ಮಂಗಳವಾರ, ಜನವರಿ 28, 2020
22 °C

ಪೌರತ್ವ ಕಾಯ್ದೆಗೆ ವಿರೋಧ: ಓಲ್ಡ್‌ಸಿಟಿ ಅಘೋಷಿತ ಬಂದ್, ಬೃಹತ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಹಾಗೂ ಕೇಂದ್ರ ಸರ್ಕಾರದ ದಬ್ಬಾಳಿಕೆಯ ಆಡಳಿತ ಖಂಡಿಸಿ ಜಾತ್ಯತೀತ ನಾಗರಿಕರ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಮೋದಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದವು.

ಮುಸ್ಲಿಮರು ಓಲ್ಡ್‌ ಸಿಟಿಯ ಚೌಬಾರಾ ಹಾಗೂ ಮುಸ್ಲಿಂ ಮಹಿಳೆಯರು ಮೆಹಮೂದ್‌ ಗವಾನ್‌ ಸ್ಮಾರಕದ ಆವರಣದಿಂದ ಪ್ರತ್ಯೇಕವಾಗಿ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯರು ನಕಾಬ್‌ ಹಾಕಿಕೊಂಡು ಪೋಸ್ಟರ್‌ ಹಾಗೂ ಬ್ಯಾನರ್‌ಗಳನ್ನು ಹಿಡಿದುಕೊಂಡು ಡಾ.ಅಂಬೇಡ್ಕರ್‌ ವೃತ್ತಕ್ಕೆ ಬಂದರು. ಪ್ರತಿಭಟನಾ ನಿರತ ಮಹಿಳೆಯರಿಗೆ ಪೊಲೀಸ್‌ ರಕ್ಷಣೆ ಕೊಡಲಾಗಿತ್ತು.

ಪುರುಷರು ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ದಬ್ಬಾಳಿಕೆಯ ಆಡಳಿತ ನಡೆಯದು, ಮೋದಿಗೆ ಧಿಕ್ಕಾರ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಕ್ಷಣ ಹಿಂದಕ್ಕೆ ಪಡೆಯಿರಿ ಎನ್ನುವ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾಕಾರರು ರಾಷ್ಟ್ರಧ್ವಜ, ನೀಲಿ ಧ್ವಜ, ಆರ್‌ಪಿಐ ಧ್ವಜ, ಸಿಪಿಐ ಧ್ವಜ, ಕೆಲವರು ಅಂಬೇಡ್ಕರ್‌ ಭಾವಚಿತ್ರ ಹಾಗೂ ಇನ್ನು ಕೆಲವರು ಸಂವಿಧಾನ ಪೀಠಿಕೆಯಲ್ಲಿ ಮುದ್ರಿತ ಅಂಶಗಳ ಪ್ರತಿಯನ್ನು ಹಿಡಿದುಕೊಂಡಿದ್ದರು.

ಬೀದರ್‌ನಲ್ಲಿ ಜಾತ್ಯತೀತ ನಾಗರಿಕರ ವೇದಿಕೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌, ಸಿಪಿಎಂ, ಸಿಪಿಐ, ರಿಪ್ಲಬಿಕನ್‌ ಪಾರ್ಟಿ ಆಫ್‌ ಇಂಡಿಯಾ, ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಅಂಬೇಡ್ಕರ್‌ ವೃತ್ತದ ಸಮೀಪ ನಿರ್ಮಿಸಿದ್ದ ವೇದಿಕೆಯಲ್ಲಿ ಬೀದರ್ ಶಾಸಕ ರಹೀಂ ಖಾನ್, ಬೀದರ್‌ ದಕ್ಷಿಣ ಶಾಸಕ ಬಂಡೆಪ್ಪ ಕಾಶೆಂಪೂರ, ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಜಾತ್ಯತೀತ ನಾಗರಿಕರ ವೇದಿಕೆ ಅಧ್ಯಕ್ಷ ಬಾಬುರಾವ್‌ ಹೊನ್ನಾ, ಕಾರ್ಯಾಧ್ಯಕ್ಷ ಶ್ರೀಕಾಂತ ಸ್ವಾಮಿ ಮೊದಲಾದವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಜಾತ್ಯತೀತ ನಾಗರಿಕರ ವೇದಿಕೆಯ ಮುಖಂಡರು ರಾಷ್ಟ್ರಪತಿಗೆ ಬರೆದ ಮನವಿಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರಿಗೆ ಸಲ್ಲಿಸಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪೂರ, ಮುಬಾಶಿರ್‌ ಸಿಂದೆ, ರಾಜಕುಮಾರ ಮೂಲಭಾರತಿ, ಸೈಯ್ಯದ್ ಮನ್ಸೂರ್‌ ಖಾದ್ರಿ, ಇರ್ಷಾದ್ಅಲಿ ಪೈಲ್ವಾನ್‌, ಬಾಬು ಪಾಸ್ವಾನ್‌, ಮಾರುತಿ ಬೌದ್ಧೆ, ಅಮೃತ್‌ರಾವ್ ಚಿಮಕೋಡೆ, ಮಜತಬಾ ಖಾನ್, ಸಂಜಯ ಜಾಗೀರದಾರ್‌ ಮೊದಲಾದವರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು