ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ ಜಿಲ್ಲೆಯಲ್ಲಿ ಪಕ್ಷಿಧಾಮ: ಸಚಿವ ಖಂಡ್ರೆ

Published : 15 ಆಗಸ್ಟ್ 2024, 8:41 IST
Last Updated : 15 ಆಗಸ್ಟ್ 2024, 8:41 IST
ಫಾಲೋ ಮಾಡಿ
Comments

ಬೀದರ್‌: ‘ಬೀದರ್‌ ಹಾಗೂ ಭಾಲ್ಕಿ ಮಧ್ಯದಲ್ಲಿರುವ ಹೊನ್ನಿಕೇರಿ ಅರಣ್ಯ ಪ್ರದೇಶದಲ್ಲಿ ಪಕ್ಷಿಧಾಮ ಮಾಡಲು ನಿರ್ಧರಿಸಲಾಗಿದೆ’ ಎಂದು ಪರಿಸರ, ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಪಕ್ಷಿಧಾಮ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಈಗಾಗಲೇ ₹5 ಕೋಟಿ ಮಂಜೂರು ಮಾಡಲಾಗಿದೆ. ಪಕ್ಷಿಧಾಮಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ ಸಿದ್ಧವಾಗುತ್ತಿದೆ. ಹೊನ್ನಿಕೇರಿ ಸಮೀಪವೇ ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೂಡ ಆರಂಭಿಸಲಾಗುವುದು ಎಂದು ನಗರದ ಜಿಲ್ಲಾ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಯಾರ ಮಂತ್ರಿ ಸ್ಥಾನವೂ ಹೋಗೊಲ್ಲ:

‘ಯಾರ ಮಂತ್ರಿ ಸ್ಥಾನವೂ ಹೋಗೊಲ್ಲ. ಪೌರಾಡಳಿತ ಸಚಿವ ರಹೀಂ ಖಾನ್‌ ಅವರು ಬೀದರ್‌ ನಗರಕ್ಕೆ ₹300 ಕೋಟಿ ಅನುದಾನ ಮಂಜೂರು ಮಾಡಿಸಿದ್ದಾರೆ. ಅವರನ್ನು ಮಂತ್ರಿ ಸ್ಥಾನದಿಂದ ಕೈಬಿಡುತ್ತಾರೆ ಎನ್ನುವುದು ಸುಳ್ಳು. ರಹೀಂ ಖಾನ್‌ ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಮಧ್ಯ ಪ್ರವೇಶಿಸಿ ಮಾತನಾಡಿದ ಸಚಿವ ರಹೀಂ ಖಾನ್‌, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಇಬ್ಬರಷ್ಟೇ ಸಚಿವರಿದ್ದೇವೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ:

‘ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಎಲ್ಲ ಐದೂ ಗ್ಯಾರಂಟಿಗಳು ಯಥಾಪ್ರಕಾರ ಮುಂದುವರೆಯಲಿವೆ. ಸಚಿವ ಸಂಪುಟದ ಕೆಲ ಸಹದ್ಯೋಗಿಗಳು ಅವರ ವೈಯಕ್ತಿಕ ಸಲಹೆ ಕೊಟ್ಟಿದ್ದಾರೆ. ಅದನ್ನು ಸಚಿವ ಸಂಪುಟದಲ್ಲಿ ಚರ್ಚಿಸುತ್ತೇವೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಆರ್ಥಿಕವಾಗಿ ಸದೃಢರಾಗಿದ್ದೇವೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ₹2 ಸಾವಿರ ಕೋಟಿ ಕೊಡಲಾಗುತ್ತಿದೆ. ಹಣವಿಲ್ಲದಿದ್ದರೆ ಇದು ಹೇಗೆ ಸಾಧ್ಯವಾಗುತ್ತಿತ್ತು ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT