿಗೆ ತಿಳಿವಳಿಕೆ ನೀಡಿ ಲಸಿಕೆ ಕೊಡಿಸಿದರು. ಮಹಿಳೆಯರ ಆಹವಾಲು ಆಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT