ಭಾನುವಾರ, 2 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಮಳೆಗಾಲ ಎದುರಿಸಲು ಭರಪೂರ ಸಿದ್ಧತೆ: ಹೊಸ ಚರಂಡಿಗಳ ನಿರ್ಮಾಣ

Published 20 ಮೇ 2024, 4:48 IST
Last Updated 20 ಮೇ 2024, 4:48 IST
ಅಕ್ಷರ ಗಾತ್ರ

ಬೀದರ್‌: ಮುಂಗಾರು ಪ್ರವೇಶಕ್ಕೆ ಇನ್ನೇನು ಕೆಲವೇ ದಿನಗಳು ಉಳಿದಿದ್ದು, ಮಳೆಗಾಲ ಎದುರಿಸಲು ಈ ಸಲ ನಗರಸಭೆ ಭರದ ಸಿದ್ಧತೆ ಕೈಗೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಹರ್ಷ ಮೂಡಿಸಿದೆ.

ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿಯೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಹೊಸ ಚರಂಡಿ, ಚರಂಡಿಗಳಲ್ಲಿ ತುಂಬಿಕೊಂಡಿರುವ ಹೂಳು ತೆಗೆಯಲು ಆರಂಭಿಸುತ್ತಿದ್ದಂತೆ ಮಳೆ ಸುರಿದು ಸಮಸ್ಯೆ ನನೆಗುದಿಗೆ ಬೀಳುತ್ತಿತ್ತು. ಇದರಿಂದಾಗಿ ಸಾರ್ವಜನಿಕರು ಅನೇಕ ರೀತಿಯ ಸಮಸ್ಯೆ ಎದುರಿಸುತ್ತಿದ್ದರು. ಆದರೆ, ಹಳೆಯ ತಪ್ಪುಗಳಿಂದ ಪಾಠ ಕಲಿತಿರುವ ನಗರಸಭೆ ಈ ಸಲ ಅದಕ್ಕೆ ಆಸ್ಪದ ಕೊಡುತ್ತಿಲ್ಲ.

ನಗರದ ಪ್ರಮುಖ ರಸ್ತೆಗಳು, ತಗ್ಗು ಪ್ರದೇಶಗಳನ್ನು ಗುರುತಿಸಿ ಮಳೆಗಾಲದಲ್ಲಿ ಆಗಬಹುದಾದ ಸಂಭವನೀಯ ಸಮಸ್ಯೆಗಳನ್ನು ತಪ್ಪಿಸಲು ನಗರಸಭೆ ಕಳೆದ ಎರಡು ತಿಂಗಳಿಂದ ಅದಕ್ಕಾಗಿ ಶ್ರಮಿಸುತ್ತಿದೆ.

ಲೋಕಸಭೆಗೆ ಚುನಾವಣೆ ಘೋಷಣೆಯಾದ ನಂತರ ಮಳೆಗಾಲದ ಸಿದ್ಧತೆ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿತ್ತು. ನಗರಸಭೆ ಪೌರಾಯುಕ್ತರು ಸೇರಿದಂತೆ ಕೆಲ ಪ್ರಮುಖ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆಗೊಳಿಸಲಾಗಿದೆ. ಕೆಲಸಗಳು ನನೆಗುದಿಗೆ ಬೀಳಬಹುದು ಎಂದು ಜನ ಅಂದುಕೊಂಡಿದ್ದರು. ಆದರೆ, ಜಿಲ್ಲಾಡಳಿತ ಅದಕ್ಕೆ ಆಸ್ಪದ ನೀಡಿಲ್ಲ. ಹೀಗಾಗಿ ನಗರದ ಹಲವೆಡೆ ಶರವೇಗದಲ್ಲಿ ಕಾಮಗಾರಿಗಳು ನಡೆಯುತ್ತಿವೆ.

ಸದಾ ಜನದಟ್ಟಣೆಯಿಂದ ಕೂಡಿರುವ ನಗರದ ಕೇಂದ್ರ ಬಸ್‌ ನಿಲ್ದಾಣದ ಪ್ರದೇಶದಲ್ಲಿ ವಿಶಾಲವಾದ ಹೊಸ ಚರಂಡಿ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಚರಂಡಿ ನಿರ್ಮಾಣದಿಂದ ಆ ಪ್ರದೇಶದಲ್ಲಿ ವಾಹನ ದಟ್ಟಣೆ ಸಮಸ್ಯೆ ಉಂಟಾಗಿತ್ತು. ಮಳಿಗೆಗಳವರ ವಹಿವಾಟಿನ ಮೇಲೆ ಪರಿಣಾಮ ಬೀರಿತ್ತು. ಈಗ ಅದೆಲ್ಲ ದೂರವಾಗಿದೆ. ರಸ್ತೆ ಬದಿಯಲ್ಲಿ ಸುರಿದಿರುವ ಮಣ್ಣು ಹಾಗೆಯೇ ಬಿದ್ದು ಅದನ್ನು ತುರ್ತಾಗಿ ವಿಲೇವಾರಿಗೊಳಿಸುವ ಅಗತ್ಯವಿದೆ. ಇಲ್ಲವಾದರೆ ಮಳೆ ಸುರಿದು ಮಣ್ಣೆಲ್ಲ ರಸ್ತೆ ಮೇಲೆ ಹರಿದು ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಹೆಚ್ಚಿದೆ.

ಇನ್ನು, ಮೈಲೂರ ಸಿಎಂಸಿ ಕಾಲೊನಿಯ ಮುಖ್ಯರಸ್ತೆಯಲ್ಲಿ ಈಗಾಗಲೇ ಹೊಸ ಚರಂಡಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಈಗ ರಿಂಗ್‌ರೋಡ್‌ಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಚರಂಡಿ ನಿರ್ಮಿಸಲಾಗುತ್ತಿದೆ. ಈ ಪ್ರದೇಶದಲ್ಲಿ ಪ್ರತಿ ಮಳೆಗಾಲದಲ್ಲಿ ಮಳೆ ನೀರು ರಸ್ತೆ ಮೇಲೆ ಉಕ್ಕಿ ಹರಿದು ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತಿತ್ತು. ಅನೇಕ ವರ್ಷಗಳಿಂದ ಜನ ಚರಂಡಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸುತ್ತಿದ್ದರು. ಈಗ ಅದಕ್ಕೆ ಮುಕ್ತಿ ಸಿಕ್ಕಿದೆ.

ಇಷ್ಟೇ ಅಲ್ಲ, ನಗರದ ವಿವಿಧ ಭಾಗಗಳಲ್ಲಿ ಚರಂಡಿ ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದೆ. ಆದರೆ, ಆಮೆಗತಿಯಲ್ಲಿ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದು, ಅದಕ್ಕೆ ಚುರುಕು ನೀಡಬೇಕೆಂದು ಆಗ್ರಹಿಸಿದ್ದಾರೆ.

‘ಮಳೆಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಬಾರದು ಎಂಬ ಉದ್ದೇಶದಿಂದ ಈ ಸಲ ಬೇಸಿಗೆಯಲ್ಲಿಯೇ ಅನೇಕ ಕಡೆ ಹೊಸ ಚರಂಡಿ, ಹಳೆಯ ಚರಂಡಿಗಳ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಬಹುತೇಕ ಪೂರ್ಣಗೊಳ್ಳಲು ಬಂದಿದೆ’ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬೀದರ್‌ನ ಮೈಲೂರ ಸಿಎಂಸಿ ರಿಂಗ್‌ರೋಡ್‌ ಸಮೀಪ ಚರಂಡಿ ನಿರ್ಮಾಣಕ್ಕಾಗಿ ಜೆಸಿಬಿಯಿಂದ ನೆಲ ಅಗೆಯುತ್ತಿರುವುದು
ಬೀದರ್‌ನ ಮೈಲೂರ ಸಿಎಂಸಿ ರಿಂಗ್‌ರೋಡ್‌ ಸಮೀಪ ಚರಂಡಿ ನಿರ್ಮಾಣಕ್ಕಾಗಿ ಜೆಸಿಬಿಯಿಂದ ನೆಲ ಅಗೆಯುತ್ತಿರುವುದು
ಶರವೇಗದಲ್ಲಿ ನಡೆಯುತ್ತಿರುವ ಚರಂಡಿ ನಿರ್ಮಾಣ ಕೆಲಸ
ಶರವೇಗದಲ್ಲಿ ನಡೆಯುತ್ತಿರುವ ಚರಂಡಿ ನಿರ್ಮಾಣ ಕೆಲಸ
‘ನಗರಸಭೆ ಉತ್ತಮ ಕೆಲಸ’
ಮಳೆಗಾಲದಲ್ಲಿ ಮಳೆ ನೀರು ಹರಿದಾಗ ರಸ್ತೆ ಯಾವುದು ಚರಂಡಿ ಯಾವುದು ಅಂತ ಗೊತ್ತಾಗುತ್ತಿರಲಿಲ್ಲ. ಜನ ಬಹಳ ಭಯದಲ್ಲಿ ಓಡಾಡುವ ಪರಿಸ್ಥಿತಿ ಇತ್ತು. ಅನೇಕರು ಬಿದ್ದು ಗಾಯಗೊಳ್ಳುತ್ತಿದ್ದರು. ಈಗ ಚರಂಡಿ ಕೆಲಸ ನಡೆಯುತ್ತಿರುವುದು ಉತ್ತಮ. ಇದು ಬಹಳ ಅನಿವಾರ್ಯ ಇತ್ತು. –ಸಂತೋಷ ಮೈಲೂರ್‌ ಸಿಎಂಸಿ ಕಾಲೊನಿ ನಿವಾಸಿ
‘ಮನೆಗಳಿಗೆ ನೀರು ನುಗ್ಗುತ್ತಿತ್ತು’
ಚರಂಡಿ ಇರದ ಕಾರಣ ಮಳೆ ನೀರು ಬೇಕಾಬಿಟ್ಟಿ ಹರಿಯುತ್ತಿತ್ತು. ಹೊಲಸು ನೀರೆಲ್ಲ ರಸ್ತೆ ಮೇಲೆ ನಿಲ್ಲುತ್ತಿತ್ತು. ಮಳೆ ಜಾಸ್ತಿಯಾದಾಗ ಮನೆಗಳಿಗೆ ನುಗ್ಗಿ ಸಮಸ್ಯೆ ಸೃಷ್ಟಿಯಾಗುತ್ತಿತ್ತು. ಜನರಿಗೆ ಓಡಾಡಲು ಸಮಸ್ಯೆಯಾಗುತ್ತಿತ್ತು. ಮಳೆಗಾಲಕ್ಕೂ ಮುನ್ನವೇ ಕೆಲಸ ಮಾಡುತ್ತಿರುವುದು ಉತ್ತಮ. –ಮೊಹಮ್ಮದ್‌ ಇಸ್ಮಾಯಿಲ್‌ ಮೈಲೂರ್‌ ರಿಂಗ್‌ರೋಡ್‌ ನಿವಾಸಿ
ಬಗೆಹರಿಯದ ಫುಟ್‌ಪಾತ್‌ ಸಮಸ್ಯೆ
ನಗರದ ಬಹುತೇಕ ಕಡೆಗಳಲ್ಲಿ ಫುಟ್‌ಪಾತ್‌ಗಳನ್ನು ಅತಿಕ್ರಮಿಸಲಾಗಿದೆ. ಕೆಲವೆಡೆಯಂತೂ ರಾಜಾರೋಷವಾಗಿ ಅದರ ಮೇಲೆಯೇ ಶೆಡ್‌ಗಳನ್ನು ಹಾಕಿ ಮಳಿಗೆಗಳನ್ನು ನಡೆಸಲಾಗುತ್ತಿದೆ. ಇದರಿಂದಾಗಿ ಪಾದಚಾರಿಗಳು ರಸ್ತೆ ಮೇಲೆ ಓಡಾಡುವಂತಾಗಿದೆ. ಅಪಘಾತಗಳಿಗೆ ಕಾರಣವಾಗುತ್ತಿದೆ. ಸುಸಜ್ಜಿತ ಪಾದಚಾರಿ ಮಾರ್ಗಗಳಿದ್ದರೂ ಓಡಾಡಲು ಸಾಧ್ಯವಿಲ್ಲದಂತಾಗಿದೆ. ಆದ್ಯತೆ ಮೇಲೆ ಅತಿಕ್ರಮಣ ತೆರವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಹರ್ಷ ಗುಪ್ತಾ ಅವರು ಜಿಲ್ಲಾಧಿಕಾರಿಇದ್ದಾಗ ಎಲ್ಲ ಕಡೆಗಳಲ್ಲಿ ವಿಶಾಲವಾದ ರಸ್ತೆಗಳು ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗಿದೆ. ಆದರೆ ಫುಟ್‌ಪಾತ್‌ಗಳನ್ನು ಅತಿಕ್ರಮಣ ಮಾಡಿರುವುದರಿಂದ ಜನರಿಗೆ ಓಡಾಡಲು ಸಾಧ್ಯವಾಗುತ್ತಿಲ್ಲ. ಹೋಟೆಲ್‌ ಹಣ್ಣು ಪಾನಿಪುರಿ ಹೀಗೆ ನಾನಾ ಬಗೆಯ ವ್ಯಾಪಾರ ವಹಿವಾಟು ಪಾದಚಾರಿ ಮಾರ್ಗಗಳ ಮೇಲೆ ನಡೆಸಲಾಗುತ್ತಿದೆ. ಇನ್ನು ಬರೀದ್ ಷಾಹಿ ಉದ್ಯಾನದ ಎದುರಿನ ಫುಟ್‌ಪಾತ್‌ ದಿನೇ ದಿನೇ ಹಾಳಾಗುತ್ತಿದೆ. ಅದನ್ನು ಸರಿಪಡಿಸಬೇಕು’ ಎಂದು ಸ್ಥಳೀಯರಾದ ರಾಮರಾವ್‌ ಶೇಖರ್‌ ರಾಜು ಬಸವರಾಜ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT