ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಬಾಡಿದ ಬೆಳೆಗಳಿಗೆ ಟ್ಯಾಂಕರ್ ನೀರು

ಮಳೆ ಕೊರತೆಯ ಕಾರಣ ಜಮೀನಿನಲ್ಲಿ ತೇವಾಂಶ ಇಲ್ಲದೆ ಸಂಕಟ
Published 29 ಆಗಸ್ಟ್ 2023, 7:56 IST
Last Updated 29 ಆಗಸ್ಟ್ 2023, 7:56 IST
ಅಕ್ಷರ ಗಾತ್ರ

ಬಸವಕಲ್ಯಾಣ: ಮಳೆ ಕೊರತೆಯಾಗಿ ಜಮೀನಿನಲ್ಲಿ ತೇವಾಂಶ ಇಲ್ಲದ್ದರಿಂದ ಬಾಡುತ್ತಿರುವ ಬೆಳೆಗಳಿಗೆ ತಾಲ್ಲೂಕಿನ ಕೆಲ ರೈತರು ಟ್ಯಾಂಕರ್ ಮೂಲಕ ನೀರು ತಂದು ಸುರಿಯುತ್ತಿದ್ದಾರೆ.

ಅನೇಕ ದಿನಗಳಿಂದ ಮಳೆ ಸುರಿಯದ ಕಾರಣ ಕೊಹಿನೂರ, ಮುಡಬಿ, ಮಂಠಾಳ, ರಾಜೇಶ್ವರ ಹಾಗೂ ನಾರಾಯಣಪುರ ಹೋಬಳಿಗಳಲ್ಲಿನ ಬೆಳೆಗಳು ಒಣಗುತ್ತಿರುವ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ. ಮಳೆ ಬರಬಹುದು ಎಂದು ಮುಗಿಲು ನೋಡಿ ಸುಸ್ತಾದ ಕೆಲವರು ತೆರೆದ ಬಾವಿ, ಕೊಳವೆ ಬಾವಿಗಳ ನೀರು ಹರಿಸುತ್ತಿದ್ದಾರೆ. ಹೊಲದ ಪಕ್ಕದಲ್ಲಿನ ಚಿಕ್ಕ ನಾಲೆ, ತಗ್ಗು ಪ್ರದೇಶದಲ್ಲಿ ಸಂಗ್ರಹಗೊಂಡ ನೀರನ್ನು ಪೈಪ್‌ಗಳ ಮೂಲಕ ತರುತ್ತಿದ್ದಾರೆ.

ಹಾಗೆ ನೋಡಿದರೆ, ತಾಲ್ಲೂಕಿನಲ್ಲಿ ನೀರಾವರಿಗೆ ಹೆಚ್ಚಿನ ಅನುಕೂಲತೆ ಇಲ್ಲ. ಬಾವಿಗಳು ಕೂಡ ತೀರ ಕಡಿಮೆ ಇವೆ. ಆದ್ದರಿಂದ ಭೋಸ್ಗಾ, ಹತ್ಯಾಳ, ಧನಗರವಾಡಿ ಮುಂತಾದೆಡೆ ಟ್ಯಾಂಕರ್ ಮೂಲಕ ನೀರು ತಂದು ಸುರಿಯುತ್ತಿರುವುದು ಕೂಡ ಕಂಡು ಬಂದಿದೆ. `ತಿಂಗಳಿನಿಂದ ಮಳೆ ಬಾರದ ಕಾರಣ ಧನಗರವಾಡಿಯಲ್ಲಿನ ನನ್ನ 10 ಎಕರೆ ಹೊಲದಲ್ಲಿನ ಸೋಯಾಬಿನ್ ಹಾಗೂ ತೊಗರಿಗೆ ಟ್ಯಾಂಕರ್ ಮತ್ತು ಪೈಪ್‌ಲೈನ್ ಮೂಲಕ ಬಾವಿ ನೀರು ಹರಿಸಿದ್ದೇನೆ' ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ತುಕಾರಾಮ ಮಲ್ಲಪ್ಪ ತಿಳಿಸಿದ್ದಾರೆ.

‘ಕೊಹಿನೂರ ಹೋಬಳಿಯ ಗ್ರಾಮಗಳಲ್ಲಿ ಮುಂಗಾರು ಆರಂಭವಾದಾಗ ತಿಂಗಳವರೆಗೆ ಮಳೆ ಬರಲಿಲ್ಲ. ಈ ಕಾರಣ ಮೊದಲೇ ಬಿತ್ತನೆ ತಡವಾಗಿ ಆಗಿದೆ. ಇಂಥದರಲ್ಲಿ ಈಚೆಗೆ ಮಳೆ ಬಾರದೆ ಬೆಳೆಗಳಲ್ಲಿ ಜೀವ ಇಲ್ಲದಂತಾಗಿದೆ' ಎಂದು ರೈತ ಪ್ರಶಾಂತ ಲಕಮಾಜಿ ಕೊಹಿನೂರ ಹೇಳಿದ್ದಾರೆ. `ಒಂದೆರಡು ದಿನದಲ್ಲಿ ಮಳೆ ಸುರಿಯದಿದ್ದರೆ ಬೆಳೆಗಳು ಫಲ ನೀಡುವ ಭರವಸೆ ಇಲ್ಲ' ಎಂಬುದು ಸತೀಶ ಪಾಟೀಲ ಹತ್ತರ್ಗಾ ಅನಿಸಿಕೆ.

‘ತಾಲ್ಲೂಕಿನ ಕೆಲ ಭಾಗದಲ್ಲಿ ಅತಿವೃಷ್ಟಿಯಿಂದಲೂ ಜಮೀನಿನಲ್ಲಿ ನೀರು ಸಂಗ್ರಹಗೊಂಡು ಹಾನಿಯಾಯಿತು. ಈಗ ಅನಾವೃಷ್ಟಿಯಿಂದ ಬೆಳೆಗಳು ಬಾಡಿವೆ. ಸೋಯಾಬಿನ್, ತೊಗರಿ, ಹೆಸರು, ಉದ್ದು, ಎಳ್ಳು ಮತ್ತು ಹೈಬ್ರಿಡ್ ಜೋಳದ ದಂಟುಗಳು ನೀರಿನ ಕೊರತೆಯಾಗಿ ಹಳದಿ ಬಣ್ಣ ಪಡೆದುಕೊಂಡಿವೆ' ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗೋಲಂದಾಸ ಇಲ್ಲಾಳೆ ಹೇಳಿದ್ದಾರೆ.

‘ರೈತರು ಸಾಲ ಪಡೆದು ಬಿತ್ತನೆ ಬೀಜ ಮತ್ತು ಗೊಬ್ಬರ ತಂದಿದ್ದು ಅದೆಲ್ಲ ಹಾಳಾಗಿರುವ ಕಾರಣ ಇದಕ್ಕಾಗಿಯೂ ಸರ್ಕಾರ ಸಹಾಯಧನ ನೀಡಬೇಕು' ಎಂದು ಮುಖಂಡ ತಾತೇರಾವ್ ಪಾಟೀಲ ಮಂಗಳೂರ ಆಗ್ರಹಿಸಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಧನಗರವಾಡಿಯಲ್ಲಿ ರೈತ ತುಕಾರಾಮ ಮಲ್ಲಪ್ಪ ಅವರು ಬೆಳೆಗಳಿಗೆ ಪೈಪ್ ಮೂಲಕ ಬಾವಿ ನೀರು ಹರಿಸುತ್ತಿರುವುದು
ಬಸವಕಲ್ಯಾಣ ತಾಲ್ಲೂಕಿನ ಧನಗರವಾಡಿಯಲ್ಲಿ ರೈತ ತುಕಾರಾಮ ಮಲ್ಲಪ್ಪ ಅವರು ಬೆಳೆಗಳಿಗೆ ಪೈಪ್ ಮೂಲಕ ಬಾವಿ ನೀರು ಹರಿಸುತ್ತಿರುವುದು
ಮಳೆ ಕೊರತೆಯಿಂದ ಈಗಾಗಲೇ ಅರ್ಧದಷ್ಟು ಹಾನಿಯಾಗಿದೆ. ಆದ್ದರಿಂದ ಸಂಬಂಧಿತ ಅಧಿಕಾರಿಗಳು ಸಮೀಕ್ಷೆ ಕೈಗೊಂಡು ಪರಿಹಾರ ಒದಗಿಸಬೇಕು
- ಸೋಮಣ್ಣ ಬಿರಾದಾರ ಚಿತ್ತಕೋಟಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT