ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾಲ್ಕಿ | ಬೋಟಿಂಗ್‌ ವ್ಯವಸ್ಥೆ ಕಲ್ಪಿಸಲು ಆಗ್ರಹ

ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವ ಉದ್ಯಾನ; ನಾಗರಿಕರ ಅಸಮಾಧಾನ
ಬಸವರಾಜ್‌ ಎಸ್‌.ಪ್ರಭಾ
Published : 14 ಫೆಬ್ರುವರಿ 2024, 5:44 IST
Last Updated : 14 ಫೆಬ್ರುವರಿ 2024, 5:44 IST
ಫಾಲೋ ಮಾಡಿ
Comments

ಭಾಲ್ಕಿ: ಇಲ್ಲಿಯ ಚನ್ನಬಸವಾಶ್ರಮ ಹಿಂಬದಿಯ ಸಣ್ಣ ನೀರಾವರಿ ಇಲಾಖೆಗೆ ಸೇರಿದ ಮಕ್ಕಳ ಉದ್ಯಾನ, ನಡಿಗೆ ಪಥ ಮೂಲ ಸೌಕರ್ಯ ಕೊರತೆಯಿಂದ ಬಳಲುತ್ತಿದ್ದು, ನಾಗರಿಕರ ವಾಯುವಿಹಾರ ಹಾಗೂ ಚಿಣ್ಣರ ಮನೋರಂಜನೆಗೆ ಅಡ್ಡಿಯಾಗಿದೆ. ಇದರೊಂದಿಗೆ ಬಹುದಿನಗಳ ನಿರೀಕ್ಷೆಯಾಗಿರುವ ಬೋಟಿಂಗ್‌ ವ್ಯವಸ್ಥೆ ಆರಂಭಿಸುವ ಕನಸು ಇಂದಿಗೂ ನನಸಾಗಿಲ್ಲ.

ಪ್ರತಿದಿನ ಬೆಳಿಗ್ಗೆ–ಸಂಜೆ ಹಿರಿಯರು ಇಲ್ಲಿ ವಾಕಿಂಗ್‌ಗೆ ಬರುತ್ತಾರೆ. ಸಂಜೆ ಹೊತ್ತಿನಲ್ಲಿ ಪಾಲಕರು ತಮ್ಮ ಮಕ್ಕಳನ್ನು ಕೆರೆಯ ಉದ್ಯಾನದತ್ತ ಕರೆ ತರುತ್ತಾರೆ. ಆದರೆ, ಮಕ್ಕಳ ಸಂತಸದ ಮೂಲವಾಗಿರುವ ಜೋಕಾಲಿಯ ಆಧಾರ ಸ್ತಂಭವಾದ ಒಂದು ಕಂಬವೇ ಕಿತ್ತು ಹೋಗಿದೆ. ಒಂದು ಜೋಕಾಲಿಯೂ ಹಾಳಾಗಿದೆ. ಆಡುಮಣೆ (ಸೀ–ಸಾ) ಮುರಿದಿದೆ. ನಸುಕಿನ ಜಾವ, ತಡ ರಾತ್ರಿಯ ತಂಗಾಳಿಯಲ್ಲಿ ನಿಸರ್ಗದ ಸವಿ ಸವೆಯಬೇಕು ಎಂಬ ಹಿರಿಯರ ಆಸೆಗೆ ಕೆಲವೆಡೆ ಮಾತ್ರ ಇರುವ ವಿದ್ಯುತ್‌ ದೀಪಗಳು ತೊಡಕಾಗಿವೆ.

ಸುಮಾರು 3.2 ಕೀ. ಮಿ ಉದ್ದದ ನಡಿಗೆ ಪಥ, ಉದ್ಯಾನದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಆಸನಗಳಿವೆ. ಇದು ಹಿರಿಯರಿಗೆ ವಾಕಿಂಗ್‌ ಮಾಡಿ ದಣಿದಾಗ ವಿರಮಿಸಲು ತುಂಬಾ ಸಮಸ್ಯೆ ಎದುರಾಗುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ನಿಸರ್ಗದ ಕರೆಗೆ ಉತ್ತರಿಸಲು ಶೌಚಾಲಯ ಸಮಸ್ಯೆ ಕಾಡುತ್ತಿದೆ. ಈ ಸಮಸ್ಯೆಯಿಂದ ಹೆಣ್ಣು ಮಕ್ಕಳು ಮನದಲ್ಲಿಯೇ ದುರವಸ್ಥೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

‘ಕೆರೆಯ ಹಿಂಬದಿಯ ನಿವಾಸಿಗಳು ತಮ್ಮ ಅನುಕೂಲಕ್ಕಾಗಿ ಅಲ್ಲಲ್ಲಿ ತಂತಿಬೇಲಿ ಹರಿದಿದ್ದಾರೆ. ಕೆಲ ಪುಂಡರೂ ಕೆರೆಗೆ ನುಗ್ಗಿ ನೀರಿಲ್ಲಿ ಆಟವಾಡಲು ಕೆಲವೆಡೆಯ ಬೇಲಿ ತೆಗೆದಿದ್ದಾರೆ. ಇನ್ನೂ ಕೆಲವರು ಉದ್ಯಾನ, ನಡಿಗೆ ಪಥದಲ್ಲಿ ದ್ವಿಚಕ್ರ ವಾಹನ ನುಗ್ಗಿಸಿ ದರ್ಪ ಮೆರೆಯುತ್ತಾರೆ. ಮದ್ಯದ ಬಾಟಲಿಗಳೊಂದಿಗೆ ಪಾರ್ಟಿ ಮಾಡಲು, ಹುಟ್ಟುಹಬ್ಬವನ್ನು ಸಂಭ್ರಮಿಸುವ ನೆಪದಲ್ಲಿ ಕಿರುಚಾಡುತ್ತಾರೆ. ಕೆರೆಯ ಒಳಗೆ ಕೆಲವೆಡೆ ಗಿಡ, ಗಂಟಿಗಳು ಬೆಳೆದು ಕೆರೆಯ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಮಹಿಳೆಯರು ದೂರಿದರು.

‘ಶಾಸಕ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಈಶ್ವರ ಖಂಡ್ರೆ ಅವರ ದೂರದೃಷ್ಟಿ, ವಿಶೇಷ ಆಸಕ್ತಿಯ ಫಲವಾಗಿ 2017ರಲ್ಲಿ ಕೆರೆಯ ಅಭಿವೃದ್ಧಿ, ಸುಂದರೀಕರಣ, ಮಕ್ಕಳ ಉದ್ಯಾನ ನಿರ್ಮಾಣವಾಗಿದೆ. ಈಗಲೂ ಸಚಿವರೇ ವಿಶೇಷ ಕಾಳಜಿ ವಹಿಸಿ ಕೆರೆಯಲ್ಲಿ ಬೋಟಿಂಗ್‌ ವ್ಯವಸ್ಥೆ ಕಲ್ಪಿಸಬೇಕು. ವಾಕಿಂಗ್‌ ಪಥ, ಉದ್ಯಾನದ ಅಭಿವೃದ್ಧಿ, ರಕ್ಷಣೆಗೆ ಅಧಿಕಾರಿಗಳಿಗೆ ತಾಕೀತು ಮಾಡಬೇಕು’ ಎಂಬುದು ಪಟ್ಟಣ ನಿವಾಸಿಗಳ ಒತ್ತಾಯವಾಗಿದೆ.

ಭಾಲ್ಕಿಯಲ್ಲಿರುವ ಸಣ್ಣ ನೀರಾವರಿ ಇಲಾಖೆಯ ಕೆರೆಯಲ್ಲಿ ಬೆಳೆದಿರುವ ಗಿಡ ಕಂಟಿಗಳು
ಭಾಲ್ಕಿಯಲ್ಲಿರುವ ಸಣ್ಣ ನೀರಾವರಿ ಇಲಾಖೆಯ ಕೆರೆಯಲ್ಲಿ ಬೆಳೆದಿರುವ ಗಿಡ ಕಂಟಿಗಳು

ಶೌಚಾಲಯ ವಿದ್ಯುತ್‌ ದೀಪ ಆಸನಗಳ ವ್ಯವಸ್ಥೆ ಕಲ್ಪಿಸಬೇಕು. ಮಕ್ಕಳ ವಿನೋದಕ್ಕಾಗಿ ಹೆಚ್ಚಿನ ಆಟಿಕೆ ಸಾಮಾನುಗಳನ್ನು ಅಳವಡಿಸಬೇಕು- ಡಾ.ಅಮೀತ ಅಷ್ಟೂರೆ ವಾಯುವಿಹಾರಿ

ಪುರಸಭೆ ಅಧಿಕಾರಿಗಳ ನಿಷ್ಕಾಳಜಿಯಿಂದ ನಡಿಗೆ ಪಥ ಉದ್ಯಾನದಲ್ಲಿ ಸ್ವಚ್ಛತೆ ಸೇರಿದಂತೆ ಇತರ ಸಮಸ್ಯೆಗಳು ತಾಂಡವವಾಡುತ್ತಿದೆ. ಉದ್ಯಾನ ನಿರ್ವಹಣೆ ಅಧಿಕಾರಿಗಳು ಕ್ರಮವಹಿಸಬೇಕು- ಪಾಂಡುರಂಗ ಕನಸೆ ಪುರಸಭೆ ಸದಸ್ಯ

ಕೆರೆಯನ್ನು ಪ್ರವಾಸಿ ತಾಣವಾಗಿಸಲು ಬೋಟಿಂಗ್‌ ವ್ಯವಸ್ಥೆ ಕಲ್ಪಿಸಬೇಕು. ಸರ್ಕಾರದಿಂದ ನಿರ್ವಹಣೆ ಸಾಧ್ಯವಾಗದಿದ್ದರೆ ಖಾಸಗಿಯವರಿಗೆ ಒಪ್ಪಿಸಬೇಕು- ಸತೀಶಕುಮಾರ ಸೂರ್ಯವಂಶಿ ಜಿಲ್ಲಾ ಸಂಯೋಜಕ ಸಂಭಾಜಿ ಬ್ರಿಗೇಡ್‌

- ಉದ್ಯಾನದ ಅಭಿವೃದ್ಧಿಗಾಗಿ ಸುಮಾರು ₹1.30 ಕೋಟಿ ಅಂದಾಜು ಮೊತ್ತದ ಯೋಜನೆ ಸಿದ್ಧಪಡಿಸಲಾಗಿದ್ದು ಶೀಘ್ರದಲ್ಲಿ ಟೆಂಡರ್‌ ಕರೆಯಲಾಗುವುದು- ಖುರೇಶಿ ಎಇಇ ಸಣ್ಣ ನೀರಾವರಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT