ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | 224 ಮತಗಟ್ಟೆಗಳಿಗೆ ಕ್ಯಾಮೆರಾ ಕಣ್ಗಾವಲು

Published 2 ಏಪ್ರಿಲ್ 2024, 22:30 IST
Last Updated 2 ಏಪ್ರಿಲ್ 2024, 22:30 IST
ಅಕ್ಷರ ಗಾತ್ರ

ಔರಾದ್: ‘ಈ ಲೋಕಸಭೆ ಚುನಾವಣೆ ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಈ ಕ್ಷೇತ್ರದ ಚುನಾವಣಾಧಿಕಾರಿ ಜಿಯಾವುಲ್ಲ ಕೆ. ತಿಳಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಚುನಾವಣೆ ಸಿದ್ಧತೆ ಹಾಗೂ ಮತದಾನ ಜಾಗೃತಿ ಜಾಥಾದ ಪೂರ್ವ ಸಿದ್ಧತೆ ಸಭೆ ನಡೆಸಿದರು.

‘ಔರಾದ್ ಹಾಗೂ ಕಮಲನಗರ ತಾಲ್ಲೂಕು ಸೇರಿ ಒಟ್ಟು 255 ಬೂತ್ ಪೈಕಿ 224ರಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ 25 ಬೂತ್‌ಗಳಲ್ಲಿ ವೆಬ್ ಕ್ಯಾಮೆರಾ ಅಳವಡಿಸಲಾಗಿದೆ. ಒಟ್ಟು 25 ಜನ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರಲ್ಲಿ ಒಬ್ಬೊಬ್ಬರು 12 ರಿಂದ 14 ಬೂತ್ ಜವಾಬ್ದಾರಿ ನೋಡಿಕೊಳ್ಳಲಿದ್ದಾರೆ. 51 ಸೂಕ್ಷ್ಮ ಮತಗಟ್ಟೆಗಳಿಗೆ ವಿಶೇಷ ಭದ್ರತೆ ಒದಗಿಸಲಾಗಿದೆ’ ಎಂದರು.

‘85 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ಬಿಸಿಲು ಜಾಸ್ತಿ ಇರುವುದರಿಂದ ಎಲ್ಲ ಮತಗಟ್ಟೆಗಳಿಗೆ ನೆರಳಿನ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದೇ 7 ಹಾಗೂ 8 ರಂದು ಮೊದಲ ಹಂತದ ಪಿಆರ್‌ಒ, ಎಪಿಆರ್‌ಒ ಸಭೆ ನಡೆಯಲಿದೆ. ಒಟ್ಟು 305 ಸಿಬ್ಬಂದಿ ಮತಗಟ್ಟೆಯಲ್ಲಿ ಕೆಲಸ ಮಾಡಲಿದ್ದಾರೆ. ಚುನಾವಣೆ ಕರ್ತವ್ಯ ನಿರತ ಸಿಬ್ಬಂದಿ ಹೆಚ್ಚಿನ ಕಾಳಜಿಯಿಂದ ಕೆಲಸ ಮಾಡುವಂತೆ’ ಅವರು ಸಲಹೆ ನೀಡಿದರು.

ಕಮಲನಗರ ಔರಾದ್ ಸೇರಿ 1,16,089 ಪುರುಷ ಹಾಗೂ 1,08,215 ಮಹಿಳಾ ಮತದಾರರು ಸೇರಿ ಒಟ್ಟು 2,24,304 ಮತದಾರರಿದ್ದಾರೆ ಎಂದು ಹೇಳಿದರು.

ತಹಶೀಲ್ದಾರ್ ನಾಗಯ್ಯಾ ಹಿರೇಮಠ ಮಾತನಾಡಿ,‘ಚುನಾವಣೆ ಕೆಲಸದ ಜತೆ ನೀರಿನ ಸಮಸ್ಯೆಗೂ ಮಹತ್ವ ನೀಡುತ್ತಿದ್ದೇವೆ. ತಾಲ್ಲೂಕಿನ 25 ಗ್ರಾಮಗಳಲ್ಲಿ ಈಗಾಗಲೇ ಖಾಸಗಿ ನೀರಿನ ಮೂಲ ಬಳಸಿಕೊಳ್ಳುತ್ತಿದ್ದೇವೆ. 11 ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಸಲು ಚಿಂತನೆ ನಡೆದಿದೆ’ ಎಂದು ಎಂದರು.

ಸಹಾಯಕ ಕೃಷಿ ನಿರ್ದೇಶಕ ಧುಳಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಗಾಯತ್ರಿ, ಸಮಾಜ ಕಲ್ಯಾಣಾಧಿಕಾರಿ ಅನೀಲಕುಮಾರ ಮೇಲ್ದೊಡ್ಡಿ, ಎಂಜಿನಿಯರ್ ವೆಂಕಟರಾವ ಸಿಂಧೆ, ಪಿಎಸ್‍ಐ ಉಪೇಂದ್ರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಶೇಷ ವಾಕಥಾನ್ ಇಂದು

ಔರಾದ್: ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಬುಧವಾರ (ಏ.05) ಪಟ್ಟಣದಲ್ಲಿ ವಿಶೇಷ ವಾಕಥಾನ್ (ಕಾಲ್ನಡಿಗೆ) ಅಭಿಯಾನ ನಡೆಯಲಿದೆ ಎಂದು ಚುನಾವಣಾಧಿಕಾರಿ ಜಿಯಾವುಲ್ಲ ಕೆ. ಹಾಗೂ ತಹಶೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದರು. ‘ಅಂದು ಬೆಳಿಗ್ಗೆ 6ಗಂಟೆಗೆ ಪಟ್ಟಣದ ಎಪಿಎಂಸಿ ಕ್ರಾಸ್‍ನಿಂದ ತಹಶೀಲ್ದಾರ್ ಕಚೇರಿವರೆಗೆ ಈ ಅಭಿಯಾನ ನಡೆಯಲಿದೆ. ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಹಾಗೂ ಆಶಾ ಅಂಗನವಾಡಿ ಕಾರ್ಯಕರ್ತೆಯರು ಸೇರಿ 800ಕ್ಕೂ ಹೆಚ್ಚು ಜನ ಅಭಿಯಾನಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT