ಬುಧವಾರ, ಸೆಪ್ಟೆಂಬರ್ 28, 2022
27 °C

ಮನೆ ಮೇಲಿನ ತಿರಂಗಾ ಇಳಿಸಿ, ರಾಷ್ಟ್ರಧ್ವಜ ಗೌರವಿಸಿ: ಡಂಗೂರ ಬಾರಿಸಿ ಜಾಗೃತಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಜಿಲ್ಲೆಯಾದ್ಯಂತ ರಾಷ್ಟ್ರೀಯ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗಿದೆ. ಮೂರು ದಿನ ಮನೆಗಳ ಮೇಲೆ ಧ್ವಜಗಳನ್ನೂ ಹಾರಿಸಲಾಗಿದೆ. ಸ್ವಾತಂತ್ರ್ಯೋತ್ಸವದ ನಂತರ ಧ್ವಜವನ್ನು ಕೆಳಗಿಳಿಸಿ ಸುರಕ್ಷಿತವಾಗಿ ತೆಗೆದಿರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದರೂ ಅನೇಕ ರಾಜಕಾರಣಿಗಳು, ಶಿಕ್ಷಕರ ಮನೆಗಳು ಹಾಗೂ ಮಾರಾಟ ಮಳಿಗೆಗಳ ಮೇಲೆ ಈಗಲೂ ಧ್ವಜಗಳು ಹಾರಾಡುತ್ತಿವೆ.

 ಅನೇಕ ರಾಜಕೀಯ ನಾಯಕರು, ಸ್ಥಳೀಯ ಸ್ಥಂಸ್ಥೆಗಳ ಮಾಜಿ ಸದಸ್ಯರು, ಪ್ರಾಧ್ಯಾಪಕರು ಹಾಗೂ ಶಿಕ್ಷಕರ ಮನೆಗಳ ಮೇಲೂ ಧ್ವಜಗಳು ಹಾಗೆಯೇ ಇವೆ. ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಬೇಕಾದ ಶಿಕ್ಷಕರೇ ಧ್ವಜವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳದಿರುವುದಕ್ಕೆ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗಿವೆ.

ಜಿಲ್ಲೆಯ ಕೆಲ ಗ್ರಾಮ ಪಂಚಾಯಿತಿಗಳು ಮಾತ್ರ ಆಗಸ್ಟ್‌ 15ರಂದು ಸಂಜೆಯೇ ಡಂಗೂರ ಬಾರಿಸಿ, ಮೈಕ್‌ ಹಿಡಿದು ಮನೆಗಳ ಮೇಲಿನ ಧ್ವಜಗಳನ್ನು ಸುರಕ್ಷಿತವಾಗಿ ತೆಗೆದಿಡುವಂತೆ ಗ್ರಾಮಸ್ಥರಿಗೆ ಮನವಿ ಮಾಡಿಕೊಂಡಿವೆ. ಧ್ವಜ ತೆಗೆಯದಿದ್ದರೆ ದಂಡ ತೆರಬೇಕಾಗಲಿದೆ ಎನ್ನುವ ಎಚ್ಚರಿಕೆಯನ್ನೂ ನೀಡಿವೆ. ಆದರೆ, ಕೆಲವರು ಮಾತ್ರ ಧ್ವಜ ತೆಗೆದಿದ್ದು, ಇನ್ನೂ ಕೆಲವರ ಮನೆಗಳ ಮೇಲೆ ಧ್ವಜಗಳು ಹಾಗೆಯೇ ಇವೆ.

ಜಿಲ್ಲಾಡಳಿತವು ಅಧಿಕಾರಿಗಳ ಮೂಲಕ ಆರಂಭದಿಂದಲೂ ಧ್ವಜ ಸಂಹಿತೆಯ ಬಗ್ಗೆ ತಿಳಿವಳಿಕೆ ನೀಡುತ್ತಲೇ ಇದೆ. ಆದರೆ, ಕಾರ್ಯಕ್ರಮದಲ್ಲಿ ಕೇಳಿಸಿಕೊಂಡವರು ಮಾತ್ರ ಸ್ವಲ್ಪಮಟ್ಟಿಗೆ ಪಾಲಿಸಿದ್ದಾರೆ. ಇನ್ನೂ ಬಹಳಷ್ಟು ಜನರಿಗೆ ಗೊತ್ತೇ ಆಗಿಲ್ಲ. ಕೆಲ ಅಂಗಡಿಗಳ ಮಾಲೀಕರು ಧ್ವಜಗಳನ್ನು ಮೂಲೆಯಲ್ಲಿ ಇಟ್ಟಿದ್ದಾರೆ. ಕೆಲವರು ಮನೆಯೊಳಗೆ ಒಯ್ದು ಕಟ್ಟಿದ್ದಾರೆ. ಒಟ್ಟಾರೆ ಜಿಲ್ಲೆಯಾದ್ಯಂತ ಧ್ವಜ ಸಂಹಿತೆ ಬಹಿರಂಗವಾಗಿಯೇ ಉಲ್ಲಂಘನೆಯಾಗುತ್ತಿದೆ.

‘ಹರ್ ಘರ್‌ ತಿರಂಗಾ ಪ್ರಚಾರದ ಸಂದರ್ಭದಲ್ಲೇ ಸಾರ್ವಜನಿಕರಿಗೆ ಸರಿಯಾದ ತಿಳಿವಳಿಕೆ ನೀಡಬೇಕಿತ್ತು. ಸ್ವಾತಂತ್ರ್ಯೋತ್ಸವ ನಡೆದು ಎರಡು ದಿನಗಳು ಕಳೆದರೂ ಅನೇಕ ಮನೆಗಳ ಮೇಲಿನ ಧ್ವಜ ಇಳಿಸಿಲ್ಲ. ಜಿಲ್ಲಾಡಳಿತ ಮಲಗಿರುವ ಕಾರಣ ಸಾರ್ವಜನಿಕರೂ ಗಂಭೀರವಾಗಿಲ್ಲ. ಕಣ್ಣೆದುರು ಧ್ವಜ ಸಂಹಿತೆ ಉಲ್ಲಂಘನೆಯಾಗುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿರುವುದು ಸರಿಯಲ್ಲ’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನರಸಿಂಗ್‌ ಸಾಮ್ರಾಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಗರ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯತ್ ರಾಜ್‌ ಸಂಸ್ಥೆಗಳ ಮೂಲಕ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಸೂಚನೆ ನೀಡಲಾಗಿದೆ. ಈಗಾಗಲೇ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.

ಸಂಘ, ಸಂಸ್ಥೆಗಳು ಹಾಗೂ ಸಾರ್ವಜನಿಕರು ತಮ್ಮ ಮನೆಗಳ ಮೇಲೆ ಕಟ್ಟಿರುವ ಧ್ವಜಗಳನ್ನು ಗೌರವಯುತವಾಗಿ ತೆಗೆದು ಮನೆಯಲ್ಲಿ ಸುರಕ್ಷಿತ ಜಾಗದಲ್ಲಿ ಇಡಬೇಕು. ಕಸದ ಬುಟ್ಟಿ ಅಥವಾ ಹೊರಗಡೆ ಎಸೆಯಬಾರದು’ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು