ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಮನಾಬಾದ್‌: ಪೋಷಕರ ಶೋಕದಲ್ಲೇ ಮುಳಗಿದ ಪುಟಾಣಿಗಳ ಬದುಕು!

ಅನಾರೋಗ್ಯದಿಂದ ತಂದೆ–ತಾಯಿ ಅಕಾಲಿಕ ಸಾವು; ಶಿಕ್ಷಣದಿಂದ ವಂಚಿತರಾದ ಮಕ್ಕಳು
ಗುಂಡು ಅತಿವಾಳ
Published 13 ಆಗಸ್ಟ್ 2024, 5:33 IST
Last Updated 13 ಆಗಸ್ಟ್ 2024, 5:33 IST
ಅಕ್ಷರ ಗಾತ್ರ

ಹುಮನಾಬಾದ್‌: ತಾಲ್ಗೂಕಿನ ಹುಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾನಗರದಲ್ಲಿ ತಂದೆ–ತಾಯಿಯನ್ನು ಕಳೆದುಕೊಂಡ ಮಕ್ಕಳಿಬ್ಬರು ತಮ್ಮ ‍ಪ್ರೀತಿಯ ಪೋಷಕರ ನೆನಪಿನಲ್ಲೇ ಕಾಲ ಕಳೆಯುತ್ತಿದ್ದು, ಶಿಕ್ಷಣದಿಂದ ವಂಚಿತವಾಗಿವೆ.

ಇಂದಿರಾನಗರದ 14 ವರ್ಷದ ಸಾಯಿನಾಥ್ ಹಾಗೂ ಎಂಟು ವರ್ಷದ ಸುಸ್ಮಿತಾ ಶಿಕ್ಷಣದಿಂದ ವಂಚಿತರಾದವರು. ಮೂರು ವರ್ಷದ ಹಿಂದೆ ತಂದೆ ಹಾಗೂ ಒಂದು ವರ್ಷದ ಹಿಂದೆ ತಾಯಿ ಅನಾರೋಗ್ಯಪೀಡಿತರಾಗಿ ಮೃತಪಟ್ಟಿದ್ದು, ಈ ಇಬ್ಬರು ಮಕ್ಕಳು ತಮ್ಮ ಪೋಷಕರ ನೆನಪಿನಲ್ಲೇ ಕಾಲದೂಡುತ್ತಿವೆ. ಅಸಹಾಯಕ ಪುಟಾಣಿಗಳ ಸಂಕಷ್ಟವು ನೋಡುಗರ ಮನಕಲುತ್ತಿದೆ. ಗ್ರಾಮದಲ್ಲಿ ನೆರೆ–ಹೊರೆಯವರ ಸಾಂತ್ವನದ ಮಾತು ಮಕ್ಕಳ ಮಕ್ಕಳ ಮನಸ್ಸಿಗೆ ಸಮಾಧಾನ ತರುತ್ತಿವೆಯಾದರೂ ಅವರ ಮುಂದಿನ ಶಿಕ್ಷಣಕ್ಕೆ ದಾರಿ ಸಿಕ್ಕಿಲ್ಲ.  

ಈ ಇಬ್ಬರು ಮಕ್ಕಳು ತಮ್ಯ ಮಸ್ಸಾದ ಅಜ್ಜ–ಅಜ್ಜಿಯ ನೆರಳಿನಲ್ಲಿ ಕಾಲ ಕಳೆಯುತ್ತಿವೆ. ವಯೋವೃದ್ಧ ದಂಪತಿಯು ತಮಗೆ ಬರುವ ವೃದ್ಧಾಪ್ಯ ವೇತನದಿಂದಲೇ ಜೀವನ ಸಾಗಿಸುತ್ತಿದ್ದು, ಸಕಾಲಕ್ಕೆ ಬಾರದ ಸಾಮಾಜಿಕ ಪಿಂಚಣಿಯೂ ನಾಲ್ವರ ಜೀವನಕ್ಕೆ ಸಾಲದಾಗಿದ್ದು, ಮೊಮಕ್ಕಳಿಗೆ ಶಿಕ್ಷಣ ಕೊಡಿಸಲು ಯಾರಾದರೂ ನೆರವಾಗಬಹುದು ಎಂದು ದಾರಿ ಎದುರು ನೋಡುತ್ತಿದ್ದಾರೆ.  

‘ನಮ್ಮ ತಂದೆ ಬದುಕಿದ್ದಾಗ ಉತ್ತಮ ಶಿಕ್ಷಣ ಪಡೆದು ದೊಡ್ಡ ಸರ್ಕಾರಿ ನೌಕರನಾಗಬೇಕು ಎಂದು ನಿತ್ಯ ಹೇಳುತ್ತಿದ್ದರು. ಕೂಲಿ ಕೆಲಸ ಮಾಡಿಯೇ ನನಗೆ 1ರಿಂದ 7ನೇ ತರಗತಿವರೆಗೆ ಖಾಸಗಿ ಶಾಲೆಯಲ್ಲಿ ಶಿಕ್ಷಣ ಕೊಡಿಸಿದ್ದರು. ಅವರ ನಿರೀಕ್ಷೆಯಂತೆ ಉತ್ತಮ ಅಂಕಗಳನ್ನು ಪಡೆದಿದ್ದೇನೆ. ಆದರೆ ಆ ವಿಧಿ ತಂದೆ–ತಾಯಿಯನ್ನು ಕರೆದುಕೊಂಡು ಹೋಯಿತು. ತಂದೆ ಸಾವಿನ ಬಳಿಕ ಕಳೆದ ಮೂರು ವರ್ಷಗಳಿಂದ ಶಾಲೆಯ ಶುಲ್ಕ ಕಟ್ಟಿಲ್ಲ. ಶಾಲೆ ಆಡಳಿತ ಮಂಡಳಿಗೂ ಬೇಸರವಾಗಿದೆ ಶುಲ್ಕ ಪಾವತಿಸಿ ಶಾಲೆಗೆ ಬರಬೇಕು ಎಂದು ದಿನ ಸೂಚನೆ ನೀಡುತ್ತಿದ್ದಾರೆ. ನಾನು ಶಾಲೆಗೆ ಹೋಗುವುದನ್ನು ನೋಡಿ ಈಗ ನನ್ನ ಪುಟ್ಟ ತಂಗಿಯು ಶಾಲೆಗೆ ಬರುತ್ತೇನೆ ಎಂದು ಹಠ ಮಾಡುತ್ತಿದ್ದಾಳೆ‌. ನನ್ನ ಶುಲ್ಕವೇ ಭರಿಸಲು ಸಾಧ್ಯವಾಗುತ್ತಿಲ್ಲ. ಮತ್ತೆ ಆಕೆಯು ಶಾಲೆಗೆ ಬರುತ್ತಾಳೆ ಎನ್ನುತ್ತಿದ್ದಾಳೆ. ಈಗ ಏನೂ ಮಾಡಬೇಕು ಎಂದು ತಿಳಿಯದ ಕಾರಣ ಕಳೆದ 15 ದಿನಗಳಿಂದ ನಾನು ಶಾಲೆಗೆ ಹೋಗವುದನ್ನೇ ಬಿಟ್ಟು ಮನೆಯಲ್ಲಿ ಇದ್ದೇನೆ’ ಎಂದು ಬಾಲಕ ಸಾಯಿನಾಥ್ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು. 

‘ತಂದೆ ತಾಯಿಯ ಅನಾರೋಗ್ಯಕ್ಕೆ ಇದ್ದ ಅಲ್ಪ ಮನೆ ಹಾಗೂ ಭೂಮಿಯನ್ನು ಮಾರಾಟ ಮಾಡಿದ್ದೇವೆ. 75 ವರ್ಷದ ಅಜ್ಜ– ಅಜ್ಜಿ ಇದ್ದಾರೆ. ಅವರ ಜತೆ ಇಂದಿರಾ ನಗರದ ಹೊರವಲಯದ ಖಾಸಗಿ ವ್ಯಕ್ತಿಯೊಬ್ಬರ ಸ್ಥಳದಲ್ಲಿ ಸದ್ಯ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಅಜ್ಜ–ಅಜ್ಜಿ ಇಬ್ಬರಿಗೂ ಕಿವಿ ಕೇಳಿಸುವುದಿಲ್ಲ, ಸರಿಯಾಗಿ ಕಣ್ಣು ಕಾಣುವುದಿಲ್ಲ. ಗುಡಿಸಲಿಗೆ ವಿದ್ಯುತ್ ಸಂಪರ್ಕ ಇಲ್ಲ. ಕತ್ತಲಾದರೆ ಸಾಕು ಕಪ್ಪೆ, ಚೇಳು , ಹಾವುಗಳು ಆಗಾಗ ಗುಡಿಸಿಲು ಹತ್ತಿರ ಬರುತ್ತೇವೆ. ಇದನ್ನು ನೋಡಿದ ನನ್ನ ತಂಗಿ ಕತ್ತಲಾದರೆ ಸಾಕು ಭಯ ಬೀಳುತ್ತಿದ್ದಾಳೆ’ ಎನ್ನುತ್ತಾನೆ ಸಾಯಿನಾಥ್.

‘ತಿಂಗಳಿಗೆ 10 ಕೆ.ಜಿ ಪಡಿತರ ಅಕ್ಕಿ ಬರುತ್ತವೆ. ಇದು ನಾಲ್ಕು ಜನರಿಗೆ ಸಾಕಾಗುತ್ತಿಲ್ಲ. ಕೂಲಿ ಕೆಲಸ ಮಾಡುವುದಕ್ಕೂ ನಮ್ಮಿಂದ ಆಗುತ್ತಿಲ್ಲ. ಈ ಇಬ್ಬರ ಮಕ್ಕಳ ಹೆಸರು ಪಡಿತರ ಚೀಟಿಯಲ್ಲಿ ಸೇರಿಸಿದರೆ, ಒಂದಿಷ್ಟು ಅಕ್ಕಿ ಹೆಚ್ಚಿಗೆ ಬರುತ್ತವೆ ಎಂಬ ಆಸೆಯಿಂದ ಹಲವು ಬಾರಿ ಕಚೇರಿಗೆ ಹೋದರೂ ಅಧಿಕಾರಿಗಳು ಈ ಕೆಲಸ ಮಾಡಿಲ್ಲ. ನನ್ನ ವೃದ್ಧಾಪ್ಯ ವೇತನವು ಕಳೆದ 6 ತಿಂಗಳಿಂದ ಬಂದಿಲ್ಲ. ನನ್ನ ಹೆಂಡತಿಗೆ ಬರುವ ವೃದ್ಧಾಪ್ಯ ವೇತನ ಹಣದಲ್ಲಿ ಜೀವನ ಸಾಗಿಸುತ್ತಿದ್ದೇವೆ’ ಮಕ್ಕಳ ಅಜ್ಜ ಲಕ್ಷ್ಮಣ ಕಣ್ಣೀರು ಹಾಕಿದರು.

ಈ ಮಕ್ಕಳಿಗೆ ಪೋಷಕರು ಇಲ್ಲ. ಇರುವುದಕ್ಕೆ ಮನೆಯೂ ಇಲ್ಲ. ವಯಸ್ಸಾದ ಅಜ್ಜಿ ಅಜ್ಜನ ಹತ್ತಿರ ಉಳಿದುಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ವತಿಯಿಂದ ಈ ಕುಟುಂಬಕ್ಕೆ ಮನೆ ಮಂಜೂರು ಮಾಡಿ‌ಸಲಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಿನ ಅಗತ್ಯವಿದೆ.
–ಸಂಗಮೇಶ, ಗ್ರಾ.ಪಂ ಸದಸ್ಯ ಇಂದಿರಾನಗರ.
ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಪಂ ವ್ಯಾಪ್ತಿಯ ಇಂದಿರಾ ನಗರದಲ್ಲಿರುವ ಸಾಯಿನಾಥ್ ಅವರ ಮನೆ.
ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಪಂ ವ್ಯಾಪ್ತಿಯ ಇಂದಿರಾ ನಗರದಲ್ಲಿರುವ ಸಾಯಿನಾಥ್ ಅವರ ಮನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT