ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ನಗರಸಭೆ: ಇಂದು ಮತದಾನ

ಮತ ಹಕ್ಕು ಚಲಾಯಿಸಲಿರುವ 1,53,325 ಜನ
Last Updated 26 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಬೀದರ್: ಅವಧಿ ಮುಕ್ತಾಯಗೊಂಡ ಬೀದರ್ ನಗರಸಭೆಯ 32 ವಾರ್ಡ್‍ಗಳು ಹಾಗೂ ಹಳ್ಳಿಖೇಡ(ಬಿ) ಪುರಸಭೆಯ ವಾರ್ಡ್ ಸಂಖ್ಯೆ 11 ರ ಸದಸ್ಯ ಸ್ಥಾನದ ಉಪ ಚುನಾವಣೆ ಮತದಾನ ಮಂಗಳವಾರ (ಏ.27) ನಡೆಯಲಿದೆ.

ಬೀದರ್ ನಗರಸಭೆಯ 35 ವಾರ್ಡ್‍ಗಳ ಪೈಕಿ ವಾರ್ಡ್ ಸಂಖ್ಯೆ 28 ರ ಸದಸ್ಯ ಸ್ಥಾನಕ್ಕೆ ಈಗಾಗಲೇ ಅವಿರೋಧ ಆಯ್ಕೆ ನಡೆದಿದೆ. ವಾರ್ಡ್ ಸಂಖ್ಯೆ 26 ಹಾಗೂ 32 ಹೊರತುಪಡಿಸಿ ಉಳಿದ 32 ಸ್ಥಾನಗಳಿಗೆ ಬೆಳಿಗ್ಗೆ 7 ರಿಂದ ಸಂಜೆ 6 ರ ವರೆಗೆ ಮತದಾನ ಜರುಗಲಿದೆ. ಏಪ್ರಿಲ್ 30 ರಂದು ಮತ ಎಣಿಕೆ ನಡೆಯಲಿದೆ.

19 ಅತಿಸೂಕ್ಷ್ಮ ಮತಗಟ್ಟೆ: ಬೀದರ್ ನಗರಸಭೆಯ 162 ಮತಗಟ್ಟೆಗಳಲ್ಲಿ 49 ಸೂಕ್ಷ್ಮ ಹಾಗೂ 19 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ.

200 ಮತಗಟ್ಟೆ ಅಧಿಕಾರಿಗಳು, 200 ಸಹಾಯಕ ಮತಗಟ್ಟೆ ಅಧಿಕಾರಿಗಳು ಹಾಗೂ 400 ಮತಗಟ್ಟೆ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಮತಗಟ್ಟೆ ಸಿಬ್ಬಂದಿ ನಗರದ ಗುರುನಾನಕ ಪಬ್ಲಿಕ್ ಸ್ಕೂಲ್‍ನಲ್ಲಿ ಚುನಾವಣಾ ಸಾಮಗ್ರಿಗಳನ್ನು ತೆಗೆದುಕೊಂಡು ಆಯಾ ಮತಗಟ್ಟೆಗಳಿಗೆ ತೆರಳಿದರು.

ಅಂತಿಮ ಕಣದಲ್ಲಿ 157 ಅಭ್ಯರ್ಥಿಗಳು:
ಬೀದರ್ ನಗರಸಭೆ ಚುನಾವಣೆಗೆ 176 ಮಂದಿ ನಾಮಪತ್ರ ಸಲ್ಲಿಸಿದ್ದರು. ಏಳು ನಾಮಪತ್ರಗಳು ತಿರಸ್ಕೃತಗೊಂಡಿದ್ದವು. 12 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದರು. 157 ಜನ ಚುನಾವಣಾ ಕಣದಲ್ಲಿ ಇದ್ದಾರೆ.

ಹಳ್ಳಿಖೇಡ (ಬಿ) ಪುರಸಭೆಯ ವಾರ್ಡ್ ಸಂಖ್ಯೆ 11ರ ಉಪ ಚುನಾವಣೆಗೆ 5 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇಬ್ಬರು ನಾಮಪತ್ರ ವಾಪಸ್ ಪಡೆದ ಕಾರಣ ಮೂವರು ಅಂತಿಮ ಕಣದಲ್ಲಿ ಇದ್ದಾರೆ.

1.53 ಲಕ್ಷ ಮತದಾರರು:
ಬೀದರ್ ನಗರಸಭೆ ಚುನಾವಣೆಯಲ್ಲಿ 77,609 ಪುರುಷರು, 75,703 ಮಹಿಳೆಯರು, 13 ಇತರ ಮತದಾರರು ಸೇರಿ ಒಟ್ಟು 1,53,325 ಮತದಾರರು ಮತ ಹಕ್ಕು ಚಲಾಯಿಸಲಿದ್ದಾರೆ. ಹಳ್ಳಿಖೇಡ(ಬಿ) ಪುರಸಭೆಯ ವಾರ್ಡ್ ಸಂಖ್ಯೆ 11 ರ ಉಪ ಚುನಾವಣೆಯಲ್ಲಿ 156 ಪುರುಷರು ಹಾಗೂ 140 ಮಹಿಳೆಯರು ಸೇರಿ 296 ಮತದಾರರು ಮತದಾನ ಮಾಡಲಿದ್ದಾರೆ.

ವೀಕ್ಷಕರ ನೇಮಕ:
ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಅವರನ್ನು ಬೀದರ್ ನಗರಸಭೆಯ ಅಧಿಕಾರಿಯನ್ನು ಚುನಾವಣೆ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.

ಸೋಂಕಿತರಿಗೂ ಮತದಾನಕ್ಕೆ ಅವಕಾಶ

ರಾಜ್ಯ ಚುನಾವಣಾ ಆಯೋಗವು ನಗರಸಭೆ ಚುನಾವಣೆ ಹಾಗೂ ಪುರಸಭೆ ಉಪ ಚುನಾವಣೆಯಲ್ಲಿ ಕೋವಿಡ್ ಸೋಂಕಿತರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಿದೆ.

ಮತದಾನ ಮುಕ್ತಾಯಕ್ಕೆ ಒಂದು ಗಂಟೆ ಮುಂಚಿತವಾಗಿ ಸೋಂಕಿತರಿಗೆ ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಮತದಾನಕ್ಕೆ ಅನುವು ಮಾಡಿಕೊಡಬೇಕು ಎಂದು ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದೆ.

ಮತಗಟ್ಟೆ ಅಧಿಕಾರಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮತದಾರರು ಮಾಸ್ಕ್ ಧರಿಸಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಬೇಕು ಎಂದು ತಿಳಿಸಿದೆ.

ನ್ಯಾಯಸಮ್ಮತ ಚುನಾವಣೆಗೆ ಕ್ರಮ

ಬೀದರ್ ನಗರಸಭೆ ಹಾಗೂ ಹಳ್ಳಿಖೇಡ(ಬಿ) ಪುರಸಭೆಯ ವಾರ್ಡ್ ಸಂಖ್ಯೆ 11 ರ ಉಪ ಚುನಾವಣೆಯನ್ನು ನಿಷ್ಪಕ್ಷಪಾತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ತಿಳಿಸಿದ್ದಾರೆ. ಮತಗಟ್ಟೆ ಅಧಿಕಾರಿಗಳಿಗೆ ಕೋವಿಡ್ ಕಿಟ್ ಕೊಡಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಸೂಕ್ತ ಪೊಲೀಸ್ ಬಂದೋಬಸ್ತ್

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸೂಕ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಮತದಾರರು ಯಾವುದೇ ಒತ್ತಡ, ಭೀತಿ ಇಲ್ಲದೆ ನಿರ್ಭಯವಾಗಿ ಮತ ಚಲಾಯಿಸಲು ಅನುಕೂಲವಾಗುವಂತೆ ಅಗತ್ಯ ಪ್ರಮಾಣದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಬ್ಬರು ಡಿವೈಎಸ್‍ಪಿ, ಏಳು ಸಿಪಿಐ, 10 ಪಿಎಸ್‍ಐ, 132 ಹೆಡ್ ಕಾನ್‍ಸ್ಟೆಬಲ್, 169 ಕಾನ್ಸ್‍ಸ್ಟೆಬಲ್‍ಗಳು, 7 ಡಿಎಆರ್ ಹಾಗೂ 2 ಕೆಎಸ್‍ಆರ್‍ಪಿ ತುಕ್ಕಡಿಗಳು ಬಂದೋಬಸ್ತ್ ಮಾಡಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ತಿಳಿಸಿದ್ದಾರೆ.

ಮತದಾನ ಅವಧಿ ಒಂದು ಗಂಟೆ ವಿಸ್ತರಣೆ

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾನದ ಅವಧಿಯನ್ನು ಒಂದು ಗಂಟೆ ವಿಸ್ತರಿಸಲಾಗಿದೆ. ಕೋವಿಡ್ ಸೋಂಕಿನ ಕಾರಣ ಸುರಕ್ಷತಾ ಕ್ರಮಗಳೊಂದಿಗೆ ಮತದಾನ ನಡೆಸುವುದು ಅವಶ್ಯಕವಾಗಿದೆ. ಮತದಾರರ ಸುರಕ್ಷತೆ ಹಾಗೂ ಸೋಂಕಿತರಿಗೂ ಮತದಾನ ಮಾಡಲು ಅವಕಾಶ ನೀಡುವ ಉದ್ದೇಶದಿಂದ ಮತದಾನವನ್ನು ಹೆಚ್ಚುವರಿ ಒಂದು ಗಂಟೆ ವಿಸ್ತರಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT