ಶುಕ್ರವಾರ, ಜನವರಿ 28, 2022
24 °C
ಬ್ರಿಮ್ಸ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ

ಕಟ್ಟಡ ದುಃಸ್ಥಿತಿ: ಅಧಿಕಾರಿಗಳ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕಟ್ಟಡ ದುರಸ್ತಿ ಪ್ರಕ್ರಿಯೆ ಪೂರ್ಣವಾಗದೇ ಇರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ಸೋಮವಾರ ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಕಟ್ಟಡದ ದುಃಸ್ಥಿತಿಯನ್ನು ವೀಕ್ಷಿಸಿದ ಅವರು, ಸೂಕ್ತ ವಿವರಣೆ ನೀಡದ ಸ್ಥಳದಲ್ಲಿದ್ದ ಕೆಲ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡರು.

ಬ್ರಿಮ್ಸ್ ಆಸ್ಪತ್ರೆಗೆ ಆಗಮಿಸುತ್ತಲೇ ಕಟ್ಟಡದ ಆರನೇ ಅಂತಸ್ತಿಗೆ ತೆರಳಿ, ಹಾನಿಗೊಳಗಾದ ಸೋಲಾರ್ ವಾಟರ್ ಹೀಟರ್‍ಗಳನ್ನು ವೀಕ್ಷಿಸಿದರು. ಬೆಲೆಬಾಳುವ ಹೀಟ್ ಕಂಡಕ್ಟರ್ ಮತ್ತಿತರ ವಸ್ತುಗಳು ಕಳುವಾದ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು. ವಸ್ತುಗಳು ಕಳುವಾಗಿಲ್ಲ ಎಂದು ಪರಿಶೀಲನೆ ವೇಳೆ ಕಂಡು ಬಂದಲ್ಲಿ ಕಟ್ಟಡದ ನಾಗಾರ್ಜುನ ಕನ್ರಸ್ಟ್ರಕ್ಷನ್ ಕಂಪನಿ (ಎನ್‍ಸಿಸಿ) ಯ ಅಧಿಕಾರಿಗಳನ್ನೇ ಹೊಣೆಯಾಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಕಟ್ಟಡದ ಕಾರಿಡಾರ್‍ನಲ್ಲಿ ಎರಡೂ ಬದಿಗೆ ಯುಪಿವಿಸಿ ಸ್ಲೈಡಿಂಗ್ ಕಿಟಕಿಗಳನ್ನು ಅಳವಡಿಸಲು ಎನ್‍ಸಿಸಿ ಪ್ರತಿನಿಧಿಗಳಿಗೆ ಹಲವು ಬಾರಿ ತಿಳಿಸಿದರೂ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲ ಎಂದು ಅಧಿಕಾರಿಗಳು ವಿಷಯ ಗಮನಕ್ಕೆ ತಂದರು. ಕಟ್ಟಡದ ಆರನೇ ಅಂತಸ್ತಿನ ಮೇಲಿರುವ ಎಕ್ಸಪಾನ್ಸನ್ ಜಾಯಿಂಟ್ ಸರಿ ಇಲ್ಲದ್ದನ್ನು ಜಿಲ್ಲಾಧಿಕಾರಿ ಎನ್‍ಸಿಸಿ ಪ್ರತಿನಿಧಿಗಳಿಗೆ ತೋರಿಸಿದರು. ನೀರು ಸೋರುವಿಕೆಗೆ ಕಾರಣ ಏನೆಂಬುದ್ದನ್ನು ತ್ವರಿತವಾಗಿ ಪತ್ತೆ ಹಚ್ಚಿ ಕಾಲಮಿತಿಯೊಳಗೆ ದುರಸ್ತಿ ಆಗುವಂತೆ ನೋಡಿಕೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಲಿಫ್ಟ್ ಸಂಖ್ಯೆ 3 ಮತ್ತು 4ರ ಮಷೀನ್ ರೂಮ್ ಮತ್ತು ಹೆಡ್ ರೂಮ್‍ಗೂ ಭೇಟಿ ಕೊಟ್ಟು ಪರಿಶೀಲಿಸಿದರು.

ಆಸ್ಪತ್ರೆಯ ಭಾಗಶಃ ಮಹಡಿಗಳಲ್ಲಿ ಶೌಚಾಲಯಗಳ ನಿರ್ವಹಣೆ ಸರಿ ಇಲ್ಲ. ಶೌಚಾಲಯಗಳಲ್ಲಿ ನಲ್ಲಿ, ಸಿಂಕ್ ಹಾಗೂ ವಾಶ್‍ಬಸೀನ್ ಇಲ್ಲದಿರುವುದರಿಂದ ನೀರು ಫ್ಲೋರಿಂಗ್ ಟೈಲ್ಸ್ ಒಳಗಡೆ ನುಗ್ಗಿ ಬದಿಯಲ್ಲಿರುವ ಎಕ್ಸಪಾಂಸನ್ ಜಾಯಿಂಟ್ ಮೂಲಕ ಸೋರಿಕೆ ಆಗುತ್ತಿರುವುದನ್ನು ಬ್ರಿಮ್ಸ್ ಅಧಿಕಾರಿಗಳ ಸಮಕ್ಷಮದಲ್ಲಿ ಪರಿವೀಕ್ಷಿಸಿ, ನಲ್ಲಿಗಳನ್ನು ಕಳವು ಮಾಡಿದವರನ್ನು ಗುರುತಿಸಿ ಸೂಕ್ತ ಕ್ರಮ ಜರುಗಿಸಲು ಹಿಂದೆಯೇ ತಿಳಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಜಗನ್ನಾಥ ಹಾಲಿಂಗೆ ಅವರು ರಾಮಚಂದ್ರನ್ ಅವರಿಗೆ ಮಾಹಿತಿ ನೀಡಿದರು.

ರೋಗಿಗಳು ಮತ್ತು ಸಾರ್ವಜನಿಕರು ಕೆಲ ವೆಸ್ಟರ್ನ್ ಶೌಚಾಲಯಗಳನ್ನು ಬಳಸುತ್ತಿಲ್ಲ. ಹೀಗಾಗಿ ಸಾರ್ವಜನಿಕ ಬಳಕೆಯ ಶೌಚಾಲಯಗಳ ನಿರ್ಮಾಣಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಬ್ರಿಮ್ಸ್ ಅಧೀಕ್ಷಕ ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಬೀದರ್ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮೋತಿಲಾಲ್ ಲಮಾಣಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಲಿಂಗರಾಜ್, ಬ್ರಿಮ್ಸ್ ಆಸ್ಪತ್ರೆಯ ಡಾ.ಮಹೇಶ ತೊಂಡಾರೆ, ಸಹಾಯಕ ಎಂಜಿನಿಯರ್ ಕುಪ್ಪಣ, ಜಿಲ್ಲಾಧಿಕಾರಿ ಕಚೇರಿಯ ಸತೀಶ ವಾಲೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.