ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ‘ಮರಾಠ ಸಮುದಾಯ ಭವನ, ಎಂಎಲ್‌ಸಿ ಸ್ಥಾನ’

ಬಿಜೆಪಿ ಬೆಂಬಲಿತ ಮರಾಠ ಸಮಾಜದ ಮುಖಂಡರ ಸಭೆಯಲ್ಲಿ ಭಗವಂತ ಖೂಬಾ ಭರವಸೆ
Published 6 ಏಪ್ರಿಲ್ 2024, 16:24 IST
Last Updated 6 ಏಪ್ರಿಲ್ 2024, 16:24 IST
ಅಕ್ಷರ ಗಾತ್ರ

ಬೀದರ್‌: ‘ಸಂಸದರ ನಿಧಿಯಿಂದ ಔರಾದ್‌ ಪಟ್ಟಣದಲ್ಲಿ ಮರಾಠ ಸಮುದಾಯ ಭವನ ನಿರ್ಮಿಸಲಾಗುವುದು. ಮರಾಠ ಸಮಾಜದ ಮುಖಂಡರೊಬ್ಬರಿಗೆ ವಿಧಾನ ಪರಿಷತ್‌ ಸದಸ್ಯ ಸ್ಥಾನ ಕೊಡಿಸಲು ಪ್ರಯತ್ನಿಸುವೆ’ ಎಂದು ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆದ ಕೇಂದ್ರ ಸಚಿವ ಭಗವಂತ ಖೂಬಾ ಭರವಸೆ ನೀಡಿದರು.

ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ಬೆಂಬಲಿತ ಮರಾಠ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮರಾಠ ಸಮಾಜದವರು ಸಭೆ ನಡೆಸಿ, ಒಮ್ಮತದಿಂದ ಮುಖಂಡರೊಬ್ಬರ ಹೆಸರು ಸೂಚಿಸಿದರೆ ಚುನಾವಣೆಯಲ್ಲಿ ಜಯ ಗಳಿಸಿದ ಕೂಡಲೇ ವರಿಷ್ಠರಿಗೆ ಮನವರಿಕೆ ಮಾಡಿ ಎಂಎಲ್‌ಸಿ ಸ್ಥಾನ ಕೊಡಿಸಲು ಪ್ರಯತ್ನಿಸುವೆ ಎಂದು ತಿಳಿಸಿದರು.

ಮರಾಠ ಸಮಾಜದ ಸಮುದಾಯ ಭವನ ನಿರ್ಮಿಸಬೇಕೆನ್ನುವುದು ಸಮಾಜದ ಬಹುವರ್ಷಗಳ ಬೇಡಿಕೆಯಾಗಿದೆ. ಔರಾದ್‌ ಪಟ್ಟಣದಲ್ಲಿ ಸಂಸದರ ನಿಧಿಯಿಂದ ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.

ಎಲ್ಲ ಸಮುದಾಯಗಳು ಏಳಿಗೆ ಹೊಂದಬೇಕು. ರೈತರ ಬಾಳು ಹಸನಾಗಬೇಕು. ಮಹಿಳೆಯರು ಸ್ವಾವಲಂಬಿಯಾಗಬೇಕು. ರೈತರು, ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ನಾನು ಅಭಿವೃದ್ಧಿ ಪರ ಕೆಲಸಗಳನ್ನು ಮಾಡಿದ್ದೇನೆಯೇ ಹೊರತು ಹಾಳು ಮಾಡುವ ಯಾವೊಂದು ಕೆಲಸ ಸಹ ಮಾಡಿಲ್ಲ. ನನ್ನ ಹತ್ತು ವರ್ಷಗಳ ಅಧಿಕಾರದ ಅವಧಿಯಲ್ಲಿ ಭ್ರಷ್ಟಾಚಾರದ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಸಚಿವ ಈಶ್ವರ ಬಿ. ಖಂಡ್ರೆ ಪರಿವಾರದ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ ಎಂದು ಕುಟುಕಿದರು.

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದೆ. ಪ್ರಧಾನಿ ಅವರು ಭಾರತೀಯರ ಶತಮಾನದ ರಾಮ ಮಂದಿರದ ಕನಸು ನನಸಾಗಿಸಿದ್ದಾರೆ. ದೇಶ ಹಾಗೂ ಬೀದರ್ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಗೆ ಮತ್ತೊಮ್ಮೆ ಬಿಜೆಪಿಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ಧಲಿಂಗಪ್ಪ ಪಾಟೀಲ, ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಅಮರನಾಥ ಪಾಟೀಲ, ಸಹ ಉಸ್ತುವಾರಿ ಅರಿಹಂತ ಸಾವಳೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ, ಪ್ರಧಾನ ಕಾರ್ಯದರ್ಶಿ ಕಿರಣ ಪಾಟೀಲ, ರಾಜಶೇಖರ ಪಾಟೀಲ, ಕಿಸಾನ್ ಶಿಕ್ಷಣ ಪ್ರಸಾರಕ ಮಂಡಳಿ ಅಧ್ಯಕ್ಷ ಅನಿಲ್ ಶಿಂಧೆ, ಮಾಜಿ ಶಾಸಕ ಮಾರುತಿರಾವ್ ಮುಳೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಬುರಾವ್ ಕಾರಬಾರಿ, ಪ್ರಮುಖರಾದ ದಿಗಂಬರರಾವ್ ಮಾನಕಾರಿ, ಅಶೋಕ ಪಾಟೀಲ ಮೆಹಕರ್, ಸತೀಶ್ ವಾಸರೆ, ಮಾಧವರಾವ್ ಹಸೂರೆ, ಮುಖಂಡರಾದ ನಾಗನಾಥರಾವ್ ಬಗ್ದೂರೆ, ಅಶೋಕ ಪಾಟೀಲ ಮೆಹಕರ್, ದಿಗಂಬರರಾವ್ ಪಾಟೀಲ ಚಾಂದೋರಿ, ರಾಮಚಂದ್ರ ಜಗದಾಳೆ ಆಳಂದ, ಅಶೋಕ ಪಾಟೀಲ ಹೊಕ್ರಾಣೆ, ಶರತ್ ಪಾಟೀಲ ಭಾಟಸಾಂಗವಿ, ನಾರಾಯಣ ಪಾಟೀಲ ಭಂಡಾರಕುಮಟಾ, ಸಂಜು ಪಾಟೀಲ ಹಿಪ್ಪಳಗಾಂವ್, ನಿಖಿಲ್ ಜಾಧವ್ ದಾಬಕಾ, ಓಂಪ್ರಕಾಶ ಪಾಟೀಲ ಗಂಗನಬೀಡ್, ಸುಭಾಷ್ ಬಿರಾದಾರ ಭಾಲ್ಕಿ, ವೆಂಕಟರಾವ್ ಮಾಯಿಂದೆ, ಬಾಲಾಜಿ ವಾಡಿಕರ್, ರಾಜಕುಮಾರ ಪಾಟೀಲ ಲಖನಗಾಂವ್, ಬಾಬುರಾವ್ ಬಿರಾದಾರ, ನೇತಾಜಿ ಬಿರಾದಾರ ಇತರರು ಪಾಲ್ಗೊಂಡಿದ್ದರು.

‘ಶಿವಾಜಿ ಪಾರ್ಕ್‌ಗೆ 10 ಎಕರೆ ಜಮೀನು’ ‘ರಾಜ್ಯದಲ್ಲಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ ಅದಕ್ಕೆ ಮಾಜಿ ಶಾಸಕ ಮಾರುತಿರಾವ್ ಮುಳೆ ಅವರನ್ನು ಅಧ್ಯಕ್ಷರಾಗಿ ಮಾಡುವಲ್ಲಿ ಖೂಬಾ ಅವರ ಪಾತ್ರ ಮಹತ್ವದ್ದಾಗಿದೆ. ಬಸವಕಲ್ಯಾಣದಲ್ಲಿ ಶಿವ ಸೃಷ್ಟಿ (ಶಿವಾಜಿ ಪಾರ್ಕ್) ಪಾರ್ಕ್‌ ಸ್ಥಾಪಿಸಲು ಖೂಬಾ ಅವರು 10 ಎಕರೆ ಜಮೀನು ಮಂಜೂರು ಮಾಡಿಸಿದ್ದಾರೆ. ಮರಾಠರ ಆರಾಧ್ಯದೈವ ವಿಠ್ಠಲ-ರುಕ್ಮಿಣಿ ಮಂದಿರ ದರ್ಶನಕ್ಕೆ ಆಷಾಢ ಹಾಗೂ ಏಕಾದಶಿಗೆ ಪಂಢರಪುರಕ್ಕೆ ವಿಶೇಷ ರೈಲಿನ ವ್ಯವಸ್ಥೆ ಮಾಡಿ ಅನುಕೂಲ ಮಾಡಿಕೊಟ್ಟಿದ್ದಾರೆ’ ಎಂದು ಮರಾಠ ಸಮಾಜದ ಯುವ ಮುಖಂಡ ದೀಪಕ್ ಪಾಟೀಲ ಚಾಂದೋರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT