ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ: ನ್ಯಾಯಾಧೀಶ ಕಾಡ್ಲೂರ ಸತ್ಯ ನಾರಾಯಣಾಚಾರ್ಯ

Last Updated 27 ನವೆಂಬರ್ 2021, 12:28 IST
ಅಕ್ಷರ ಗಾತ್ರ

ಬೀದರ್‌: ‘ಪ್ರತಿಯೊಬ್ಬರಿಗೂ ಸಮಾನ ಹಕ್ಕು ಕಲ್ಪಿಸಿರುವ ಕಾರಣ ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾಗಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕಾಡ್ಲೂರ ಸತ್ಯ ನಾರಾಯಣಾಚಾರ್ಯ ಬಣ್ಣಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ವತಿಯಿಂದ ಜಿಲ್ಲಾ ವಕೀಲರ ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

’ವಿವಿಧೆತೆಯಲ್ಲಿ ಏಕತೆ ಇರುವುದು ಭಾರತ ದೇಶದ ವಿಶೇಷತೆಯಾಗಿದೆ. ಅಂತೆಯೇ ಭಾರತದ ಎಲ್ಲ ನಾಗರಿಕರಿಗೆ ಸಮಾನವಾದ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಹಾಗೂ ಹಕ್ಕು ಒದಗಿಸಲಾಗಿದೆ’ ಎಂದು ತಿಳಿಸಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಡೀನ್ ಡಾ.ದೇವಿದಾಸ ಮಾಲೆ ಅವರು ಮಾತನಾಡಿ, ‘ಜನೋಪರಕ್ಕಾಗಿ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಭಾರತ ಸಂವಿಧಾನವನ್ನು ಜೀವಂತ ಗ್ರಂಥ ಎಂದೇ ಭಾವಿಸಬಹುದಾಗಿದೆ’ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಸಿದ್ರಾಮ ಟಿ.ಪಿ. ಮಾತನಾಡಿ, ‘ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಸಮಾನ ಅವಕಾಶಗಳು ಸಿಗಬೇಕು ಎಂದು ತಿಳಿಸುವುದು ಭಾರತ ಸಂವಿಧಾನದ ವಿಶೇಷತೆಯಾಗಿದೆ’ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ಮಾನೂರೆ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಝರಿನಾ, 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಆರ್.ಪಿ.ಗೌಡ ಇದ್ದರು. ವಕೀಲರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಅಕ್ಕಮಹಾದೇವಿ ಮಹಿಳಾ ಕಾಲೇಜು:

‘ಭಾರತದ ಸಂವಿಧಾನ ರಚಿಸಿ ಎಲ್ಲ ಮಹಾಪುರುಷರ ಕನಸನ್ನು ನನಸು ಮಾಡಿದ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ’ ಎಂದು ಪ್ರಾಚಾರ್ಯ ಪ್ರೊ.ಶಿವಶರಣಪ್ಪ ಹುಗ್ಗೆಪಾಟೀಲ ಹೇಳಿದರು.

ನಗರದ ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಸಂವಿಧಾನ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

’ಡಾ.ಅಂಬೇಡ್ಕರ್‌ ಅವರು ಅರವತ್ತು ದೇಶಗಳ ಸಂವಿಧಾನ ಓದಿ, ಭಾರತದ ಸಂವಿಧಾನ ರಚನೆ ಮಾಡಿದ್ದಾರೆ. ಇಂದು ಪ್ರತಿಯೊಬ್ಬರೂ ಸಂವಿಧಾನದ ಪೀಠಿಕೆ ಹಾಗೂ ಅದರಲ್ಲಿರುವ ಕಲಂಗಳನ್ನು ತಪ್ಪದೇ ಓದಬೇಕು’ ಎಂದರು.

ಮುಖ್ಯ ಅತಿಥಿಗಳಾದ ಪ್ರೊ. ವಿಜಯಕುಮಾರ ಬಿರಾದಾರ, ಮೀನಾ ಗಾಯಕವಾಡ ಪಾಲ್ಗೊಂಡಿದ್ದರು. ಮಂಜುನಾಥ ಎಂ. ನಿರೂಪಿಸಿದರು. ಧನಲಕ್ಷ್ಮೀ ಪಾಟೀಲ ಸ್ವಾಗತಿಸಿದರು. ಸಂವಿಧಾನ ಪೀಠಿಕೆಯನ್ನು ವಿದ್ಯಾರ್ಥಿಗಳಿಂದ ಓದಿಸಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT