ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: 3 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರುವ ನಗರದಲ್ಲಿ ಬೆರಳೆಣಿಕೆಯ ಉದ್ಯಾನಗಳು

Published 29 ಜನವರಿ 2024, 5:48 IST
Last Updated 29 ಜನವರಿ 2024, 5:48 IST
ಅಕ್ಷರ ಗಾತ್ರ

ಬೀದರ್‌: ಬೀದರ್‌ ನಗರದ ಜನಸಂಖ್ಯೆ ಮೂರು ಲಕ್ಷಕ್ಕೂ ಹೆಚ್ಚು ಇದೆ. ಆದರೆ, ಇಷ್ಟೊಂದು ಜನರಿಗೆ ಸ್ವಚ್ಛಂದ ವಾತಾವರಣದಲ್ಲಿ ಉಸಿರಾಡಲು, ವಾಯುವಿಹಾರಕ್ಕೆ ಉದ್ಯಾನಗಳು ಎಷ್ಟಿವೆ? ಇದಕ್ಕೆ ಉತ್ತರ ಹುಡುಕುತ್ತ ಹೋದರೆ ನಿರಾಸೆ ಉಂಟಾಗುತ್ತದೆ.

ಜನಸಂಖ್ಯೆಗೆ ಅನುಗುಣವಾಗಿ ನಗರದಲ್ಲಿ ಉದ್ಯಾನಗಳು ಇರದ ಕಾರಣ ಈಗಿರುವ ಬೆರಳೆಣಿಕೆಯ ಉದ್ಯಾನಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತಿದೆ. ಅದರಲ್ಲೂ ಕೇಂದ್ರ ಬಸ್‌ ನಿಲ್ದಾಣ ಸಮೀಪದ ಬರೀದ್‌ ಷಾಹಿ ಉದ್ಯಾನ ನಗರದ ಹೃದಯ ಭಾಗದಲ್ಲಿದೆ. ಜಾಗವೂ ವಿಶಾಲವಾಗಿದೆ. ಉತ್ತಮವಾಗಿ ನಿರ್ವಹಣೆಯೂ ಮಾಡಲಾಗುತ್ತಿದೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುವುದರಿಂದ ಕೂರಲು, ನಿಲ್ಲಲ್ಲು ಜಾಗ ಸಾಲದಂಥ ಪರಿಸ್ಥಿತಿ ಇದೆ. ಅದರಲ್ಲೂ ವಾರಾಂತ್ಯಕ್ಕೆ ಜನಜಾತ್ರೆಯೇ ಅಲ್ಲಿ ನೆರೆದಿರುತ್ತದೆ.

ಬರೀದ್‌ ಷಾಹಿ ಉದ್ಯಾನ ಎದುರಿನ ಅಲಿ ಬರೀದ್‌ ವಿಶಾಲ ಪ್ರದೇಶದಲ್ಲಿದೆ. ಅನೇಕ ಗಿಡ, ಮರಗಳನ್ನು ಅರಣ್ಯ ಇಲಾಖೆ ಬೆಳೆಸಿದೆ. ಇದನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕೆನ್ನುವ ಬೇಡಿಕೆಗಳಿವೆ. ಆದರೆ, ಅದಕ್ಕೆ ಸ್ಪಂದನೆ ಸಿಕ್ಕಿಲ್ಲ. ಅರಣ್ಯ ಇಲಾಖೆಯು ಜಾಗ ರಕ್ಷಣೆಗೆ ಸುತ್ತಲೂ ಕಾಂಪೌಂಡ್‌ ನಿರ್ಮಿಸಿ, ಗ್ರಿಲ್‌ ಅಳವಡಿಸಿದೆ. ಅದನ್ನು ಕೂಡ ಕಳವು ಮಾಡಲಾಗುತ್ತಿದೆ. ಹಲವೆಡೆ ಗ್ರಿಲ್‌ ಕಿತ್ತು ಕದ್ದೊಯ್ಯಲಾಗಿದೆ. ಅಕ್ರಮ ಚಟುವಟಿಕೆಗಳ ತಾಣವಾಗಿದೆ ಎಂಬ ಆರೋಪಗಳಿವೆ.

ಬರೀದ್‌ ಷಾಹಿ ಬಿಟ್ಟರೆ ಇನ್ನೊಂದು ಪ್ರಮುಖ ಉದ್ಯಾನವೆಂದರೆ ಗುರುದ್ವಾರ ಸಮೀಪದ ಉದ್ಯಾನ. ಇದು ಗುರುದ್ವಾರ ಪ್ರಬಂಧಕ ಕಮಿಟಿಗೆ ಸೇರಿದ ಖಾಸಗಿ ಉದ್ಯಾನ. ಆದರೆ, ಯಾರು ಬೇಕಾದರೂ ಅಲ್ಲಿಗೆ ಹೋಗಿ ಭೇಟಿ ಕೊಡಬಹುದು. ಒಂದು ಉದ್ಯಾನವನ್ನು ಯಾವ ರೀತಿ ನಿರ್ವಹಣೆ ಮಾಡಬಹುದು ಎನ್ನುವುದಕ್ಕೆ ಉತ್ತಮ ನಿದರ್ಶನ ಬೇರೊಂದಿಲ್ಲ. ಹೀಗಾಗಿಯೇ ಹೆಚ್ಚಿನ ಜನ ಇಷ್ಟಪಟ್ಟು ಅಲ್ಲಿಗೆ ಹೋಗುತ್ತಾರೆ.

ಉಳಿದಂತೆ ಶಿವನಗರ, ಗುಂಪಾ ಎದುರಿನ ಅಗ್ರಿಕಲ್ಚರ್‌ ಕಾಲೊನಿಯಲ್ಲಿ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಕಾಲೊನಿಗಳ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಉದ್ಯಾನಕ್ಕೆ ಜಾಗ ಮೀಸಲಿಟ್ಟರೂ ಅವುಗಳನ್ನು ಅಭಿವೃದ್ಧಿ ಪಡಿಸಿಲ್ಲ. ಇದರ ಪರಿಣಾಮ ಅಲ್ಲಿ ಸದಾ ಜನದಟ್ಟಣೆ ಇರುತ್ತದೆ.

200ಕ್ಕೂ ಅಧಿಕ ಲೇಔಟ್‌:

ಬೀದರ್‌ ನಗರ ಬಹಳ ವೇಗವಾಗಿ ಬೆಳೆಯುತ್ತಿದೆ. ಈಗಾಗಲೇ ಸುಮಾರು 200ಕ್ಕೂ ಅಧಿಕ ಲೇಔಟ್‌ಗಳು ತಲೆ ಎತ್ತಿವೆ. ಬಹುತೇಕ ಕಡೆಗಳಲ್ಲಿ ಕಟ್ಟಡಗಳು ತಲೆ ಎತ್ತಿವೆ. ಉದ್ಯಾನಗಳಿಗೆ ಜಾಗ ಮೀಸಲಿಡಲಾಗಿದೆ. ಆದರೆ, ಅವುಗಳು ಅಭಿವೃದ್ಧಿಯೇ ಕಂಡಿಲ್ಲ.

ಚಿದ್ರಿ ರಸ್ತೆಯ ಸಿದ್ದರಾಮಯ್ಯ ಲೇಔಟ್‌, ಗುಂಪಾ ಅಲ್ಲಮಪ್ರಭು ಕಾಲೊನಿ, ವಿವೇಕಾನಂದ ಕಾಲೊನಿ ಸೇರಿದಂತೆ ಹಲವೆಡೆ 2ರಿಂದ 3 ಎಕರೆಯಷ್ಟು ಹೆಚ್ಚಿನ ಪ್ರದೇಶವನ್ನು ಉದ್ಯಾನಕ್ಕೆ ಜಾಗ ಮೀಸಲಿಡಲಾಗಿದೆ. ಅವುಗಳಿಗೆ ತಂತಿ ಬೇಲಿ ಹಾಕಿರುವುದು ಬಿಟ್ಟರೆ ಏನೂ ಕೆಲಸವಾಗಿಲ್ಲ. ಹೆಸರಿಗಷ್ಟೇ ಉದ್ಯಾನಗಳು ಎಂಬಂತಾಗಿದೆ. ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರವಾಗಲಿ, ನಗರಸಭೆಯಾಗಲಿ ಅವುಗಳ ಅಭಿವೃದ್ಧಿಗೆ ಕಾಳಜಿ ವಹಿಸುತ್ತಿಲ್ಲ ಎನ್ನುವುದು ಜನರ ಆರೋಪ.

ಮತ್ತೆ ಕೆಲವೆಡೆ ಉದ್ಯಾನಗಳನ್ನು ಅಭಿವೃದ್ಧಿ ಗೊಳಿಸುವುದು ಬಿಟ್ಟು ದೇವಸ್ಥಾನ, ದರ್ಗಾ ನಿರ್ಮಿಸಲಾಗಿದೆ. ಇವುಗಳ ಅಭಿವೃದ್ಧಿಗೆ ಹಣ ಕೊಡುವ ಜನಪ್ರತಿನಿಧಿಗಳು ಉದ್ಯಾನದ ಅಭಿವೃದ್ಧಿಗೇಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.

ನಗರದ ಓಲ್ಡ್‌ ಸಿಟಿಯ ಮುಲ್ತಾನಿ ಪಾಷಾ ದರ್ಗಾ, ಗುಲ್ಜರ್‌ ಥೇಟರ್‌ ಬಳಿ ದೊಡ್ಡ ಉದ್ಯಾನಗಳಿವೆ. ಒಂದು ಕಾಲದಲ್ಲಿ ನಗರದ ಪ್ರಮುಖ ಉದ್ಯಾನಗಳಾಗಿದ್ದವು. ಅವುಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿತ್ತು. ಮಕ್ಕಳಿಗೆ ಆಟೋಟದ ಸಾಮಾನುಗಳು, ಬಗೆಬಗೆಯ ಪಕ್ಷಿಗಳನ್ನು ತಂದಿರಿಸಲಾಗಿತ್ತು. ಎಲ್ಲರ ಆಕರ್ಷಣೆಯ ಕೇಂದ್ರಗಳಾಗಿದ್ದವು. ಈಗ ಅವುಗಳತ್ತ ಯಾರು ತೆರಳುತ್ತಿಲ್ಲ. ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದ ಕಾರಣ ಹೆಸರಿಗಷ್ಟೇ ಉದ್ಯಾನಗಳು ಎಂಬಂತಾಗಿದೆ.

ಒಂದೆಡೆ ಮೀಸಲಿಟ್ಟ ಜಾಗದಲ್ಲಿ ಉದ್ಯಾನಗಳು ಅಭಿವೃದ್ಧಿ ಕಾಣುತ್ತಿಲ್ಲ. ಇನ್ನೊಂದೆಡೆ ಪ್ರಭಾವಿಗಳಿಂದ ಅತಿಕ್ರಮಣದ ಭೀತಿಯೂ ಎದುರಾಗಿದೆ. ಕುಂಬಾರವಾಡ, ರಾಂಪೂರೆ ಕಾಲೊನಿಯಲ್ಲಿ ಇತ್ತೀಚೆಗೆ ಅದರ ವಿರುದ್ಧ ಪ್ರತಿಭಟನೆಗಳು ನಡೆದಿರುವುದೇ ತಾಜಾ ನಿದರ್ಶನ.

‘ನಗರ ಸಮತೋಲಿತವಾಗಿ ಅಭಿವೃದ್ಧಿ ಆಗಬೇಕಾದರೆ ಉದ್ಯಾನಗಳು ಇರಬೇಕಾದುದು ಬಹಳ ಮುಖ್ಯ. 3 ಲಕ್ಷಕ್ಕೂ ಹೆಚ್ಚಿರುವ ಜನಸಂಖ್ಯೆಯ ನಗರದಲ್ಲಿ ಬೆರಳೆಣಿಕೆಯ ಉದ್ಯಾನಗಳಿವೆ ಎನ್ನುವುದು ನಾಚಿಕೆಗೇಡಿನ ಸಂಗತಿ. ಅಭಿವೃದ್ಧಿಯೆಂದರೆ ರಸ್ತೆ, ಕಟ್ಟಡಗಳಲ್ಲ. ಜನ ಉಸಿರಾಡಲು ಉತ್ತಮ ಪರಿಸರವೂ ಅಗತ್ಯ. ಆ ನಿಟ್ಟಿನಲ್ಲಿ ಸಂಬಂಧಿಸಿದವರು ಗಮನ ಹರಿಸಬೇಕು’ ಎಂದು ಪರಿಸರ ಕಾರ್ಯಕರ್ತ ವಿನಯ್‌ ಮಾಳಗೆ ಆಗ್ರಹಿಸಿದರು.

ಬೀದರ್‌ನ ಬರೀದ್‌ ಷಾಹಿ ಉದ್ಯಾನದಲ್ಲಿ ನಿತ್ಯ ಈ ದೃಶ್ಯ ಸಾಮಾನ್ಯ
ಬೀದರ್‌ನ ಬರೀದ್‌ ಷಾಹಿ ಉದ್ಯಾನದಲ್ಲಿ ನಿತ್ಯ ಈ ದೃಶ್ಯ ಸಾಮಾನ್ಯ
ಶ್ರೀಕಾಂತ ಚಿಮಕೋಡೆ
ಶ್ರೀಕಾಂತ ಚಿಮಕೋಡೆ
ಹಳೆಯ ಲೇಔಟ್‌ಗಳಲ್ಲಿ ಉದ್ಯಾನ ಅಭಿವೃದ್ಧಿ ಪಡಿಸಿಲ್ಲ. ಹೊಸ ಲೇಔಟ್‌ಗಳಲ್ಲಿ ಉದ್ಯಾನ ಅಭಿವೃದ್ಧಿಪಡಿಸಿದರೆ ಅನುಮತಿ ಕೊಡಲು ನಿರ್ಧರಿಸಲಾಗಿದೆ.
ಶ್ರೀಕಾಂತ ಚಿಮಕೋಡೆ ಆಯುಕ್ತ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರ
ದೇವ ದೇವ ವನ ಅಭಿವೃದ್ಧಿಗೆ ಯೋಜನೆ
ಬೀದರ್‌ ನಗರದ ಶಹಾಪುರ ಗೇಟ್‌ ಸಮೀಪದ ದೇವ ದೇವ ವನ ಉದ್ಯಾನವನ್ನು ಅರಣ್ಯ ಇಲಾಖೆಯವರು ಈ ಹಿಂದೆ ಅಭಿವೃದ್ಧಿ ಪಡಿಸಿದ್ದಾಗ ಹೆಚ್ಚಿನ ಸಂಖ್ಯೆಯಲ್ಲಿ ಜನ ಅಲ್ಲಿಗೆ ಹೋಗುತ್ತಿದ್ದರು. ಪ್ರಕೃತಿ ಮಧ್ಯೆ ಸ್ವಚ್ಛಂದ ವಾತಾವರಣದಲ್ಲಿ ಒಂದಿಷ್ಟು ಕಾಲ ಕಳೆಯಲು ಉತ್ತಮ ಜಾಗ ಸಿಕ್ಕಿತು ಎಂದು ಜನ ಅಂದುಕೊಂಡಿದ್ದರು. ಆದರೆ ಸೂಕ್ತ ನಿರ್ವಹಣೆ ಇಲ್ಲದೆ ಜನ ಹೋಗುವುದು ನಿಲ್ಲಿಸಿದರು. ಯುವತಿಯರು ಮಹಿಳೆಯರಿಗೆ ಸೂಕ್ತ ರಕ್ಷಣೆಯೂ ಇಲ್ಲ ಎಂಬ ಆರೋಪಗಳು ಕೇಳಿ ಬಂದವು. ಈ ಎಲ್ಲ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ದೇವ ದೇವ ವನದ ಅಭಿವೃದ್ಧಿಗೆ ಯೋಜನೆ ರೂಪಿಸಿದೆ. ಜನ ಅಭಿವೃದ್ಧಿಯ ನಿರೀಕ್ಷೆಯಲ್ಲಿದ್ದಾರೆ.
ಗಮನ ಸೆಳೆಯುತ್ತಿರುವ ‘ಟ್ರೀ ಪಾರ್ಕ್‌’
ಬೀದರ್‌ ನಗರದ ಹೊರವಲಯದಲ್ಲಿ ಎರಡು ‘ಟ್ರೀ ಪಾರ್ಕ್‌’ಗಳನ್ನು ಅರಣ್ಯ ಇಲಾಖೆಯಿಂದ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಒಂದು ಬೀದರ್‌–ಭಾಲ್ಕಿ ರಸ್ತೆಯ ನೌಬಾದ್‌ನಲ್ಲಿದ್ದರೆ ಇನ್ನೊಂದು ಬೀದರ್‌–ಹೈದರಾಬಾದ್‌ ರಸ್ತೆಯ ಶಹಾಪುರ ರೈಲ್ವೆ ಗೇಟ್‌ ಸಮೀಪ ಇದೆ. ವಿವಿಧ ಬಗೆಯ ಗಿಡ ಮರಗಳನ್ನು ಅಭಿವೃದ್ಧಿ ಪಡಿಸಿ ಮಕ್ಕಳಿಗೆ ಆಟೋಟ ಹಿರಿಯರಿಗೆ ಜಿಮ್‌ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಕ್ಯಾಂಟೀನ್‌ ಆರಂಭಿಸಬೇಕು. ಶೌಚಾಲಯ ವ್ಯವಸ್ಥೆ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬೇಕೆನ್ನುವುದು ಜನರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT