ಬೀದರ್: ‘ಅಲ್ಪಸಂಖ್ಯಾತರ ಅಸ್ಮಿತೆ ಮೇಲೆ ದಾಳಿ ನಡೆಸಲು ಬಿಜೆಪಿ ಸತತವಾಗಿ ಯತ್ನಿಸುತ್ತಿದೆ. ಅದನ್ನು ತಡೆಯಲು ಕಾಂಗ್ರೆಸ್ ಕೆಲಸ ಮಾಡುತ್ತಿದೆ’ ಎಂದು ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯರೂ ಆದ ರಾಜ್ಯಸಭೆ ಸದಸ್ಯ ಸೈಯದ್ ನಾಸೀರ್ ಹುಸೇನ್ ಹೇಳಿದರು.
ನಗರದಲ್ಲಿ ಭಾನುವಾರ ಕಾಂಗ್ರೆಸ್ ಅಲ್ಪಸಂಖ್ಯಾತರ ಮೋರ್ಚಾದಿಂದ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಯಾವುದೇ ದೇಶವಿರಲಿ ಅಲ್ಲಿರುವ ಅಲ್ಪಸಂಖ್ಯಾತರು ಅವರ ಅಸ್ಮಿತೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಅಲ್ಪಸಂಖ್ಯಾತರ ವಿರುದ್ಧ ಕೆಲಸ ಮಾಡುತ್ತಿವೆ. ಅದನ್ನು ತಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ’ ಎಂದರು.
‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಲ್ಪಸಂಖ್ಯಾತರ ಪರ ದೇಶದಲ್ಲಿ ಧ್ವನಿ ಎತ್ತುತ್ತಿದ್ದಾರೆ. ಸಂವಿಧಾನ ರಕ್ಷಣೆಗೆ ಕೆಲಸ ಮಾಡುತ್ತಿದ್ದಾರೆ. ನಮಗೆ ಅಧಿಕಾರ ಬೇಕಿಲ್ಲ. ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವ, ದೇಶದ ವೈವಿಧ್ಯ ಉಳಿಸಬೇಕಿದೆ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಬದ್ಧತೆ’ ಎಂದು ಹೇಳಿದರು.
‘ಗಾಜಾದಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸ್ಪಷ್ಟ ನಿಲುವು ವ್ಯಕ್ತಪಡಿಸಿಲ್ಲ. ಇದು ನಾಚಿಕೆಗೇಡಿನ ಸಂಗತಿ. ಭಾರತ ಎಂದೂ ಕೂಡ ಯುದ್ಧ, ಅಶಾಂತಿ ಪರ ಇರಲಿಲ್ಲ. ಆದರೆ, ಈಗ ಏನಾಗುತ್ತಿದೆ? ಪ್ರತಿಯೊಂದು ವಿಷಯವನ್ನು ಕೇಂದ್ರ ಸರ್ಕಾರ ತನಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಳಸಿಕೊಳ್ಳುತ್ತಿದೆ. ತನ್ನ ಹಿತಾಸಕ್ತಿಗಾಗಿ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ’ ಎಂದು ಹೇಳಿದರು.
‘ನಿರುದ್ಯೋಗ, ಬಡತನ, ರೈತರು, ಕಾರ್ಮಿಕರ ಹಿತಾಸಕ್ತಿ ಪರವಾಗಿ ಕಾಂಗ್ರೆಸ್ ಕೆಲಸ ಮಾಡುತ್ತದೆ. ಈ ವಿಷಯಗಳ ಕುರಿತು ಮಾತನಾಡಿದರೆ ಸಂಸತ್ತಿನಿಂದ ನಮ್ಮನ್ನು ಅಮಾನತು ಮಾಡಲಾಗುತ್ತದೆ. 75 ವರ್ಷಗಳ ನಮ್ಮ ದೇಶದ ಇತಿಹಾಸದಲ್ಲಿ ಎಂದೂ ದನಿ ಅಡಗಿಸುವ ಕೆಲಸ ಆಗುತ್ತಿರಲಿಲ್ಲ. ಆದರೆ, ಸಂಸತ್ತಿನಲ್ಲಿ ಮಾತನಾಡಲು ವಿರೋಧ ಪಕ್ಷದವರಿಗೆ ಅವಕಾಶ ಕಲ್ಪಿಸುತ್ತಿಲ್ಲ. ಅದರ ವಿರುದ್ಧ ಧ್ವನಿ ಎತ್ತಬೇಕು. ಪ್ರಜಾಪ್ರಭುತ್ವ ಉಳಿಸಬೇಕಾಗಿದೆ’ ಎಂದರು.
‘ದೇಶದಲ್ಲಿ ‘ಇಂಡಿಯಾ’ ಒಕ್ಕೂಟ ರಚಿಸಿಕೊಂಡಿದ್ದು, 2024ರಲ್ಲಿ ದೇಶದಲ್ಲಿ ಬದಲಾವಣೆಗಳು ಆಗುವ ಭರವಸೆ ಇದೆ. ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನ ಬಿಜೆಪಿಗೆ ಪಾಠ ಕಲಿಸಿದ್ದಾರೆ. ದೇಶದಲ್ಲೂ ಬದಲಾವಣೆ ಆಗುವ ಭರವಸೆ ಇದೆ’ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್, ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಮಾಜಿ ಸಚಿವ ರಾಜಶೇಖರ ಪಾಟೀಲ ಹುಮನಾಬಾದ್ ಇತರರು ಹಾಜರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಸೈಯದ್ ನಾಸೀರ್ ಹುಸೇನ್ ಅವರನ್ನು ನಗರ ಹೊರವಲಯದ ಶಹಾಪುರ ಗೇಟ್‌ನಿಂದ ಫತೇ ದರ್ವಾಜಾ ವರೆಗೆ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.