ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ ಲೋಕಸಭೆ ಚುನಾವಣೆ | ಕಾಂಗ್ರೆಸ್‌ನಲ್ಲಿ ಬಿರುಸುಗೊಂಡ ಟಿಕೆಟ್‌ ಲಾಬಿ

ಲೋಕಸಭೆ ಚುನಾವಣೆಗೆ ದಿನಗಣನೆ; ಬೀದರ್‌ ಜಿಲ್ಲೆಯಲ್ಲಿದೆ ಆಕಾಂಕ್ಷಿಗಳ ದಂಡು
ಶಶಿಕಾಂತ ಎಸ್‌. ಶೆಂಬೆಳ್ಳಿ
Published 30 ಡಿಸೆಂಬರ್ 2023, 6:17 IST
Last Updated 30 ಡಿಸೆಂಬರ್ 2023, 6:17 IST
ಅಕ್ಷರ ಗಾತ್ರ

ಬೀದರ್‌: ಲೋಕಸಭೆ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಅದರಲ್ಲೂ ರಾಜ್ಯದ ಆಡಳಿತಾರೂಢ ಸರ್ಕಾರದ ಕಾಂಗ್ರೆಸ್‌ ಪಕ್ಷದಲ್ಲಿ ಟಿಕೆಟ್‌ಗಾಗಿ ಲಾಬಿ ಜೋರಾಗಿದೆ.

ಕಾಂಗ್ರೆಸ್‌ ಪಕ್ಷದ ಮೂಲಗಳ ಪ್ರಕಾರ, ರಾಜ್ಯದ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಹಾಲಿ ಸಚಿವರನ್ನು ಕಣಕ್ಕಿಳಿಸುವುದರ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಸಂಪನ್ಮೂಲ, ಪ್ರಭಾವದ ದೃಷ್ಟಿಯಿಂದ ಚುನಾವಣೆಯಲ್ಲಿ ನೆರವಾಗಬಹುದು ಎಂಬ ಲೆಕ್ಕಾಚಾರ ಇದರ ಹಿಂದೆ ಅಡಗಿದೆ. ಇತ್ತೀಚೆಗೆ ನಡೆದ ಮಧ್ಯ ಪ್ರದೇಶ, ರಾಜಸ್ತಾನ ವಿಧಾನಸಭೆ ಚುನಾವಣೆಯಲ್ಲಿ ಈ ರೀತಿಯ ಪ್ರಯೋಗ ನಡೆಸಿ, ಬಿಜೆಪಿ ಯಶಸ್ಸು ಕಂಡಿತ್ತು. ಅಂತಹುದೇ ಪ್ರಯೋಗ ನಡೆಸುವುದರ ಬಗ್ಗೆ ಕಾಂಗ್ರೆಸ್‌ನಲ್ಲಿ ಚಿಂತನೆ ನಡೆದಿದೆ.

ಅದರಲ್ಲಿ ಕೇಳಿ ಬರುತ್ತಿರುವ ಕ್ಷೇತ್ರಗಳಲ್ಲಿ ಬೀದರ್‌ ಲೋಕಸಭೆ ಕೂಡ ಸೇರಿದೆ. ಅದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರ ಹೆಸರು ಮುನ್ನಲೆಗೆ ಬಂದಿದೆ. ಹೈಕಮಾಂಡ್ ಈ ಬಗ್ಗೆ ತೀರ್ಮಾನಕ್ಕೆ ಬಂದರೆ ಅದೊಂದೆ ಹೆಸರು ಅಂತಿಮಗೊಳ್ಳಲಿದೆ. ಇದೊಂದು ವಿಷಯ ಈಗಾಗಲೇ ಕಾಂಗ್ರೆಸ್‌ ಪಡಸಾಲೆಯಲ್ಲಿ ಚರ್ಚೆಯಲ್ಲಿದೆ. ಆದರೆ, ಟಿಕೆಟ್‌ಗಾಗಿ ಲಾಬಿ ನಡೆಸುವುದು ಮಾತ್ರ ಯಾರೂ ನಿಲ್ಲಿಸಿಲ್ಲ. ಅವರವರ ಮಟ್ಟದಲ್ಲಿ ಪಕ್ಷದ ಮುಖಂಡರು, ಮಠ ಮಾನ್ಯಗಳ ಮೂಲಕ ಒತ್ತಡ ಹಾಕುವ ಕೆಲಸ ಆರಂಭಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಈಶ್ವರ ಖಂಡ್ರೆಯವರು ಹಾಲಿ ಸಂಸದರೂ ಆದ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು.

ಮೂಲಗಳ ಪ್ರಕಾರ, ಸಚಿವ ಈಶ್ವರ ಬಿ. ಖಂಡ್ರೆಯವರು ಅವರ ಮಗ ಸಾಗರ್‌ ಖಂಡ್ರೆಯವರನ್ನು ಚುನಾವಣೆಗೆ ನಿಲ್ಲಿಸಬೇಕೆಂಬ ಚಿಂತನೆಯಲ್ಲಿದ್ದಾರೆ ಎಂದು ಗೊತ್ತಾಗಿದೆ. ಈಗಾಗಲೇ ಯುವ ಕಾಂಗ್ರೆಸ್‌ನಲ್ಲಿ ಸಾಗರ್‌ ಖಂಡ್ರೆ ಸಕ್ರೀಯರಾಗಿ ತೊಡಗಿಸಿಕೊಂಡಿದ್ದಾರೆ. ಏನೇ ಸಭೆ, ಸಮಾರಂಭ, ಹಬ್ಬ ಹರಿದಿನಗಳಿದ್ದರೆ ಸಾಗರ್‌ ಖಂಡ್ರೆಯವರ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಹಾಕಿಸಿ ಅಬ್ಬರದ ಪ್ರಚಾರ ಮಾಡುತ್ತಿರುವುದೇ ಸಾಕ್ಷಿ. ಡಿ. 2ರಂದು ಭಾಲ್ಕಿಯಲ್ಲಿ ನಡೆದ ಭೀಮಣ್ಣ ಖಂಡ್ರೆಯವರ ಜನ್ಮ ಶತಮಾನೋತ್ಸವ ಸಮಾರಂಭದ ಮೂಲಕ ಸಾಗರ್‌ ಖಂಡ್ರೆಯವರನ್ನು ಜನರಿಗೆ ಪರಿಚಯಿಸುವ ಕೆಲಸ ನಡೆದಿತ್ತು.

ಇನ್ನು, ಮಾಜಿಸಚಿವ ರಾಜಶೇಖರ ಪಾಟೀಲ ಹುಮನಾಬಾದ್‌ ಅವರ ಹೆಸರು ಕೇಳಿ ಬರುತ್ತಿದೆ. ಈ ಕುರಿತು ಅವರು ಬಹಿರಂಗವಾಗಿ ಏನನ್ನೂ ಮಾತನಾಡದಿದ್ದರೂ ಸಹ ವರಿಷ್ಠರ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ವಿಧಾನಸಭೆ ಚುನಾವಣೆಯಲ್ಲಿ ಬೀದರ್‌ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿರುವ ಅಶೋಕ್‌ ಖೇಣಿ ಕೂಡ ಲಾಬಿ ನಡೆಸಿದ್ದಾರೆ. ಆದರೆ, ವಯಸ್ಸು 75 ದಾಟಿರುವುದರಿಂದ ಅವರನ್ನು ಪರಿಗಣಿಸುವ ಸಾಧ್ಯತೆ ತೀರ ಕಡಿಮೆ ಎನ್ನಲಾಗಿದೆ. ಇನ್ನು, ಕಳೆದ ಎರಡ್ಮೂರು ಚುನಾವಣೆಗಳಿಂದ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿರುವ ಆನಂದ ದೇವಪ್ಪ ಅವರು ಈ ಸಲ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಕೇಳುತ್ತಿದ್ದಾರೆ. ಈಗಾಗಲೇ ಅವರು ಒಂದು ಸುತ್ತು ನವದೆಹಲಿಯಲ್ಲಿ ಪಕ್ಷದ ವಿವಿಧ ಮುಖಂಡರನ್ನು ಭೇಟಿ ಮಾಡಿದ್ದಾರೆ. ಹೊಸಬರನ್ನು ಕಣಕ್ಕಿಳಿಸುವುದಾದರೆ ತನ್ನ ಹೆಸರು ಪರಿಗಣಿಸಬೇಕೆಂದು ವಾದ ಮುಂದಿಟ್ಟಿದ್ದಾರೆ. ಹಿರಿಯ ಮುಖಂಡ ಬಸವರಾಜ ಬುಳ್ಳಾ ಕೂಡ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಕಳೆದೊಂದು ತಿಂಗಳಿಂದ ದೆಹಲಿ, ಬೆಂಗಳೂರು ಸೇರಿದಂತೆ ಹಲವು ಕಡೆ ಸಂಚರಿಸಿ ಅವರ ಪರ ವಕಾಲತ್ತು ನಡೆಸಿ ಟಿಕೆಟ್‌ ಕೊಡಿಸಬೇಕೆಂದು ಕೋರುತ್ತಿದ್ದಾರೆ.

ಬರುವ ಲೋಕಸಭೆ ಚುನಾವಣೆ ಕಾಂಗ್ರೆಸ್‌ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ. ರಾಜ್ಯದಲ್ಲಿ ಅದರದೇ ಪಕ್ಷದ ಸರ್ಕಾರವಿದೆ. ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಬೇಕೆಂಬುದು ಕಾಂಗ್ರೆಸ್‌ ಲೆಕ್ಕಾಚಾರವಾಗಿದೆ. ಸಾಕಷ್ಟು ಅಳೆದು ತೂಗಿ ಟಿಕೆಟ್‌ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಅಂತಿಮವಾಗಿ ಅದಕ್ಕೆ ಯಾರು ‘ಫಿಟ್‌’ ಆಗುತ್ತಾರೆ ನೋಡಬೇಕಿದೆ.

ಡಾ. ಮಕ್ಸೂದ್‌ ಚಂದಾ
ಡಾ. ಮಕ್ಸೂದ್‌ ಚಂದಾ
ರಹೀಂ ಖಾನ್‌
ರಹೀಂ ಖಾನ್‌
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ
ಬಸವರಾಜ ಜಾಬಶೆಟ್ಟಿ
ಬಸವರಾಜ ಜಾಬಶೆಟ್ಟಿ
ಸಾಗರ್‌ ಖಂಡ್ರೆ
ಸಾಗರ್‌ ಖಂಡ್ರೆ
ಅಶೋಕ ಖೇಣಿ
ಅಶೋಕ ಖೇಣಿ
ಬಸವರಾಜ ಬುಳ್ಳಾ
ಬಸವರಾಜ ಬುಳ್ಳಾ
ರಾಜಶೇಖರ ಪಾಟೀಲ 
ರಾಜಶೇಖರ ಪಾಟೀಲ 
ಅಯಾಜ್‌ ಖಾನ್‌
ಅಯಾಜ್‌ ಖಾನ್‌
ಆನಂದ ದೇವಪ್ಪಾ
ಆನಂದ ದೇವಪ್ಪಾ
ಅಬ್ದುಲ್‌ ಮನ್ನಾನ್‌ ಸೇಠ್‌
ಅಬ್ದುಲ್‌ ಮನ್ನಾನ್‌ ಸೇಠ್‌

‘ಜಿಲ್ಲಾ ಸಮಿತಿಗೆ ಏನೂ ಕೇಳಿಲ್ಲ’ (ಚಿತ್ರ ಇದೆ: ಬಸವರಾಜ ಬುಳ್ಳಾ) ‘ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೂ ಎದುರಿಸಲು ನಮ್ಮ ಪಕ್ಷ ಸಿದ್ಧವಾಗಿದೆ. ಆಕಾಂಕ್ಷಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಕ್ಷದ ಕೇಂದ್ರ ಸಮಿತಿಯಿಂದ ಜಿಲ್ಲಾ ಸಮಿತಿಗೆ ಇದುವರೆಗೆ ಏನೂ ಕೇಳಿಲ್ಲ. ಪಕ್ಷದ ವೀಕ್ಷಕರಾಗಿರುವ ಸಚಿವ ಸಂತೋಷ ಲಾಡ್‌ ಅವರು ಸಭೆ ನಡೆಸಿ ಪಕ್ಷದ ಕೇಂದ್ರ ಸಮಿತಿಗೆ ವರದಿ ಸಲ್ಲಿಸಿದ್ದಾರೆ. ಹೈಕಮಾಂಡ್‌ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪಕ್ಷದ ಲೆಕ್ಕಾಚಾರವೇನು? ಮುಂಬರುವ ಲೋಕಸಭೆ ಚುನಾವಣೆಗೆ ಬೀದರ್‌ ಕ್ಷೇತ್ರದ ವೀಕ್ಷಕರಾಗಿ ಸಚಿವ ಸಂತೋಷ ಲಾಡ್‌ ಅವರನ್ನು ಪಕ್ಷ ನೇಮಕ ಮಾಡಿದೆ. ಈಗಾಗಲೇ ಅವರು ಜಿಲ್ಲೆಗೆ ಬಂದು ಒಂದು ಸುತ್ತಿನ ಸಭೆ ನಡೆಸಿ ಹಲವು ಜನ ಮುಖಂಡರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಮೂವರು ಲಿಂಗಾಯತರು ಮುಸ್ಲಿಂ ಮರಾಠ ಸಮಾಜದಿಂದ ತಲಾ ಒಬ್ಬರ ಹೆಸರಿನ ಬಗ್ಗೆ ಚರ್ಚೆ ನಡೆಸಿ ಪಕ್ಷದ ವರಿಷ್ಠರಿಗೆ ಮಾಹಿತಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ‘ಪ್ರಜಾವಾಣಿ’ ಸಂತೋಷ ಲಾಡ್‌ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ. ಜಿಲ್ಲೆಯವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಿಲ್ಲೆಯ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಟಿಕೆಟ್‌ ಹಂಚಿಕೆಯಲ್ಲಿ ಅವರ ಮಾತು ನಡೆಯುವುದರಿಂದ ಅವರಿಗೆ ಸೂಕ್ತವೆನಿಸುವ ಅಭ್ಯರ್ಥಿಗೆ ಟಿಕೆಟ್‌ ಸಿಕ್ಕರೂ ಅಚ್ಚರಿ ಪಡಬೇಕಿಲ್ಲ.

ಅಲ್ಪಸಂಖ್ಯಾತರಿಂದಲೂ ಒತ್ತಡ (ಚಿತ್ರಗಳಿವೆ: ಅಬ್ದುಲ್‌ ಮನ್ನಾನ್‌ ಸೇಠ್‌ ಅಯಾಜ್‌ ಖಾನ್‌ ಡಾ. ಮಕ್ಸೂದ್‌ ಚಂದಾ) ರಾಜ್ಯದ ಒಟ್ಟು ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ ಮೂರು ಕ್ಷೇತ್ರಗಳನ್ನು ಅಲ್ಪಸಂಖ್ಯಾತರಿಗೆ ಬಿಟ್ಟು ಕೊಡಬೇಕು ಎಂದು ಆ ಸಮುದಾಯದ ಮುಖಂಡರು ಸಚಿವರು ಈಗಾಗಲೇ ಪಕ್ಷಕ್ಕೆ ತಿಳಿಸಿದ್ದಾರೆ. ಈ ವಿಷಯವನ್ನು ಸಚಿವರಾದ ರಹೀಂ ಖಾನ್‌ ಜಮೀರ್‌ ಅಹಮ್ಮದ್‌ ಖಾನ್‌ ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ಬೆಳಗಾವಿ ಬೀದರ್‌ ಹಾಗೂ ಬೆಂಗಳೂರು ಸೆಂಟ್ರಲ್‌ನಲ್ಲಿ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಒಂದುವೇಳೆ ಬೀದರ್‌ ಲೋಕಸಭೆ ಕ್ಷೇತ್ರವನ್ನು ಕಾಂಗ್ರೆಸ್‌ ಪಕ್ಷವು ಅಲ್ಪಸಂಖ್ಯಾತರಿಗೆ ಬಿಟ್ಟುಕೊಟ್ಟರೆ ಸಚಿವ ರಹೀಂ ಖಾನ್‌ ಅವರನ್ನು ಕಣಕ್ಕಿಳಿಸುವುದರ ಬಗ್ಗೆಯೂ ಚರ್ಚೆಗಳಾಗುತ್ತಿವೆ. ಆದರೆ ರಹೀಂ ಖಾನ್‌ ಒಲವು ಹೊಂದಿಲ್ಲ ಎಂದು ತಿಳಿದು ಬಂದಿದೆ. ಇನ್ನು ಹಲವು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿರುವ ಅಬ್ದುಲ್‌ ಮನ್ನಾನ್‌ ಸೇಠ್‌ ಕೂಡ ಟಿಕೆಟ್‌ಗಾಗಿ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಶಾಹೀನ್‌ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್‌ ಖದೀರ್‌ ಅವರ ಸಹೋದರರಾಗಿರುವ ಮನ್ನಾನ್‌ ಸೇಠ್‌ ಶೈಕ್ಷಣಿಕ ಕ್ಷೇತ್ರದಲ್ಲಿ ಸಹೋದರ ಮಾಡಿರುವ ಹೆಸರು ಕೂಡ ಬಳಸಿಕೊಂಡು ಒತ್ತಡ ಹಾಕುತ್ತಿದ್ದಾರೆ ಎಂದು ಗೊತ್ತಾಗಿದೆ. ಇನ್ನು ಪಕ್ಷದ ಹಿರಿಯ ಮುಖಂಡ ಮಕ್ಸೂದ್‌ ಚಂದಾ ಅಯಾಜ್‌ ಖಾನ್‌ ಕೂಡ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ.

ಆಕಾಂಕ್ಷಿಗಳು ಯಾರ್‍ಯಾರು? (ಉಳಿದವರ ಚಿತ್ರ ಈ ಬಾಕ್ಸ್‌ನೊಂದಿಗೆ ಬಳಸಬಹುದು) ಈಶ್ವರ ಬಿ. ಖಂಡ್ರೆ ಸಾಗರ್‌ ಖಂಡ್ರೆ ರಾಜಶೇಖರ ಪಾಟೀಲ ಹುಮನಾಬಾದ್‌ ಆನಂದ ದೇವಪ್ಪ ಬಸವರಾಜ ಬುಳ್ಳಾ ಅಶೋಕ್‌ ಖೇಣಿ ಅಬ್ದುಲ್‌ ಮನ್ನಾನ್‌ ಸೇಠ್‌ ಡಾ. ಮಕ್ಸೂದ್‌ ಚಂದಾ ಅಯಾಜ್‌ ಖಾನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT