ಮಂಗಳವಾರ, ಜನವರಿ 28, 2020
22 °C
ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡ ನಗರದ ಚರ್ಚ್‌ಗಳು

ಕ್ರೈಸ್ತರಲ್ಲಿ ಮನೆ ಮಾಡಿದ ಸಂಭ್ರಮ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯಲ್ಲಿ ಚಳಿ ಆವರಿಸಿದೆ. ಕ್ರೈಸ್ತರು ಚಳಿಯನ್ನು ಲೆಕ್ಕಿಸದೆ ರಾತ್ರಿಯಿಡೀ ಯೇಸುವಿನ ಆರಾಧನೆಯಲ್ಲಿ ತೊಡಗಿದ್ದಾರೆ. ಬಂಧು ಬಳಗದವರನ್ನು ಮನೆಗೆ ಆಹ್ವಾನಿಸಿ ಸಾಮೂಹಿಕ ಭಜನೆ ಮಾಡುವ ಜತೆಗೆ ಮೃಷ್ಟಾನ್ನ ಭೋಜನದ ವ್ಯವಸ್ಥೆಯನ್ನೂ ಮಾಡುತ್ತಿದ್ದಾರೆ.

ನಗರದ ಮಂಗಲಪೇಟೆಯ ಸೇಂಟ್‌ ಪೌಲ್ ಮೆಥೋಡಿಸ್ಟ್‌ ಸೆಂಟ್ರಲ್‌ ಚರ್ಚ್‌ನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚರ್ಚ್‌ ಆವರಣದಲ್ಲಿ ಬೃಹತ್‌ ಪೆಂಡಾಲ್‌ ಹಾಕಲಾಗಿದ್ದು, ಚರ್ಚ್‌ಗೆ ಬರುವವರ ಅನುಕೂಲಕ್ಕಾಗಿ ಕುರ್ಚಿಗಳನ್ನು ಇಡಲಾಗಿದೆ. ಚರ್ಚ್‌ಗೆ ವಿದ್ಯುತ್‌ ದೀಪಗಳ ಮಾಲೆಗಳನ್ನು ಹಾಕಿ ಅದರ ಅಂದ ಹೆಚ್ಚಿಸಲಾಗಿದೆ.

ಮಂಗಲಪೇಟೆಯ ಚರ್ಚ್‌ ಆವರಣದಿಂದ ಮಂಗಲಪೇಟೆ ದರ್ವಾಜಾಕ್ಕೆ ಹೋಗುವ ಸಿಲುಬೆ ವೃತ್ತದವರೆಗೆ ರಸ್ತೆಯ ಎರಡು ಬದಿಗೂ ಅಲಂಕಾರಿಕ ವಿದ್ಯುತ್‌ ದೀಪಗಳ ಮಾಲೆಗಳನ್ನು ಹಾಕಲಾಗಿದೆ. ನಾವದಗೇರಿಯಲ್ಲಿ ರಸ್ತೆ ವಿಭಜಕಗಳ ಮಧ್ಯೆ ಯೇಸುವಿನ ಭಾವಚಿತ್ರ ಹಾಗೂ ಸಾಂತಾ ಕ್ಲಾಸ್ ಕಟೌಟ್‌ಗಳನ್ನು ಅಳವಡಿಸಲಾಗಿದೆ. ಹಲವೆಡೆ ಆಕಾಶಬುಟ್ಟಿಗಳನ್ನು ತೂಗು ಹಾಕಲಾಗಿದೆ.

ನಾವದಗೇರಿಯ ಇಮ್ಯಾನುವೆಲ್‌ ಮೆಥೋಡಿಸ್ಟ್‌ ಚರ್ಚ್‌, ಶಹಾಪೂರ ಗೇಟ್‌ ಬಳಿಯ ರೋಮನ್‌ ಕೆಥೋಲಿಕ್‌ ಚರ್ಚ್‌, ಕುಂಬಾರವಾಡ, ವಿದ್ಯಾನಗರದ ಚರ್ಚ್‌, ರೋಸ್‌ ಮೆಮೊರಿಯಲ್‌ ಚರ್ಚ್‌, ಮಿರ್ಜಾಪುರದ ಗುಹೆಯಲ್ಲಿರುವ ಚರ್ಚ್‌, ಆಣದೂರಿನ ಸೇಂಟ್‌ ಪೌಲ್ ಮೆಥೋಡಿಸ್ಟ್‌ ಚರ್ಚ್‌ಗಳಲ್ಲೂ ಸಂಭ್ರಮ ಮನೆ ಮಾಡಿದೆ.

ಕಳೆದ 22 ದಿನಗಳಿಂದ ಚರ್ಚ್‌ಗಳಲ್ಲಿ ಧಾರ್ಮಿಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಮಹಿಳೆಯರು, ಮಕ್ಕಳು ಮಧ್ಯರಾತ್ರಿಯ ವರೆಗೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಖುಷಿಪಡುತ್ತಿದ್ದಾರೆ.

ಎಲ್ಲ ಚರ್ಚ್‌ಗಳ ಆವರಣದಲ್ಲಿ ಗೋದಲಿ, ಯೇಸು, ಮೇರಿ, ಜೋಸೆಫ್ ಹಾಗೂ ಕುರಿಗಳ ಗೊಂಬೆಗಳನ್ನು ಇಡಲಾಗಿದೆ. ಕೆಲವರು ಮನೆಗಳ ಆವರಣದಲ್ಲಿ ಗೋದಲಿ ನಿರ್ಮಿಸಿ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಿದ್ದಾರೆ.
ಮೇಣದ ಬತ್ತಿಗಳು ಪಾಪ ಪರಿಹಾರ, ಪರಿಶುದ್ಧತೆ, ದ್ರಾರಿದ್ಯವನ್ನು ತೊಲಗಿಸಲು ಬರುವ ಅರಸನ ಆಗಮನ ಹಾಗೂ ಸಮೃದ್ಧಿಯ ಸಂಕೇತವಾಗಿವೆ ಎನ್ನುವುದು ಕ್ರೈಸ್ತರ ಭಾವನೆ. ಹೀಗಾಗಿ ಸೋಮವಾರ ಚರ್ಚ್‌ಗಳಲ್ಲಿ ಬಿಳಿ ಮೇಣದ ಬತ್ತಿ ಬೆಳಗಿಸಿ ಆರಾಧನೆ ಮಾಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು