ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಔರಾದ್ | ಪಾಸ್ ವಿಳಂಬ, ಬಸ್ ಕೊರತೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

Published 26 ಜೂನ್ 2024, 15:48 IST
Last Updated 26 ಜೂನ್ 2024, 15:48 IST
ಅಕ್ಷರ ಗಾತ್ರ

ಔರಾದ್: ಬಸ್ ಪಾಸ್ ವಿತರಿಸುವಲ್ಲಿ ವಿಳಂಬ ಹಾಗೂ ಬಸ್ ಕೊರತೆ ನಿವಾರಿಸುವಂತೆ ಆಗ್ರಹಿಸಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಬುಧವಾರ ಇಲ್ಲಿಯ ಕನ್ನಡಾಂಬೆ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಎಬಿವಿಪಿ ಮುಖಂಡ ಅನೀಲ ಮೇತ್ರೆ, ಅಶೋಕ ಶೆಂಬೆಳ್ಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

‘ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ ಇನ್ನು ಬಸ್ ಪಾಸ್ ಸಿಗುತ್ತಿಲ್ಲ. ಬಸ್ ಪಾಸ್ ವಿಷಯದಲ್ಲಿ ಸಂಬಂಧಿತರು ಸೂಕ್ತ ಮಾಹಿತಿ ನೀಡುತ್ತಿಲ್ಲ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಿತ್ಯ ದುಡ್ಡು ಕೊಟ್ಟು ಶಾಲೆ ಕಾಲೇಜುಗಳಿಗೆ ಹೋಗಿ ಬರಬೇಕಾಗಿದೆ’ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದರು.

‘ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡಿದ್ದರಿಂದ ಮಹಿಳೆಯರ ಓಡಾಟ ಸಂಖ್ಯೆ ಜಾಸ್ತಿಯಾಗಿದೆ. ಪ್ರಯಾಣಿಕರ ದಟ್ಟಣೆ ಪ್ರಕಾರ ತಾಲ್ಲೂಕಿನಲ್ಲಿ ಬಸ್ ಓಡುತ್ತಿಲ್ಲ. ಹೊಸ ಬಸ್ ಬಂದಿವೆ ಎಂದು ಹೇಳುತ್ತಿದ್ದರೂ ಜನ ಬಾಗಿಲಲ್ಲಿ ನಿಂತು ಪ್ರಯಾಣಿಸುತ್ತಿದ್ದಾರೆ. ಸಮರ್ಪಕ ಬಸ್ ಸೇವೆ ಸಿಗದೆ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆ ಕಾಲೇಜುಗಳಿಗೆ ಹೋಗಲು ಆಗುತ್ತಿಲ್ಲ. ಒಂದು ವಾರದಲ್ಲಿ ನಮ್ಮ ಬೇಡಿಕೆಗೆ ಸ್ಪಂದನೆ ಸಿಗದೆ ಇದ್ದಲ್ಲಿ ನಾವು ಮತ್ತೆ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಸ್ಥಳಕ್ಕೆ ಆಗಮಿಸಿದ ಘಟಕ ವ್ಯವಸ್ಥಾಪಕ ಎಸ್.ಪಿ.ರಾಠೋಡ್ ಅವರಿಗೆ ಮನವಿಪತ್ರ ಸಲ್ಲಿಸಿದರು. ಪಿಎಸ್‍ಐ ಉಪೇಂದ್ರ ಹಾಜರಿದ್ದರು. ವಿದ್ಯಾರ್ಥಿ ಮುಖಂಡ ಅಂಬಾದಾಸ ನೇಳಗೆ ಪ್ರಶಾಂತ ಔರಾದೆ, ವಿದ್ಯಾರ್ಥಿನಿ ಇಂದ್ರಾಣಿ ಸಗರ, ಪೂಜಾ, ಗಾಯತ್ರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT