ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ದಿನ ಇದೇ ನಿರಂತರ ಮಳೆ

ಚಿಮಕೋಡದಲ್ಲಿ ಗರಿಷ್ಠ 64 ಮಿ.ಮೀ. ಮಳೆ
Last Updated 11 ಜೂನ್ 2020, 13:44 IST
ಅಕ್ಷರ ಗಾತ್ರ

ಬೀದರ್‌: 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಆಕಾಶದಲ್ಲಿ ದಟ್ಟ ಮೋಡಗಳು ಆವರಿಸಿಕೊಳ್ಳುತ್ತಿದ್ದು, ಬರುವ ಮೂರು ದಿನ ನಿರಂತರವಾಗಿ ಮಳೆ ಸುರಿಯುವ ಸಾಧ್ಯತೆ ಇದೆ.

ಮೇ ಕೊನೆಯ ವಾರದಲ್ಲಿ 41 ಡಿಗ್ರಿ ಸೆಲ್ಸಿಯಸ್‌ ವರೆಗೂ ತಲುಪಿದ್ದ ಗರಿಷ್ಠ ಉಷ್ಣಾಂಶ ಈಗ 27ಕ್ಕೆ ಕುಸಿದಿದೆ. ಕನಿಷ್ಠ ಉಷ್ಣಾಂಶ 22 ದಾಖಲಾಗಿದೆ. ಬಿಸಿಲಿನ ಧಗೆ ಸಂಪೂರ್ಣ ಕಡಿಮೆಯಾಗಿದ್ದು, ರಾತ್ರಿ ತಂಪಾದ ವಾತಾವರಣ ಇರುತ್ತಿದೆ.

‘ಈ ವರ್ಷ ಮಳೆಯ ಕೊರತೆ ಇಲ್ಲ. ಮುಂಗಾರು ಚೆನ್ನಾಗಿದೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರ ಮೋಡ ಕವಿದ ವಾತಾವರಣ ಇರಲಿದ್ದು, ನಿರಂತರವಾಗಿ ಮಳೆ ಸುರಿಯುವ ಸಾಧ್ಯತೆ ಇದೆ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(ಕೆಎಸ್‌ಎನ್‌ಡಿಎಂ)ದ ಯೋಜನಾ ವಿಜ್ಞಾನಿ ಗಂಗಾಧರ ಮಠ ಹೇಳುತ್ತಾರೆ.

ಬೀದರ್‌ ಹಾಗೂ ಭಾಲ್ಕಿ ತಾಲ್ಲೂಕಿನಲ್ಲಿ ಗುರುವಾರ ಬೆಳಗಿನ ಜಾವ ಉತ್ತಮ ಮಳೆ ಸುರಿದಿದೆ. ಚಿಮಕೋಡದಲ್ಲಿ ಅತಿ ಹೆಚ್ಚು 64 ಮಿ.ಮೀ. ಮಳೆಯಾಗಿದೆ.

ಬೀದರ್‌ ಹೋಬಳಿಯಲ್ಲಿ 64 ಮಿ.ಮೀ., ಜನವಾಡದಲ್ಲಿ 24 ಮಿ.ಮೀ., ಬೀದರ್‌ ಉತ್ತರದಲ್ಲಿ 62 ಮಿ.ಮೀ., ಹುಮನಾಬಾದ್‌ನಲ್ಲಿ 26 ಮಿ.ಮೀ., ಹಳ್ಳಿಖೇಡದಲ್ಲಿ 29 ಮಿ.ಮೀ., ಖಟಕಚಿಂಚೋಳಿಯಲ್ಲಿ 51 ಮಿ.ಮೀ. ಹಾಗೂ ಚಿಟಗುಪ್ಪದಲ್ಲಿ 20 ಮಿ.ಮೀ. ಮಳೆಯಾಗಿದೆ.

ಭಾಲ್ಕಿ ಹೋಬಳಿಯಲ್ಲಿ 61 ಮಿ.ಮೀ., ಲಖನಗಾಂವ್‌ದಲ್ಲಿ 51 ಮಿ.ಮೀ., ಸಾಯಿಗಾಂವದಲ್ಲಿ 28 ಮಿ.ಮೀ., ಖಟಕಚಿಂಚೋಳಿಯಲ್ಲಿ 51 ಮಿ.ಮೀ., ಬಸವಕಲ್ಯಾಣದಲ್ಲಿ 38 ಮಿ.ಮೀ., ಹುಲಸೂರಲ್ಲಿ 30 ಮಿ.ಮೀ., ರಾಜೇಶ್ವರದಲ್ಲಿ 38 ಮಿ.ಮೀ., ಮುಡಬಿಯಲ್ಲಿ 29 ಮಿ.ಮೀ., ಔರಾದ್‌ನಲ್ಲಿ 32 ಮಿ.ಮೀ., ಖಟಕ ಚಿಂಚೋಳಿಯಲ್ಲಿ 51 ಮಿ.ಮೀ., ಕಮಲನಗರದಲ್ಲಿ 41 ಮಿ.ಮೀ., ದಾಬಾಕಾದಲ್ಲಿ 46 ಮಿ.ಮೀ. ಮಳೆ ಸುರಿದಿದೆ.

ಬೀಜ ಖರೀದಿಗೆ ಮುಗಿ ಬೀಳುತ್ತಿರುವ ರೈತರು

ಬೀಜ ಮೊಳಕೆಯೊಡೆಯದ ವಿವಾದದಿಂದಾಗಿ ಬೀಜ ಕಂಪನಿಗಳು ಬಾಕಿ ಬೀಜ ವಿತರಣೆಗೆ ಹಿಂದೇಟು ಹಾಕುತ್ತಿವೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಕೊರತೆ ಕಂಡು ಬಂದಿದೆ. ಹೀಗಾಗಿ ರೈತರು ಬೀಜ ಖರೀದಿಗೆ ಮುಗಿ ಬೀಳುತ್ತಿದ್ದಾರೆ.

‘ಲಾಕ್‌ಡೌನ್‌ ಅವಧಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು. ಹೀಗಾಗಿ ಈ ಅವಧಿಯಲ್ಲಿಯೇ ರೈತರು ಉಳುಮೆ ಮಾಡಿಕೊಂಡು ಬಿತ್ತನೆಗೆ ಭೂಮಿ ಹದ ಮಾಡಿಕೊಂಡಿದ್ದಾರೆ. ಜೂನ್‌ ಎರಡನೇ ವಾರದಲ್ಲಿ 38.80 ಮಿ.ಮೀ. ವಾಡಿಕೆಯಷ್ಟು ಮಳೆಯಾಗುತ್ತದೆ. ಆದರೆ 56.35 ಮಿ.ಮೀ. ಮಳೆಯಾಗಿದೆ. ಬಿತ್ತನೆಗೆ ಸಕಾಲವಾಗಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿದ್ಯಾನಂದ ಹೇಳಿದ್ದಾರೆ.

ಜಿಲ್ಲೆಯಲ್ಲಿ 3.62 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 1.60 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸೋಯಾ ಬಿತ್ತನೆಗೆ ಸಿದ್ಧತೆ ನಡೆದಿದೆ. ಉಳಿದ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, ಉದ್ದು, ಹೆಸರು, ಮೆಕ್ಕೆಜೋಳ, ಸೂರ್ಯಕಾಂತಿ. ಹೈಬ್ರೀಡ್‌ ಜೋಳ ಬಿತ್ತನೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT