ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಸುರೇಶ್ ವಿರುದ್ಧ ಪ್ರತಿಭಟನೆ

ಸಹೋದರರ ವಿರುದ್ಧ ಘೋಷಣೆ: ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಜಾಥಾ
Last Updated 5 ಜನವರಿ 2022, 4:24 IST
ಅಕ್ಷರ ಗಾತ್ರ

ಬೀದರ್: ರಾಮನಗರದ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರು ಸಚಿವ ಸಿ.ಎನ್.ಅಶ್ವತ್ಥ ನಾರಾಯಣ ಅವರ ಭಾಷಣಕ್ಕೆ ಅಡ್ಡಿಪಡಿಸಿ ಗೂಂಡಾ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಸಂಸದ ಸುರೇಶ್ ಹಾಗೂ ಅವರ ಸಹೋದರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ರಾವಣರಿಂದ ರಾಮನಗರ ಕಾಪಾಡಿರಿ’, ‘ರಾಮನ ನಾಡಿನಲ್ಲಿ ರಾವಣರ ಆರ್ಭಟ ನಡೆಯಲು ಬಿಡುವುದಿಲ್ಲ’, ‘ಕಲಿಯುಗದ ರಾವಣ, ಕೊತ್ವಾಲ್‌ನಿಂದ ಕಲಿತ ಪಾಠದ ಅನಾವರಣ’, ‘ಗೂಂಡಾಗಿರಿಗೆ ಬಗ್ಗೊಲ್ಲ, ಬಾಗೋಲ್ಲ’ ‘ವಿರೋಧಿಸುವುದೇ ವಿರೋಧ ಪಕ್ಷದ ಕೆಲಸವಲ್ಲ, ಅಭಿವೃದ್ಧಿಗೆ ಸಹಕಾರ ನೀಡಬೇಕಾದ್ದು ಅವರ ಕರ್ತವ್ಯ’ ಎನ್ನುವ ಘೋಷಣಾ ಫಲಕಗಳನ್ನು ಹಿಡಿದು ಜಿಲ್ಲಾಧಿಕಾರಿ ಕಚೇರಿ ವರೆಗೆ ಬಂದರು. ಕೆಲ ಹೊತ್ತು ಘೋಷಣೆಗಳನ್ನು ಕೂಗಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವನಾಂದ ಮಂಠಾಳಕರ್, ಕಲಬುರಗಿ ವಿಭಾಗದ ಸಹ ಪ್ರಭಾರಿ ಈಶ್ವರ್‌ಸಿಂಗ್ ಠಾಕೂರ್‌, ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ, ಬುಡಾ ಅಧ್ಯಕ್ಷ ಬಾಬು ವಾಲಿ, ಮಹೇಶ್ವರ ಸ್ವಾಮಿ, ಮನ್ಮಥ ಮೀನಕೇರಾ, ಗುರುನಾಥ ಜ್ಯಾಂತಿಕರ್, ಅರಿಹಂತ ಸಾವಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ಕ್ರಮ ಕೈಗೊಳ್ಳಿ’

ಬಸವಕಲ್ಯಾಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಬಿಜೆಪಿ ತಾಲ್ಲೂಕು ಘಟಕದಿಂದ ಮಂಗಳವಾರ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ ಅವರು ಮಾತನಾಡುತ್ತಿದ್ದಾರೆ ಮೈಕ್ ಕಿತ್ತೆಸೆಯಲಾಗಿದೆ. ಡಿ.ಕೆ.ಸುರೇಶ್‌ ಅವರ ವರ್ತನೆ ಕೂಡ ಸರಿ ಇರಲಿಲ್ಲ ಎಂದು ಆರೋಪಿಸಲಾಯಿತು.

ಪಕ್ಷದ ಗ್ರಾಮೀಣ ಘಟಕದ ಅಧ್ಯಕ್ಷ ಅಶೋಕ ವಕಾರೆ, ನಗರ ಘಟಕದ ಅಧ್ಯಕ್ಷ ಅರವಿಂದ ಮುತ್ತೆ, ದೀಪಕ ಗಾಯಕವಾಡ, ಶೋಭಾ ತೆಲಂಗ್, ಸಿದ್ದು ಬಿರಾದಾರ, ಹಣಮಂತ ಧನಶೆಟ್ಟಿ, ಸಂಜೀವ ಸುಗೂರೆ, ಸಂಜೀವ ಜಾಧವ, ದಿಗಂಬರ ಜಲ್ದೆ, ಯೋಗೇಶ ಘಾಳೆ, ಸಾಗರ ಸುಗೂರೆ, ಶಿವಕುಮಾರ ಆಗ್ರೆ, ಜಗದೀಶ ಅಂಬಲಗೆ, ನೀಲಕಂಠ ಭೆಂಡೆ, ಬಾಬುರಾವ್ ಹಿಂಸೆ, ಶಿವರಾಜ ಮೆಂಗದೆ, ರಾಜೀವ ರಾಜೋಳೆ, ಶಿರೋಮಣಿ, ದಯಾನಂದ, ರಾಜಕುಮಾರ ಅಲಶೆಟ್ಟಿ ಮೊದಲಾದವರು ಈ ವೇಲೆ ಪಾಲ್ಗೊಂಡಿದ್ದರು.

‘ಗೂಂಡಾ ಸಂಸ್ಕೃತಿ’: ಈ ಬಗ್ಗೆ ಪ್ರಕಟಣೆ ಹೊರಡಿಸಿದ ಶಾಸಕ ಶರಣು ಸಲಗರ ಅವರು,‘ರಾಮನಗರದಲ್ಲಿ ಸಚಿವ ಅಶ್ವತ್ಥನಾರಾಯಣ ಅವರೊಂದಿಗೆ ಡಿ.ಕೆ.ಸುರೇಶ್ ವರ್ತಿಸಿದ ರೀತಿ ಕಾಂಗ್ರೆಸ್ ಪಕ್ಷದ ಗೂಂಡಾ ಸಂಸ್ಕೃತಿಗೆ ಸಾಕ್ಷಿಯಾಗಿದೆ. ವೇದಿಕೆಯಲ್ಲಿ ಮುಖ್ಯಮಂತ್ರಿಯವರು ಹಾಜರಿದ್ದರು ಕೂಡ ಸುರೇಶ ಅವರು ಅವರ ಘನತೆಗೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಬಹಿರಂಗ ಕ್ಷಮೆ ಯಾಚನೆಗೆ ಒತ್ತಾಯ

ಹುಮನಾಬಾದ್: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ತಾಲ್ಲೂಕು ಘಟಕದ ವತಿಯಿಂದ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ ಮಾತನಾಡುತ್ತಿರುವಾಗ ಡಿ.ಕೆ. ಸುರೇಶ್ ಅವರು ವೇದಿಕೆ ಮೇಲೆ ಗೂಂಡಾ ವರ್ತನೆ ತೋರಿದ್ದು ಖಂಡನೀಯ. ಹೀಗಾಗಿ ಡಿಕೆ ಸುರೇಶ್ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕಾರ್ಯಕರ್ತರು ಎಚ್ಚರಿಸಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ್ ನಾಗರಹೊಳೆ, ಸೋಮನಾಥ ಪಾಟೀಲ, ಸೂರ್ಯಕಾಂತ ಮಠಪತಿ, ಕೆ.ಎಂ.ಗಜೇಂದ್ರ, ರಾಜಕುಮಾರ ಭಂಡಾರಿ, ಗಿರೀಶ್ ಪಾಟೀಲ, ವಿಜಯಕುಮಾರ್ ದುರ್ಗಾದ್, ರಾಜರೆಡ್ಡಿ, ನಾಗೇಶ ಕಲ್ಲೂರು ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT