ಮಂಗಳವಾರ, ಅಕ್ಟೋಬರ್ 26, 2021
26 °C
ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

ಕೊಂಗಳಿ: ವಿಧಾನಸಭೆ ಚುನಾವಣೆಗೆ ಸಿದ್ಧರಾಗಿ- ಕೆಪಿಸಿಸಿ ಕಾರ್ಯದರ್ಶಿ ಈಶ್ವರ ಖಂಡ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ರಾಜ್ಯದಲ್ಲಿನ ಬಿಜೆಪಿ ಸರ್ಕಾರಕ್ಕೆ ಯಾವುದೇ ಗೊತ್ತು ಗುರಿಯಿಲ್ಲ. ಬಿಜೆಪಿ ನಾಯಕರಲ್ಲಿ ಸಮನ್ವಯತೆ ಇಲ್ಲ. ಯಾವಾಗ ಬೇಕಾದರೂ ವಿಧಾನಸಭೆ ಚುನಾವಣೆ ನಡೆಯಬಹುದು. ಕಾಂಗ್ರೆಸ್ ಕಾರ್ಯಕರ್ತರು ಈಗಿನಿಂದಲೇ ಚುನಾವಣೆಗೆ ಸಿದ್ಧರಾಗಿ, ಪಕ್ಷ ಸಂಘಟನೆಗೆ ಒತ್ತುಕೊಡಬೇಕು ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

ತಾಲ್ಲೂಕಿನ ಗಡಿ ಭಾಗದ ಕೊಂಗಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಯುವಕರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ದಿನಬಳಕೆ ವಸ್ತುಗಳು, ಪೆಟ್ರೋಲ್, ಡಿಸೇಲ್, ಸಿಲಿಂಡರ್ ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಜನ ಬದಲಾವಣೆ ಬಯಸಿದ್ದಾರೆ. ಬರುವ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ನಾನು ಸಚಿವನಿದ್ದ ಸಂದರ್ಭದಲ್ಲಿ ಗುಡಿಸಲು ಮುಕ್ತ ತಾಲ್ಲೂಕು ಮಾಡಬೇಕು, ಬಡ ಜನರಿಗೆ ಶಾಶ್ವತ ಸೂರು ಕೊಡಬೇಕು ಎನ್ನುವ ಉದ್ದೇಶದೊಂದಿಗೆ ದಾಖಲೆ ರೀತಿಯಲ್ಲಿ ತಾಲ್ಲೂಕಿಗೆ ಮನೆ ಮಂಜೂರು ಮಾಡಿಸಿ ಹಂಚಿಕೆ ಮಾಡಿದ್ದೇನೆ. ಆದರೆ, ಬಡ ಜನರ ಏಳಿಗೆ ಹಾಗೂ ಅಭಿವೃದ್ಧಿ ಸಹಿಸದ ಹಿಂದಿನ ಚುನಾವಣೆಯಲ್ಲಿ ಸೋತ ಪರಾಜಿತ ಅಭ್ಯರ್ಥಿ ಮತ್ತು ಈಗಿನ ಕೇಂದ್ರ ಸಚಿವ ಖೂಬಾ ಅವರು ಸರ್ಕಾರಕ್ಕೆ ದೂರು ಕೊಟ್ಟು ಮನೆಗಳ ಅನುದಾನ ಬಿಡುಗಡೆಗೆ ತಡೆ ನೀಡಿದ್ದಾರೆ ಎಂದು ಆರೋಪಿಸಿದರು.

ಸರ್ಕಾರದ ಅನುದಾನ ನೀರಿಕ್ಷೆಯಿಂದ ಸಾಲ ಮಾಡಿ ಮನೆ ಕಟ್ಟಿಕೊಂಡ ಬಡ ಜನರು ಈಗ ಹಣಕ್ಕಾಗಿ ಪರದಾಡುತ್ತಿದ್ದಾರೆ. ಇನ್ನೂ ಕೆಲ ಫಲಾನುಭವಿಗಳು ಇರುವ ಮನೆ ಕೆಡವಿ ಅಡಿಪಾಯ, ನೆಂಟಲ್ ಲೇವಲ್ ವರೆಗೂ ಕಟ್ಟಿಕೊಂಡು ಹಣ ಸಿಗದೇ ಅತಂತ್ರವಾಗಿದ್ದಾರೆ ಎಂದರು.

ಇದೇ ವೇಳೆ ಕೊಂಗಳಿ ಗ್ರಾಮದ 100ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಶಾಸಕ ಖಂಡ್ರೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ್‌ ಚವ್ಹಾಣ, ಪ್ರಮುಖರಾದ ಅಶೋಕರಾವ್‌ ಕಣಜಿ, ಶಿವರಾಜ ಹಾಸನಕರ್, ಪ್ರವೀಣ ಹಣಮಶೆಟ್ಟಿ, ಮಾರುತಿರಾವ್‌ ಮಗರ್, ಶಿವಾಜಿರಾವ್‌ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು