ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ಗಣೇಶ ಮೂರ್ತಿಗಳ ಮೆರವಣಿಗೆ ಸಂಭ್ರಮ: ಸಚಿವರು, ಅಧಿಕಾರಿಗಳು ಭಾಗಿ

ಕಣ್ತುಂಬಿಕೊಂಡ ಸಹಸ್ರಾರು ಜನ; ಪ್ರಮುಖ ರಸ್ತೆಗಳಲ್ಲಿ ಪ್ರಸಾದ ವ್ಯವಸ್ಥೆ
Published : 11 ಸೆಪ್ಟೆಂಬರ್ 2024, 18:50 IST
Last Updated : 11 ಸೆಪ್ಟೆಂಬರ್ 2024, 18:50 IST
ಫಾಲೋ ಮಾಡಿ
Comments

ಬೀದರ್‌: ಸಡಗರ, ಸಂಭ್ರಮದ ನಡುವೆ ಗಣೇಶನ ಮೂರ್ತಿಗಳ ಭವ್ಯ ಮೆರವಣಿಗೆ ನಗರದಲ್ಲಿ ಬುಧವಾರ ರಾತ್ರಿ ನಡೆಯಿತು.

ನಗರದ ವಿವಿಧ ಬಡಾವಣೆಗಳಲ್ಲಿ ಆಯಾ ಗಣೇಶ ಮಂಡಳಿಯವರು ನಾಲ್ಕು ದಿನಗಳ ವರೆಗೆ ಬಗೆಬಗೆಯ ಗಣಪನ ಮೂರ್ತಿಗಳನ್ನು ಭವ್ಯವಾದ ಪೆಂಡಾಲ್‌ಗಳಲ್ಲಿ ಪ್ರತಿಷ್ಠಾಪಿಸಿ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಿದ್ದರು.

ಎಲ್ಲೆಡೆ ಭಕ್ತಿಯ ವಾತಾವರಣ ನಿರ್ಮಾಣವಾಗಿತ್ತು. ಐದನೇ ದಿನವಾದ ಬುಧವಾರ ಬೆಳಿಗ್ಗೆ ಪೆಂಡಾಲ್‌ಗಳನ್ನು ತೆಗೆದು, ಅಲಂಕರಿಸಿದ ವಾಹನಗಳಲ್ಲಿ ಗಣಪನ ಮೂರ್ತಿಗಳನ್ನು ಕೂರಿಸಿದರು.

ವಾಹನಗಳ ಅಲಂಕಾರಕ್ಕೆ ಇಡೀ ದಿನ ಸವೆಸಿದರು. ಕತ್ತಲಾಗುತ್ತಿದ್ದಂತೆ ತೆರೆದ ವಾಹನಗಳಲ್ಲಿ ಗಣಪನ ಮೂರ್ತಿಗಳೊಂದಿಗೆ ಬೃಹತ್‌ ಗಾತ್ರದ ಡಿಜೆಗಳೊಂದಿಗೆ ಕಿವಿಗಡಚ್ಚಿಕ್ಕುವ ಸಂಗೀತದೊಂದಿಗೆ ಹೆಜ್ಜೆ ಹಾಕುತ್ತ ಮೆರವಣಿಗೆ ಮಾಡಿದರು.

ಮೆರವಣಿಗೆ ಉದ್ದಕ್ಕೂ ವಿನಾಯಕನಿಗೆ ಜಯಘೋಷ ಹಾಕಿದರು. ಪಟಾಕಿ ಸಿಡಿಸಿದರು. ಭಕ್ತಿಯಲ್ಲಿ ಮಿಂದೆದ್ದು ಧಾರ್ಮಿಕ ಹಾಗೂ ದೇಶಭಕ್ತಿ ಗೀತೆಗಳಿಗೆ ಕುಣಿದು ಕುಪ್ಪಳಿಸಿದರು.

ನಗರದ ಬಸವೇಶ್ವರ ವೃತ್ತದಿಂದ ನಯಾ ಕಮಾನ್‌, ಸಿದ್ದಿ ತಾಲೀಮ್‌ ಮೂಲಕ ಚೌಬಾರ ಮಾರ್ಗವಾಗಿ ಬೀದರ್‌ ತಾಲ್ಲೂಕಿನ ಕಂದಗೂಳ ಸಮೀಪದ ಮಾಂಜ್ರಾ ನದಿಯ ಕಡೆಗೆ ಮುಖ ಮಾಡಿದರು.

ಪ್ರತಿಯೊಂದು ಗಣೇಶನ ಮೂರ್ತಿಗಳಿಗೆ ಚೌಬಾರ ಮೇಲೆ ನಿರ್ಮಿಸಿದ ವೇದಿಕೆಯಲ್ಲಿ ಗಣ್ಯರು ಹೂಮಳೆಗೆರೆದು ಸ್ವಾಗತಿಸಿ, ಬೀಳ್ಕೊಟ್ಟರು.

ಗಣೇಶನ ಮೂರ್ತಿಗಳ ಮೆರವಣಿಗೆ ಕಣ್ತುಂಬಿಕೊಳ್ಳಲು ನಗರ ಸೇರಿದಂತೆ ಗ್ರಾಮೀಣ ಭಾಗದಿಂದ ಅಪಾರ ಸಂಖ್ಯೆಯ ಜನ ಬಂದು ರಸ್ತೆಯ ಇಕ್ಕೆಲಗಳಲ್ಲಿ ನಿಂತುಕೊಂಡಿದ್ದರು. ಕೆಲವರು ಕಟ್ಟಡಗಳನ್ನೇರಿ ಕುಟುಂಬ ಸಮೇತ ಕುಳಿತುಕೊಂಡು ಮೆರವಣಿಗೆ ಕಣ್ತುಂಬಿಕೊಂಡರು.

ಬಸವೇಶ್ವರ ವೃತ್ತದಿಂದ ಚೌಬಾರ ವರೆಗೆ ಜನಜಾತ್ರೆ ಇತ್ತು. ಮಾರ್ಗದುದ್ದಕ್ಕೂ ಗಣೇಶ ಮಹಾಮಂಡಳಿಯವರು, ವಿವಿಧ ಸಂಘ ಸಂಸ್ಥೆಗಳವರು ಅನ್ನದಾಸೋಹದ ವ್ಯವಸ್ಥೆ ಮಾಡಿದ್ದರು. ಮೆರವಣಿಗೆ ಕಣ್ತುಂಬಿಕೊಳ್ಳುತ್ತಲೇ ಜನ ಪ್ರಸಾದ ಸ್ವೀಕರಿಸಿದರು. ಇನ್ನು, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಗಣೇಶ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ಅವರು ಮೆರವಣಿಗೆಯಲ್ಲಿ ಕೋಲಾಟವಾಡಿ ಗಮನ ಸೆಳೆದರು. ಪೌರಾಡಳಿತ ಸಚಿವ ರಹೀಂ ಖಾನ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಬಸವೇಶ್ವರ ವೃತ್ತ, ನಯಾ ಕಮಾನ್‌, ಸಿದ್ದಿ ತಾಲೀಮ್‌, ಚೌಬಾರ, ಮಹಮೂದ್‌ ಗಾವಾನ್‌ ವೃತ್ತ ಸೇರಿದಂತೆ ಮೆರವಣಿಗೆ ಹಾದು ಹೋಗುವ ಮಾರ್ಗಗಳ ಮಂದಿರ, ಮಸೀದಿ ಸೇರಿದಂತೆ ಪ್ರಮುಖ ಸ್ಥಳ ಹಾಗೂ ವೃತ್ತಗಳಲ್ಲಿ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ. ಮಾರ್ಗದುದ್ದಕ್ಕೂ ಹೆಚ್ಚಿನ ಸಂಖ್ಯೆಯ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಗುರುವಾರ ಬೆಳಿಗ್ಗೆ ಮೂರ್ತಿಗಳ ವಿಸರ್ಜನೆ: ಗಣಪನ ಮೂರ್ತಿಗಳನ್ನು ವಿಸರ್ಜನೆಗೆ ಬುಧವಾರ ಸಂಜೆ ಮೆರವಣಿಗೆಯಲ್ಲಿ ತರಲಾಗಿತ್ತು. ಆದರೆ, ಬೀದರ್‌ ತಾಲ್ಲೂಕಿನ ಕಂದಗೂಳ ಸಮೀಪದ ಮಾಂಜ್ರಾ ನದಿಯಲ್ಲಿ ಮೂರ್ತಿಗಳನ್ನು ವಿಸರ್ಜಿಸಿದ್ದು ಗುರುವಾರ ನಸುಕಿನ ಜಾವದಿಂದ ಬೆಳಗಿನ ತನಕ. ಬಸವೇಶ್ವರ ವೃತ್ತ, ಚೌಬಾರ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಸಿದ್ದಾರ್ಥ ಕಾಲೇಜು ಮೂಲಕ ಮೆರವಣಿಗೆಯಲ್ಲಿ ಮೂರ್ತಿಗಳನ್ನು ನದಿಗೆ ತೆಗೆದುಕೊಂಡು ಹೋದಾಗ ಗುರುವಾರ ಬೆಳಕು ಹರಿದಿತ್ತು.

ಆನಂತರ ಕ್ರೇನ್‌ ಸಹಾಯದಿಂದ ಒಂದೊಂದಾಗಿ ಮೂರ್ತಿಗಳನ್ನು ವಿಸರ್ಜಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT