ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ಪ್ರಕರಣ | ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಸಚಿವ, ಶಾಸಕರ ವಿರುದ್ಧ ಜಾತಿ ನಿಂದನೆ, ಗೂಂಡಾ ಕಾಯ್ದೆಯಡಿ ಪ್ರಕರಣಕ್ಕೆ ಆಗ್ರಹ
Published : 22 ಆಗಸ್ಟ್ 2024, 12:31 IST
Last Updated : 22 ಆಗಸ್ಟ್ 2024, 12:31 IST
ಫಾಲೋ ಮಾಡಿ
Comments

ಬೀದರ್‌: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ದಲಿತ ಸಮುದಾಯಕ್ಕೆ ಸೇರಿದ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಕಾಂಗ್ರೆಸ್‌ ಸಚಿವರು, ಶಾಸಕರ ವಿರುದ್ಧ ಜಾತಿ ನಿಂದನೆ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಶಾಸಕರಾದ ಪ್ರಭು ಚವಾಣ್‌, ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಡಾ. ಸಿದ್ದಲಿಂಗಪ್ಪ ಪಾಟೀಲ, ಶರಣು ಸಲಗರ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಭಾಗದ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ನಗರದ ಗಣೇಶ ಮೈದಾನದಲ್ಲಿ ಸೇರಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಛತ್ರಪತಿ ಶಿವಾಜಿ ಮಹಾರಾಜ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ರ್‍ಯಾಲಿಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಆನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಖಾಸಗಿ ದೂರು ಆಧರಿಸಿ ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆದರೆ, ಕಾಂಗ್ರೆಸ್‌ ನಾಯಕರು, ಸಚಿವರು, ಶಾಸಕರು, ಅವರ ಪಕ್ಷದ ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡುತ್ತಿದ್ದಾರೆ. ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿರುವುದು ಖಂಡನಾರ್ಹ ಎಂದರು.

‘ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರಿಗೆ ಆದ ಗತಿ ತಮಗೂ ಆಗುತ್ತದೆ. ಕಾಂಗ್ರೆಸ್ಸಿಗರು ರಾಜಭವನಕ್ಕೆ ನುಗ್ಗಿ ತಮ್ಮನ್ನು ಓಡಿಸುವ ಕೆಲಸ ಮಾಡುತ್ತೇವೆ’ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಹೇಳಿಕೆ ನೀಡಿದ್ದಾರೆ. ಇನ್ನು, ಸಚಿವರಾದ ಜಮೀರ್‌ ಅಹಮ್ಮದ್‌ ಖಾನ್‌, ಕೃಷ್ಣ ಬೈರೇಗೌಡ, ದಿನೇಶ ಗುಂಡೂರಾವ್‌, ಈಶ್ವರ ಬಿ. ಖಂಡ್ರೆ, ಶಾಸಕ ನಂಜೇಗೌಡ ಅವರು ರಾಜ್ಯಪಾಲರನ್ನು ನಿಂದಿಸಿದ್ದಾರೆ. ಇವರ ವಿರುದ್ಧ ಜಾತಿ ನಿಂದನೆ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್‌ ಸಚಿವರು, ಮುಖಂಡರು ಕೊಡುತ್ತಿರುವ ನಿಂದನಾತ್ಮಕ ಹೇಳಿಕೆಗಳನ್ನು ನೋಡಿ ಆಯಾ ಜಿಲ್ಲೆಗಳಲ್ಲೂ ಕಾಂಗ್ರೆಸ್‌ನವರು ಹಾಗೆಯೇ ಮಾಡುತ್ತಿದ್ದಾರೆ. ಅವರನ್ನು ಗುರುತಿಸಿ ಕ್ರಮ ಜರುಗಿಸಬೇಕು. ಎಲ್ಲೇ ಮೀರದಂತೆ ಮುಖ್ಯಮಂತ್ರಿಗಳು, ಸಂಪುಟದ ಸಚಿವರು, ಅವರ ಪಕ್ಷದ ಮುಖಂಡರಿಗೆ ಸೂಚನೆ ಕೊಡಬೇಕು. ತಕ್ಷಣವೇ ಅವರು ಅವರ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ರಾಜೀನಾಮೆ ಕೊಡುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮಾಜಿಶಾಸಕ ಗುಂಡಪ್ಪ ವಕೀಲ, ಬುಡಾ ಮಾಜಿ ಅಧ್ಯಕ್ಷ ಬಾಬುವಾಲಿ, ಮಾಜಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ಬಾಬುರಾವ್‌ ಮದಕಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪೀರಪ್ಪ ಔರಾದೆ, ಕಿರಣ ಪಾಟೀಲ, ನಗರ ಮಂಡಲ ಘಟಕದ ಅಧ್ಯಕ್ಷ ಶಶಿಧರ ಹೊಸಳ್ಳಿ, ಮುಖಂಡರಾದ ಈಶ್ವರ ಸಿಂಗ್‌ ಠಾಕೂರ್‌, ನಾಗರಾಜ ಕರ್ಪೂರ, ಚನ್ನಬಸವ ಬಳತೆ, ರಾಜಕುಮಾರ ಚಿದ್ರಿ, ವಸಂತ ವಕೀಲ, ಸೂರ್ಯಕಾಂತ ಶೆಟಕಾರ ಮತ್ತಿತರರು ಪಾಲ್ಗೊಂಡಿದ್ದರು.

ದಲಿತ ಸಮುದಾಯದ ರಾಜ್ಯಪಾಲರನ್ನು ಅವಾಚ್ಯವಾಗಿ ನಿಂದಿಸುತ್ತಿರುವ ಕಾಂಗ್ರೆಸ್‌ ಮುಖಂಡರಿಗೆ ಶೋಭೆ ತರುವುದಿಲ್ಲ. ಅವರು ತಕ್ಷಣವೇ ಕ್ಷಮೆಯಾಚಿಸಬೇಕು.
–ಪ್ರಭು ಚವಾಣ್‌, ಶಾಸಕ
ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟಿರುವ ಸಚಿವರು, ಕಾಂಗ್ರೆಸ್‌ ಮುಖಂಡರ ವಿರುದ್ಧ ರಾಜ್ಯ ಸರ್ಕಾರ, ಕೆಪಿಸಿಸಿ ಕ್ರಮ ಕೈಗೊಳ್ಳಬೇಕು.
–ಸೋಮನಾಥ ಪಾಟೀಲ, ಜಿಲ್ಲಾಧ್ಯಕ್ಷ, ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT