ಶುಕ್ರವಾರ, ಜುಲೈ 30, 2021
21 °C
ಗೋದಾವರಿ ಬಚಾವತ್ ಯೋಜನೆ: ಸಚಿವ ರಮೇಶ ಜಾರಕಿಹೊಳಿ ಹೇಳಿಕೆ

ಸರಣಿ ಬ್ಯಾರೇಜ್ ನಿರ್ಮಿಸಿ ನೀರು ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಗೋದಾವರಿ ಜಲಾನಯನ ಪ್ರದೇಶದ 22.37 ಟಿ.ಎಂ.ಸಿ ಅಡಿ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಳಸಲು ನಿರ್ಧರಿಸಲಾಗಿದೆ. ಮಾಂಜ್ರಾ ನದಿಗೆ ಸರಣಿ ಬ್ಯಾರೇಜ್ ನಿರ್ಮಿಸಿ 4.85 ಟಿಎಂಸಿ ಅಡಿ ನೀರು ಸಂಗ್ರಹಿಸುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ಬೀದರ್ ತಾಲ್ಲೂಕಿನ ಅತಿವಾಳ ಸಮೀಪ ಶುಕ್ರವಾರ ಏತ ನೀರಾವರಿ ಯೋಜನೆ ಹಾಗೂ ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ ಬಳಿ ಕಾರಂಜಾ ಜಲಾಶಯ ವೀಕ್ಷಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಕಾರಂಜಾ ಯೋಜನೆಯ 9.27 ಟಿಎಂಸಿ ಅಡಿ, ಚುಳಕಿ ನಾಲಾ ಯೋಜನೆಯ 1.17 ಟಿಂಎಸಿ ಅಡಿ, ಮಾಂಜ್ರಾ ಏತ ನೀರಾವರಿ ಯೋಜನೆಯ 4.85 ಟಿಎಂಸಿ ಅಡಿ ನೀರು ಬಳಕೆಯಾಗುತ್ತಿದೆ. ಈಗಾಗಲೇ ಜೀರಗ್ಯಾಳ, ಮಾಣಿಕೇಶ್ವರ, ಹಾಲಹಳ್ಳಿ ಹಾಗೂ ಚಂದಾಪುರ ಬಳಿ ಬ್ಯಾರೇಜ್ ನಿರ್ಮಿಸಲಾಗಿದೆ’ ಎಂದು ಹೇಳಿದರು.

‘ಕೌಠಾದ ಬಳಿ ನಿರ್ಮಿಸಲಾಗಿರುವ ಬ್ಯಾರೇಜ್ ಹಾಳಾಗಿದೆ. ಅದರ ಎತ್ತರವೂ ಕಡಿಮೆ ಇರುವ ಕಾರಣ ಅಲ್ಲಿ ಹೊಸದಾಗಿ ಬ್ಯಾರೇಜ್ ನಿರ್ಮಿಸಲಾಗುವುದು. ಔರಾದ್ ತಾಲ್ಲೂಕಿಗೆ ನೀರು ಪೂರೈಸುವ ದಿಸೆಯಲ್ಲಿ ಯೋಜನೆ ರೂಪಿಸಲಾಗುವುದು’ ಎಂದು ತಿಳಿಸಿದರು.

‘ಕೊಂಗಳಿ ಬ್ಯಾರೇಜ್‌ನಿಂದ ನೀರನ್ನು ಎತ್ತಿ ಬಸವಕಲ್ಯಾಣ ತಾಲ್ಲೂಕಿನ 15 ಕೆರೆಗಳು ಹಾಗೂ ಚುಳಕಿನಾಲಾ ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. ಕಾರಂಜಾ ಯೋಜನೆ ಅಡಿಯಲ್ಲಿ ಮಾಂಜ್ರಾ ನದಿಗೆ ಅಡ್ಡಲಾಗಿ ಚಂದಾಪುರ ಗ್ರಾಮದ ಬಳಿ ನಿರ್ಮಿಸಿರುವ ಬ್ಯಾರೇಜ್‌ನಿಂದ 33 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ವಿಸ್ತೃತ ಯೋಜನಾ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ಗೋದಾವರಿ ಹಾಗೂ ಕೃಷ್ಣಾ ನದಿ ನೀರು ಬಳಕೆ ಮಾಡಲು ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಜನ ಪ್ರತಿನಿಧಿಗಳು ಪಕ್ಷಭೇದ ಮರೆತು ಪ್ರಯತ್ನಿಸುತ್ತೇವೆ’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಸಂಸದ ಭಗವಂತ ಖೂಬಾ, ಶಾಸಕರಾದ ರಾಜಶೇಖರ ಪಾಟೀಲ, ಬಂಡೆಪ್ಪ ಕಾಶೆಂಪೂರ, ರಹೀಂ ಖಾನ್ ಹಾಗೂ ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.