ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಆರ್‌ಪಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವಂತಿಲ್ಲ

ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ರಮೇಶ್ ಮಸ್ಕಲೆ ಹೇಳಿಕೆ
Last Updated 18 ಮೇ 2021, 3:46 IST
ಅಕ್ಷರ ಗಾತ್ರ

ಭಾಲ್ಕಿ: ‘ತಾಲ್ಲೂಕಿನ ಖಾಸಗಿ ಹಾಗೂ ಸಹಕಾರಿ ರಸಗೊಬ್ಬರ ಮಾರಾಟಗಾರರು ರಸಗೊಬ್ಬರ ಚೀಲದ ಮೇಲೆ ಮುದ್ರಿತ ಎಂ.ಆರ್.ಪಿ ದರಗಳಿಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವಂತಿಲ್ಲ’ ಎಂದು ಸಹಾಯಕ ಕೃಷಿ ನಿರ್ದೇಶಕ ರಮೇಶ ಮಸ್ಕಲೆ ತಿಳಿಸಿದ್ದಾರೆ.

‘ರೈತರು ಸಹ ರಸಗೊಬ್ಬರ ಚೀಲಗಳ ಮೇಲೆ ಮುದ್ರಿತ ದರಗಳನ್ನು ಗಮನಿಸಿ ಖರೀದಿಸಬೇಕು’ ಎಂದು ಸಲಹೆ ನೀಡಿದ್ದಾರೆ.

‘ರಸಗೊಬ್ಬರ ಮಾರಾಟಗಾರರು ತಮ್ಮ ಮಳಿಗೆಗಳ ಮುಂಭಾಗದಲ್ಲಿ ಸಂಸ್ಥೆವಾರು ದಾಸ್ತಾನಿರುವ ರಸಗೊಬ್ಬರದ ಪ್ರಮಾಣ ಮತ್ತು ದರವನ್ನು ರೈತರಿಗೆ ಸುಲಭವಾಗಿ ಕಾಣಿಸುವ ಹಾಗೆ ಪ್ರದರ್ಶಿಸಬೇಕು. ರೈತರು ರಸಗೊಬ್ಬರ ಖರೀದಿಸುವಾಗ ಕಡ್ಡಾಯವಾಗಿ ಆಧಾರ್ ಕಾರ್ಡ್‌ನ್ನು ಸಲ್ಲಿಸಲು ಕೋರಿದ್ದಾರೆ. ರಸಗೊಬ್ಬರ ಮಾರಾಟಗಾರರು ಪಿಒಎಸ್ ಯಂತ್ರದ ಮುಖೇನ ಮಾರಾಟ ಮಾಡುವುದು ಹಾಗೂ ನಿಗದಿತ ನಮೂನೆಯಲ್ಲಿ ರಶೀದಿಗಳನ್ನು ನೀಡಲು’ ತಿಳಿಸಿದ್ದಾರೆ.

‘ಹೆಚ್ಚಿನ ದರದಲ್ಲಿ ಮಾರಾಟ ಮಾಡಿದಲ್ಲಿ ರೈತರು ಹತ್ತಿರದ ಕೃಷಿ ಇಲಾಖೆಯ ಕಚೇರಿಗಳನ್ನು ಸಂಪರ್ಕಿಸಿ ದೂರು ನೀಡಬಹುದಾಗಿದೆ. ರಸಗೊಬ್ಬರ ಮಾರಾಟಗಾರರು ಏಪ್ರಿಲ್ 1ರಿಂದ ರಸಗೊಬ್ಬರ ಧಾರಣೆ ಏರಿಕೆಯಾಗಿದೆ ಎಂಬ ನೆಪವೊಡ್ಡಿ ಹಾಲಿ ಲಭ್ಯವಿರುವ ದಾಸ್ತಾನಿನ ರಸಗೊಬ್ಬರವನ್ನು ಚೀಲದ ಮೇಲೆ ಮುದ್ರಿತ ಎಂ.ಆರ್.ಪಿ ದರಗಳಿಗಿಂತ ಹೆಚ್ಚಿನ ದರದಲ್ಲಿ ರೈತರಿಗೆ ಮಾರಾಟ ಮಾಡುವಂತಿಲ್ಲ. ರೈತರು ಎಂ.ಆರ್.ಪಿ ದರದಲ್ಲಿಯೇ ರಸಗೊಬ್ಬರ ಖರೀದಿ ಮಾಡುವಂತೆ’ ಕೋರಿದ್ದಾರೆ.

‘ಪ್ರಮುಖ ಬೆಳೆಗಳಾದ ಸೋಯಾ, ಅವರೆ, ತೊಗರಿ, ಉದ್ದು, ಹೆಸರು ಹಾಗೂ ಇತರೆ ಬೆಳೆಗಳಲ್ಲಿ ಪ್ರಾರಂಭಿಕ ಹಂತದಲ್ಲೆ ಕೀಟ ಮತ್ತು ರೋಗಗಳ ಹಾವಳಿ ಹಾಗೂ ಪೋಷಕಾಂಶಗಳ ಕೊರತೆ ಹೆಚ್ಚಾಗುವುದರಿಂದ ರೈತರು ರೈತ ಸಂಪರ್ಕ ಕೇಂದ್ರದಿಂದ ಖರೀದಿಸಿದ ನಂತರ ಚೀಲದಲ್ಲಿರುವ ಪೀಡೆ ನಾಶಕದೊಂದಿಗೆ ಕಡ್ಡಾಯವಾಗಿ ಬೀಜೋಪಚಾರ ಕೈಗೊಂಡು ಬಿತ್ತನೆ ಮಾಡಬೇಕು. ಯಾವುದೇ ರೀತಿಯ ತಾಂತ್ರಿಕ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ ಜನವಾಡ, ಕೃಷಿ ಸಂಶೋಧನಾ ಕೇಂದ್ರ ಹಳ್ಳದಕೇರಿ (ಕೆ), ಬೀದರ್‌, ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕದೇರಿ ಸಂಪರ್ಕಿಸಬಹುದು’ ಎಂದಿದ್ದಾರೆ.

‘ರೈತರು ಬಿತ್ತನೆ ಬೀಜ-ರಸಗೊಬ್ಬರ, ಕೀಟನಾಶಕಗಳು ಕಳಪೆ ಮಟ್ಟವೆಂದು ಕಂಡುಬಂದಲ್ಲಿ ಗ್ರಾಹಕರ ವೇದಿಕೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ರಶೀದಿಗಳು ಕಡ್ಡಾಯವಾಗಿ ಹಾಜರುಪಡಿಸಬೇಕಾಗಿರುತ್ತದೆ.
ಆದುದರಿಂದ ಯಾವುದೇ ಕೃಷಿ ಪರಿಕರ ಖರೀದಿಸುವಾಗ ಕಡ್ಡಾಯವಾಗಿ ರಶೀದಿಯನ್ನು ಪಡೆದುಕೊಳ್ಳತಕ್ಕದ್ದು ಹಾಗೂ ಗರಿಷ್ಠ ಮಾರಾಟ ಬೆಲೆಯನ್ನು ನೋಡಿಯೇ ಖರೀದಿಸಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ರಸಗೊಬ್ಬರ ದರ ಹೆಚ್ಚಿಸಿದ ಸರ್ಕಾರ; ರೈತರಿಗೆ ಸಂಕಟ’

ಖಟಕಚಿಂಚೋಳಿ: ‘ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಸಾಯನಿಕ ಗೊಬ್ಬರದ ಬೆಲೆ ಏರಿಕೆ ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ’ ಎಂದು ಅಖಂಡ ಕರ್ನಾಟಕ ರೈತ ಸಂಘ ರಾಜ್ಯ ಘಟಕದ ಗೌರವಾಧ್ಯಕ್ಷ ನಿರ್ಮಲಕಾಂತ ಪಾಟೀಲ ಹೇಳಿದ್ದಾರೆ.

‘ಕೇಂದ್ರ ಸರ್ಕಾರ ರಾಸಾಯನಿಕ ಗೊಬ್ಬರಗಳನ್ನು ಹಳೆಯ ದರದಂತೆ ಮಾರಾಟ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಸದ್ಯ ರಾಸಾಯನಿಕ ಗೊಬ್ಬರ ದರ ದುಬಾರಿ ಮಾಡಿ ರೈತರ ನಿದ್ದೆಗೆಡಿಸಿದೆ. ಕಳೆದ ವರ್ಷ ಡಿಎಪಿ ದರ ಪ್ರತಿ 50 ಕೆ.ಜಿ ಗೆ ₹1200 ಇತ್ತು. ಆದರೆ ಸದ್ಯ ₹1900ಕ್ಕೆ ಮಾರಾಟ ಮಾಡಲಾಗುತ್ತಿದೆ. ಅಂದರೆ ಪ್ರತಿ ಚೀಲಕ್ಕೆ ₹700 ಏರಿಕೆ ಮಾಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕೊರೊನಾ ಹರಡುತ್ತಿರುವ ಈ ಸಮಯದಲ್ಲಿ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲ. ಸಮರ್ಪಕ ಬೆಂಬಲ ಬೆಲೆ ಸಿಗುತ್ತಿಲ್ಲ. ಅನೇಕ ರೈತರು ಹೊಲಗಳಲ್ಲಿನ ಬೆಳೆಯನ್ನು ತೆಗೆಯದೆ ಪರದಾಡುತ್ತಿದ್ದಾರೆ. ಈ ಸಮಯದಲ್ಲಿ ಗೊಬ್ಬರ ದರ ಹೆಚ್ಚಳ ಮಾಡಿರುವುದು ಗಾಯದ ಬರೆ ಎಳೆದಂತಾಗಿದೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT