ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಪರಿಹರಿಸಲು ಗಡುವು

ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಅಹವಾಲು ಸ್ವೀಕರಿಸಿದ ಸಚಿವ
Last Updated 5 ಏಪ್ರಿಲ್ 2022, 5:13 IST
ಅಕ್ಷರ ಗಾತ್ರ

ಔರಾದ್: ‘ಒಂದು ವಾರದಲ್ಲಿ ಯಾವ ಗ್ರಾಮಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೂರದಂತೆ ನೋಡಿಕೊಳ್ಳಬೇಕು’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿಯ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ಸಾರ್ವಜನಿಕ ಕುಂದು ಕೊರತೆ ಆಲಿಸಿದ ಸಚಿವರು,‘ಜನರ ಸಮಸ್ಯೆಗಳನ್ನು ಕಾಲ ಮಿತಿಯಲ್ಲಿ ಪರಿಹರಿಸಬೇಕು’ ಎಂದರು.

ನೀರಿನ ಸಮಸ್ಯೆ ಕುರಿತ ಹೆಚ್ಚಿನ ಕಾಳಜಿ ವಹಿಸಿದ ಸಚಿವರು ಪ್ರತಿ ಪಂಚಾಯಿತಿ ಪಿಡಿಒ ಅವರಿಂದ ಎಲ್ಲೆಲ್ಲಿ ಸಮಸ್ಯೆ ಇದೆ. ಅದನ್ನು ಪರಿಹರಿಸಲು ಏನು ತಯಾರಿ ಮಾಡಿಕೊಳ್ಳಲಾಗಿದೆ ಎಂಬುದರ ಕುರಿತು ವಿವರವಾದ ಮಾಹಿತಿ ಪಡೆದುಕೊಂಡರು.

ತಾವು ನೀಡಿದ ಗಡುವಿನ ಒಳಗೆ ಸಮಸ್ಯೆ ಪರಿಹಾರವಾಗಬೇಕು. ಈ ಕುರಿತಂತೆ ಎಲ್ಲ ಪಂಚಾಯಿತಿಯಿಂದ ಲಿಖಿತ ಮಾಹಿತಿ ಕೊಡಬೇಕು ಎಂದು ತಾಲ್ಲೂಕು ಪಂಚಾಯಿತಿ ಇಒ ಮಾಣಿಕರಾವ ಪಾಟೀಲ ಅವರಿಗೆ ಸೂಚಿಸಿದರು.

‘ಕಂದಾಯ ಇಲಾಖೆಯ ಕೆಲ ವಿಭಾಗಗಳಲ್ಲಿ ಸಾಕಷ್ಟು ದೂರುಗಳಿವೆ. ಸರ್ವೆ ವಿಭಾಗದಲ್ಲಿ ಕೆಲಸ ಸರಿಯಾಗಿ ಆಗುತ್ತಿಲ್ಲ. ರೈತರು ಸುತ್ತಾಡಿ ಸುಸ್ತಾಗುತ್ತಿದ್ದಾರೆ. ಈ ಕುರಿತು ಸರ್ಕಾರಕ್ಕೆ ವರದಿ ಕೊಡಬೇಕು’ ಎಂದು ತಹಶೀಲ್ದಾರ್ ಅರುಕುಮಾರ ಕುಲಕರ್ಣಿ ಅವರಿಗೆ ಸೂಚಿಸಿದರು.

ಪಹಣಿ ತಿದ್ದುಪಡಿ, ಪಡಿತರ ಚೀಟಿ, ಮಾಸಾಶನ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಅನೇಕ ಜನ ಸಚಿವರ ಮುಂದೆ ತಮ್ಮ ಗೋಳು ತೋಡಿಕೊಂಡರು. ತಮಗೆ ಬೆಳೆ ವಿಮೆ ಬಂದಿಲ್ಲ. ತೋಟಗಾರಿಕೆ ಇಲಾಖೆಯಿಂದ ಸ್ಪಂದನೆ ಸಿಗುತ್ತಿಲ್ಲ ಎಂದು ಕೆಲ ರೈತರು ಸಚಿವರ ಮುಂದೆ ಹೇಳಿಕೊಂಡರು.

‘ನೋಡಿ ತಾಲ್ಲೂಕಿನ ಜನರೇ ನನ್ನ ದೇವರು. ಜನರಿಗೆ ತೊಂದರೆ ಆದರೆ ನಾನು ಸಹಿಸುವುದಿಲ್ಲ. ಅದರಲ್ಲೂ ವೃದ್ಧರು, ಅಂಗವಿಕಲರು, ಮಹಿಳೆಯರಿಗೆ ಸತಾಯಿಸಿದರೆ ನಾನು ಸುಮ್ಮನಿರುವುದಿಲ್ಲ. ಇಂತಹವರ ಬಳಿ ಹಣ ಪಡೆಯುವುದು ಪಾಪದ ಕೆಲಸ’ ಎಂದು ಹೇಳಿದರು.

‘ಸಾಕಷ್ಟು ಹೋರಾಟದ ಫಲವಾಗಿ ಬೀದರ್-ಔರಾದ್ ನಡುವಿನ ಹೆದ್ದಾರಿ ಕಾಮಗಾರಿ ಶುರುವಾಗಿದೆ. ಆದರೆ ಕೆಲಸ ಸರಿ ಆಗುತ್ತಿಲ್ಲ. ಆದರೂ ತಾಲ್ಲೂಕಿನ ಇಬ್ಬರೂ ಸಚಿವರಿದ್ದರೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪುರ ಹೇಳಿದರು.

‘ನಾನು ಅನೇಕ ಬಾರಿ ಕಾಮಗಾರಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದೇನೆ. ಯಾವುದೇ ಕಾರಣಕ್ಕೆ ಕಳಪೆ ಕಾಮಗಾರಿ ಆಗುವುದಕ್ಕೆ ಬಿಡುವುದಿಲ್ಲ’ ಎಂದು ಸಚಿವರು ಭರವಸೆ ನೀಡಿದರು.

ಕಮಲನಗರ ತಹಶೀಲ್ದಾರ್ ರಮೇಶ ಪೆದ್ದೆ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT