ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ಬಿಜೆಪಿ–ಜೆಡಿಎಸ್‌ ಮೈತ್ರಿಯಿಂದ ಶಕ್ತಿ ವೃದ್ಧಿ: ಆರ್.ಅಶೋಕ

ಬಿಜೆಪಿ–ಜೆಡಿಎಸ್‌ ಮುಖಂಡರ ಸಮನ್ವಯ ಸಮಿತಿ ಸಭೆಯಲ್ಲಿ ಅಶೋಕ
Published 6 ಏಪ್ರಿಲ್ 2024, 16:26 IST
Last Updated 6 ಏಪ್ರಿಲ್ 2024, 16:26 IST
ಅಕ್ಷರ ಗಾತ್ರ

ಬೀದರ್‌: ‘ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯದಲ್ಲಿ ನಮ್ಮ ಶಕ್ತಿ ವೃದ್ಧಿಯಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.

ನಗರದಲ್ಲಿ ಶುಕ್ರವಾರ ರಾತ್ರಿ ನಡೆದ ಬಿಜೆಪಿ–ಜೆಡಿಎಸ್‌ ಮುಖಂಡರ ಸಮನ್ವಯ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲಬಾರದು. ಇದಕ್ಕಾಗಿ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಚುನಾವಣೆ ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಬೇಕಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದುಷ್ಟ, ಭ್ರಷ್ಟ ಆಡಳಿತ ನೀಡುತ್ತಿದೆ. ಇದು ಲಂಚ ಹೊಡೆಯುವ ಮೀಟರ್ ಸರ್ಕಾರವಾಗಿದೆ. ಹತ್ತು ತಿಂಗಳ ಅವಧಿಯಲ್ಲೇ ಈ ಸರ್ಕಾರ ಜನರಿಂದ ಸಂಪೂರ್ಣ ತಿರಸ್ಕೃತವಾಗಿದೆ ಎಂದು ಆರೋಪಿಸಿದರು.

ಮೈತ್ರಿಯಿಂದ ಹೊಸ ಅಲೆ ಸೃಷ್ಟಿಯಾಗಿದೆ. ದೇಶಕ್ಕೆ ಮೋದಿ ಅವರೇ ಬೇಕು ಎಂಬುದು ಜನರ ನಿರ್ಧಾರವಾಗಿದೆ. ನಮ್ಮ ಮೈತ್ರಿಯು ಹಾಲು-ಜೇನು ತರಹವಿದೆ. ಇದು ಉತ್ತಮ ಸಮ್ಮಿಲನ. ಕಾಂಗ್ರೆಸ್‌ಗೆ ಸೋಲಿಸುವ ಹುರುಪು ಬಿಜೆಪಿ ಜೊತೆಗೆ ಜೆಡಿಎಸ್‌ನವರಲ್ಲೂ
ಸಾಕಷ್ಟಿದೆ. ಸಮಾಜ ಒಡೆಯುವ, ದೇಶ ಒಡೆಯುವ ಮನಸ್ಥಿತಿಯುಳ್ಳ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲು ಈಗ ಕಾಲ ಬಂದಿದೆ ಎಂದು ಹೇಳಿದರು.

ಜೆಡಿಎಸ್‌ ಹಿರಿಯ ಮುಖಂಡ ಬಂಡೆಪ್ಪ ಕಾಶೆಂಪುರ್‌ ಮಾತನಾಡಿ, ನಮ್ಮ ಮೈತ್ರಿಯಿಂದ ರಾಜ್ಯದಲ್ಲಿ ಹೊಸ ಸಂಚಲನ ಮೂಡಿದೆ. ನಾವೆಲ್ಲರೂ ಪಣ ತೊಟ್ಟು ಕೆಲಸ ಮಾಡುತ್ತೇವೆ. ಒಂದು ತಿಂಗಳು ನಿದ್ರೆ ಮಾಡದೆ ಕೆಲಸ ಮಾಡುತ್ತೇವೆ. ಕ್ಷೇತ್ರವಾರು ಸಭೆ ನಡೆಸಿ ತಳಮಟ್ಟಕ್ಕೆ ಹೋಗುತ್ತೇವೆ ಎಂದರು.

ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ಈ ಚುನಾವಣೆಯಲ್ಲಿ ಅಹಂಕಾರ ಸೋಲಿಸಿ ಸರಳತೆಯಿಂದಿರುವ ನನ್ನನ್ನು ಗೆಲ್ಲಿಸಬೇಕಿದೆ. ಭ್ರಷ್ಟಾಚಾರಿಗಳನ್ನು ಸೋಲಿಸಿ ಪಾರದರ್ಶಕನಾಗಿರುವ ನನ್ನ ಗೆಲ್ಲಿಸಬೇಕು. ನನ್ನ ಗೆಲುವು ಶತಸಿದ್ಧ ಎಂದು ಭರವಸೆ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ಎರಡೂ ಪಕ್ಷಗಳ ನಾಯಕರಲ್ಲಿ ಸಮನ್ವಯ ಉತ್ತಮವಾಗಿದೆ. ಅಭಿವೃದ್ಧಿ ಚಿಂತನೆಯಡಿ ಪಕ್ಷದ ಹಿರಿಯರೆಲ್ಲರೂ ಸೇರಿ ಮೈತ್ರಿಗೆ ಸೈ ಎಂದಿದ್ದಾರೆ. ಇದರಿಂದ ನಮ್ಮ ಬಲ ಹೆಚ್ಚಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ರಘುನಾಥರಾವ್‌ ಮಲ್ಕಾಪೂರೆ, ಶಾಸಕರಾದ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ, ಶರಣು ಸಲಗರ, ಮಾಜಿ ಶಾಸಕರಾದ ಅಮರನಾಥ ಪಾಟೀಲ, ಎಂ.ಜಿ.ಮುಳೆ, ಪ್ರಕಾಶ ಖಂಡ್ರೆ, ಮಲ್ಲಿಕಾರ್ಜುನ ಖೂಬಾ, ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ಪೀರಪ್ಪ ಯರನಳ್ಳೆ, ಕಿರಣ ಪಾಟೀಲ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT