ಸೋಮವಾರ, ಜನವರಿ 27, 2020
27 °C
11 ತಿಂಗಳಲ್ಲಿ ಬ್ರಿಮ್ಸ್‌ ಆಸ್ಪತ್ರೆಯಲ್ಲಿ 3,762 ಶಿಶುಗಳ ಜನನ

ಶಿಶುಗಳ ಮರಣ ಪ್ರಮಾಣ ಶೇಕಡ 2ಕ್ಕೆ ಇಳಿಕೆ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಇಲ್ಲಿಯ ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಹನ್ನೊಂದು ತಿಂಗಳ ಅವಧಿಯಲ್ಲಿ 3,762 ಶಿಶುಗಳು ಜನಿಸಿವೆ. ಅದರಲ್ಲಿ 78 ಶಿಶುಗಳು ಮೃತಪಟ್ಟಿದ್ದು, ರಾಜ್ಯದ ಅಂಕಿ ಅಂಶಗಳಿಗೆ ಹೋಲಿಸಿದರೆ ಶಿಶುಗಳ ಮರಣ ಪ್ರಮಾಣ ಶೇಕಡ 2ಕ್ಕೆ ಇಳಿದಿದೆ.

ಉಸಿರಾಟ ಸಮಸ್ಯೆ, ಅವಧಿಪೂರ್ವ ಜನನ, ಮೆಕೊನಿಯಮ್ ಅಸ್ಪಿರೇಷನ್‌ ಸಿಂಡ್ರೋಮ್‌, ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೊಮ್‌, ಬೆಳವಣಿಗೆ ಸಮಸ್ಯೆ ಹಾಗೂ ಸೋಂಕು ಶಿಶುಗಳ ಮರಣಕ್ಕೆ ಕಾರಣವಾಗಿದೆ.

ಬ್ರಿಮ್ಸ್‌ ಆಸ್ಪತ್ರೆಯಲ್ಲಿಯೇ ಜನಿಸಿ ಎಸ್‌ಎನ್‌ಸಿಯುದಲ್ಲಿದ್ದ 599 ಶಿಶುಗಳಲ್ಲಿ 78 ಶಿಶುಗಳು ಮೃತಪಟ್ಟರೆ, ಬೇರೆ ಆಸ್ಪತ್ರೆಯಿಂದ ಶಿಫಾರಸ್ಸಿನ ಮೇಲೆ ಬಂದಿದ್ದ 305 ಶಿಶುಗಳಲ್ಲಿ 54 ಹಾಗೂ ಬ್ರಿಮ್ಸ್‌ ಆಸ್ಪತ್ರೆಗೆ ನೇರವಾಗಿ ಬಂದ 15 ಶಿಶುಗಳಲ್ಲಿ 4 ಶಿಶುಗಳು ಮೃತಪಟ್ಟಿವೆ.

ಶಿಶುಗಳ ಆರೈಕೆ ಹಾಗೂ ಆರೋಗ್ಯ ರಕ್ಷಣೆಗಾಗಿಯೇ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸರ್ಕಾರ ಸಾಕಷ್ಟು ಅನುದಾನ ಒದಗಿಸುತ್ತಿದೆ. ಆಸ್ಪತ್ರೆಯಲ್ಲಿನ ಲಿಫ್ಟ್‌ಗಳು ಕಾರ್ಯಾರಂಭ ಮಾಡಿದ ನಂತರ ವಿಶೇಷ ನಿಗಾ ಘಟಕ(ಎಸ್‌ಎನ್‌ಸಿ)ವನ್ನು ಆರನೆಯ ಮಹಡಿಗೆ ಸ್ಥಳಾಂತರಿಸಿ ಶಿಶುಗಳಿಗೆ ಚಿಕಿತ್ಸೆ ಕೊಡಲು ಉದ್ದೇಶಿಸಲಾಗಿದೆ.

ಪೌಷ್ಟಿಕ ಪುನರ್ವಸತಿ ಕೇಂದ್ರ(ಎನ್‌ಆರ್‌ಸಿ)ದ ಸಿಬ್ಬಂದಿ ಕೊರತೆ ನೀಗಿಸುವ ಉದ್ದೇಶದಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್‌ಎಚ್‌ಎಂ) ಯೋಜನೆಯಡಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಆಸ್ಪತ್ರೆಯು ಪತ್ರ ಸಲ್ಲಿಸಿದೆ.

ಆಸ್ಪತ್ರೆ ಸಿಬ್ಬಂದಿಗೆ ನಿರಂತರ ತರಬೇತಿ, ಆಧುನಿಕ ಯಂತ್ರೋಪಕರಣಗಳ ಖರೀದಿ, ಪ್ರಸೂತಿ ಹಾಗೂ ಮಕ್ಕಳ ವಿಭಾಗದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲು ಯೋಜನೆ ರೂಪಿಸಲಾಗುತ್ತಿದೆ.
‘ಕಳೆದ ಐದು ವರ್ಷಗಳ ಅವಧಿಯಲ್ಲಿ ಬ್ರಿಮ್ಸ್‌ ಬೋಧಕ ಆಸ್ಪತ್ರೆಗೆ ದಾಖಲಾದ ಶಿಶುಗಳಲ್ಲಿ ಮರಣ ಹೊಂದಿದ ಪ್ರಮಾಣ ರಾಜ್ಯದ ಅಂಕಿಸಂಖ್ಯೆಗಳಿಗೆ ಹೋಲಿಸಿದರೆ ಸಮಾನವಾಗಿದೆ’ ಎನ್ನುತ್ತಾರೆ ಬ್ರಿಮ್ಸ್‌ ಬೋಧಕ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವಿಕಾಂತ ಸ್ವಾಮಿ.

ಯಾವುದೇ ಸೋಂಕು ಹರಡದಂತೆ ಎಚ್ಚರಿಕೆ ವಹಿಸಿ ರೋಗಿಗಳ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬರುವ ಜನರನ್ನು ನಿಯಂತ್ರಿಸಲು ಪಾಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಅನಗತ್ಯವಾಗಿ ಆಸ್ಪತ್ರೆಗೆ ಬರುತ್ತಿದ್ದ ಜನರ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವಾಗಿದೆ.

ರೋಗಿಗಳು ಶೌಚಾಲಯಗಳಲ್ಲಿ ಪ್ಯಾಡ್‌ ಹಾಗೂ ಬಟ್ಟೆಗಳನ್ನು ಎಸೆಯುತ್ತಿರುವ ಕಾರಣ ಅವುಗಳನ್ನು ಸ್ವಚ್ಛಗೊಳಿಸುವುದು ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿಗೆ ತಲೆ ನೋವಾಗಿದೆ. ಆದರೂ ಆಸ್ಪತ್ರೆಯ ಒಳಗೆ ಹಾಗೂ ಆವರಣದಲ್ಲಿ ನೈರ್ಮಲ್ಯ ಕಾಪಾಡಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ ಎಂದು ಹೇಳುತ್ತಾರೆ.

ಪ್ರತಿಕ್ರಿಯಿಸಿ (+)