ಗುರುವಾರ , ಡಿಸೆಂಬರ್ 3, 2020
20 °C
ಸಂಸದ ಖೂಬಾಗೆ ಶಾಸಕ ಈಶ್ವರ ಖಂಡ್ರೆ ಮತ್ತೆ ಆಹ್ವಾನ

ರಣ ಹೇಡಿಯಂತೆ ಹೋಗದೆ ಚರ್ಚೆಗೆ ಬನ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿನ ವಸತಿ ಯೋಜನೆಗಳ ಮನೆ ಹಂಚಿಕೆಯ ವಿಚಾರವಾಗಿ ಬಹಿರಂಗ ಚರ್ಚೆಗೆ ಒಪ್ಪಿಕೊಂಡು, ಈಗ ಕುಂಟು ನೆಪ ಹೇಳುತ್ತಿರುವ ಸಂಸದ ಭಗವಂತ ಖೂಬಾ ಅವರ ಹೇಳಿಕೆಗೆ ನಗಬೇಕೋ, ಅಳಬೇಕೋ ತಿಳಿಯುತ್ತಿಲ್ಲ. ಈಗಲೂ ಸಮಯ ಮೀರಿಲ್ಲ. ರಣ ಹೇಡಿಯಂತೆ ಹೋಗದೆ ಬಹಿರಂಗ ಚರ್ಚೆಗೆ ಬರಬೇಕು’ ಎಂದು ಶಾಸಕ ಈಶ್ವರ ಖಂಡ್ರೆ ಮತ್ತೊಮ್ಮೆ ಸಂಸದ ಭಗವಂಗ ಖೂಬಾ ಆಹ್ವಾನ ನೀಡಿದ್ದಾರೆ.

‘ಅಕ್ಟೋಬರ್ 24ರಂದು ಬಹಿರಂಗ ಚರ್ಚೆಗೆ ಬರುವಂತೆ ನೀಡಿದ ಪಂಥಾಹ್ವಾನದಲ್ಲಿ ಜಿಲ್ಲಾ ರಂಗಮಂದಿರ ಅಥವಾ ಗಣೇಶ ಮೈದಾನದಲ್ಲಿ ಚರ್ಚೆ ನಡೆಯಲಿ ಎಂದು ಉಲ್ಲೇಖಿಸಿದ್ದೆ. ಕೋವಿಡ್‌ ಕಾರಣ ನಾನು ಗಣೇಶ ಮೈದಾನದಲ್ಲಿ ವ್ಯಕ್ತಿಗತ ಅಂತರ ಕಾಯ್ದುಕೊಂಡು ಚರ್ಚೆ ಮಾಡೋಣ ಎಂದು ಹೇಳಿದಾಗ ಒಪ್ಪಿದ ಖೂಬಾ ಇದೀಗ ವಿವಿಧ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸೋಣ ಎನ್ನುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಚರ್ಚೆಗೆ ರಂಗಮಂದಿರವೇ ಏಕೆ ಬೇಕು. ಗಣೇಶ ಮೈದಾನ ಯಾಕಾಗಬಾರದು. ಬಹಿರಂಗ ಚರ್ಚೆಯಿಂದ ಪಲಾಯನ ಮಾಡಲು ಕುಂಟು ನೆಪ ಹೇಳುತ್ತಿರುವುದು ಸರಿಯಲ್ಲ. ಬಹಿರಂಗ ಚರ್ಚೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಿಗೂ ನಾನು ಪಂಥಾಹ್ವಾನ ನೀಡಿದ್ದೆ. ಈಗಲೂ ಬಹಿರಂಗ ಚರ್ಚೆಗೆ ಸಿದ್ಧ. ವಾಮಮಾರ್ಗ ಅನುಸರಿಸುತ್ತಿರುವವರು ಖೂಬಾ. ಅಂಥ ಮಾರ್ಗಗಳು ಖೂಬಾ ಅವರಿಗೆ ಚೆನ್ನಾಗಿ ಕರಗತವಾಗಿವೆಯೇ ಹೊರತು ನನಗಲ್ಲ’ ಎಂದು ಮಾತಿನಿಂದ ಚುಚ್ಚಿದ್ದಾರೆ.

‘ಸಂಸದ ಖೂಬಾ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಮೇಲೆ ಪ್ರಭಾವ ಬೀರಿ ನೋಟಿಸ್ ಕೊಡಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ವರದಿಯಲ್ಲಿ ನನ್ನ ಹೆಸರಿಲ್ಲ ಎಂದು ತಿಳಿದ ಕೂಡಲೇ ತಮ್ಮ ತಪ್ಪಿನ ಅರಿವಾಗಿ ನೋಟಿಸ್ ನೀಡಿಲ್ಲ ಎಂದು ಸ್ಪಷ್ಟೀಕರಣ ನೀಡಿದರು. ಇಷ್ಟಾದರೂ ಪದೇ ಪದೇ ಒಂದೇ ವಿಚಾರ ಇಟ್ಟುಕೊಂಡು ಸುಳ್ಳನ್ನೇ ಸತ್ಯ ಮಾಡಲು ಕೂಗಿ ಕೂಗಿ ಹೇಳುತ್ತಿದ್ದಾರೆ’ ಎಂದು ಜರಿದಿದ್ದಾರೆ.

‘ಬ್ರಿಮ್ಸ್‌ನಲ್ಲಿ ಗುತ್ತಿಗೆ ಕಾರ್ಮಿಕರನ್ನು ಪೂರೈಸುವ ಗುತ್ತಿಗೆ ಪಡೆದು ನೌಕರರಿಗೆ ಸಂಬಳ ನೀಡದೆ ಮೋಸ ಮಾಡಿದವರು ಯಾರು ಎನ್ನುವುದು ಜಿಲ್ಲೆಯ ಜನರಿಗೆ ತಿಳಿದಿದೆ. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆದರೆ. ಮೊದಲು ತೂತು ಬೀಳುವುದು ಕಲ್ಲು ಎಸೆದವರ ಮನೆಯಲ್ಲಿಯೇ ಎಂಬುದು ನಿಮಗೆ ಗೊತ್ತಿದ್ದರೆ ಒಳ್ಳೆಯದು. ಈಗ ಬಹಿರಂಗ ಚರ್ಚೆಗೆ ಬಂದರೆ, ಎಲ್ಲಿ ಜನ ಮುಗಿ ಬೀಳುತ್ತಾರೋ ಎಂದು ಹೆದರಿ, ರಾಜಕೀಯ ಸ್ಟಂಟ್ ಮಾಡಿ ತಪ್ಪಿಸಿಕೊಳ್ಳಲು ಮಾರ್ಗ ಹುಡುಕುತ್ತಿರುವವರು ನೀವೇ ಹೊರತು ನಾನಲ್ಲ’ ಎಂದು ಖೂಬಾ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

‘ಹಂಸಕ್ಷೀರ ನ್ಯಾಯಕ್ಕಾಗಿಯೇ ನಾನೂ ನಿಮಗೆ ಪಂಥಾಹ್ವಾನ ನೀಡಿದ್ದು, ನೀವು ಮಾಡುತ್ತಿರುವ ಆರೋಪದಲ್ಲಿ ಏನೂ ಸತ್ಯವಿಲ್ಲ ಎನ್ನುವುದನ್ನು ನಿರೂಪಿಸಲೆಂದೇ ಚರ್ಚೆಗೆ ಕರೆದ್ದಿದ್ದೇನೆ’ ಎಂದು ತಿಳಿಸಿದ್ದಾರೆ.

‘ಅತಿ ಹೆಚ್ಚು ಕೋವಿಡ್ ಪ್ರಕರಣಗಳಿರುವ ಬೆಂಗಳೂರು ನಗರ ಜಿಲ್ಲೆಯ ರಾಜರಾಜೇಶ್ವರಿ ನಗರದಲ್ಲಿ ಚಲನಚಿತ್ರ ನಟ, ನಟಿಯರನ್ನು ಕರೆಸಿ ಬಹಿರಂಗ ಪ್ರಚಾರ ಮಾಡುತ್ತ ಸಾವಿರಾರು ಜನರನ್ನು ಸೇರಿಸುತ್ತಿರುವ ಬಿಜೆಪಿಯ ಸಂಸದರಾದ ನೀವು ಈ ಮಾತು ಹೇಳಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಎಂಬ ನಾಣ್ಣುಡಿ ನೆನಪಿಗೆ ಬರುತ್ತದೆ’ ಎಂದು ಟೀಕಿಸಿದ್ದಾರೆ.

‘ಜನರನ್ನು ಸೇರಿಸಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಲಿದೆ ಎಂದು ಉಲ್ಲೇಖಿಸಿದ್ದೀರಿ. ನಿಮ್ಮ ಪತ್ರ ಬಂದ ತರುವಾಯ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ಅಂದರೆ ನೀವು ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪೊಲೀಸರ ಮೇಲೆ ಎಷ್ಟು ಪ್ರಭಾವ ಬೀರುತ್ತಿದ್ದೀರಿ ಎನ್ನುವುದು ಇದರಿಂದ ವೇದ್ಯವಾಗುತ್ತದೆ. ಬಹಿರಂಗ ಚರ್ಚೆ ತಪ್ಪಿಸಲು ಇದು ನಿಮ್ಮ ಪೂರ್ವನಿಯೋಜಿತ ಸಂಚು’ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.