ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬೆರಕೆ ಇದ್ದರೆ ದೂರು ಕೊಡಿ: ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ

Published 28 ಡಿಸೆಂಬರ್ 2023, 16:03 IST
Last Updated 28 ಡಿಸೆಂಬರ್ 2023, 16:03 IST
ಅಕ್ಷರ ಗಾತ್ರ

ಬೀದರ್‌: ‘ಯಾವುದೇ ರೀತಿಯ ಪ್ಯಾಕ್‌ ಫುಡ್‌ ಖರೀದಿಸಿದರೆ ಅದರಲ್ಲಿ ಕಲಬೆರಕೆ ಇದ್ದರೆ ದೂರು ಕೊಡಬಹುದು’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಹಯೋಗದಲ್ಲಿ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಗ್ರಾಹಕರು ಬ್ಯ್ರಾಂಡೆಡ್ ವಸ್ತುಗಳು ಖರೀದಿಸುವುದರಿಂದ ಮೋಸ ಹೋಗುವುದು ಕಡಿಮೆ. ಪ್ಯಾಕ್‌ ಫುಡ್‌ ಖರೀದಿಸುವಾಗ ಯಾವುದೇ ಕಲಬೆರಕೆ ಕಂಡು ಬಂದರೆ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಜನರು ವಿವಿಧ ರೀತಿಯಲ್ಲಿ ಮೋಸ ಹೋಗುತ್ತಿದ್ದಾರೆ. ಕೆಲವರು ಒಂದು ಲಕ್ಷ ಹಣ ಕೊಟ್ಟರೆ ಆರು ತಿಂಗಳಲ್ಲಿ ಡಬಲ್ ಆಗುತ್ತದೆ ಎಂದು ಹೇಳಿ ಮೋಸ ಮಾಡುತ್ತಿದ್ದಾರೆ. ಆರು ತಿಂಗಳಲ್ಲಿ ಹಣ ಡಬಲ್ ಆಗಲು ಸಾಧ್ಯವಿಲ್ಲ. ಗ್ರಾಹಕರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನ ಅದರ ಗುಣಮಟ್ಟ ಪರೀಕ್ಷಿಸಿ ಖರೀದಿಸಬೇಕು. ಇಲ್ಲವಾದರೆ ಮೋಸ ಹೋಗಬಹುದು. ಜನರು ವಸ್ತುಗಳನ್ನು ಎಚ್ಚರಿಕೆಯಿಂದ ಖರೀದಿಸದಿದ್ದರೆ ಗುಣಮಟ್ಟ ಅಥವಾ ತೂಕದಲ್ಲಿ ಮೋಸ ಹೋಗಬಹುದು. ಒಂದುವೇಳೆ ಯಾರಾದರೂ ಮೋಸ ಮಾಡಿದರೆ ಜಿಲ್ಲಾ ಗ್ರಾಹಕರ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ ನ್ಯಾಯ ಪಡೆಯಬಹುದು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ದಿಲೀಪ ಬದೋಲೆ ಮಾತನಾಡಿ, ಜಾಗೋ ಗ್ರಾಹಕ ಜಾಗೋ ಎನ್ನುವ ಜಾಹೀರಾತು ಎಲ್ಲರೂ ನೋಡಿರುತ್ತೇವೆ. ಅದು ಸಾಕಷ್ಟು ಪ್ರಚಾರವಾಗಿತ್ತು. 2019ರಲ್ಲಿ ಜಾರಿಗೆ ಬಂದ ಗ್ರಾಹಕರ ಕಾಯ್ದೆ ಗ್ರಾಹಕರಿಗೆ ಅನುಕೂಲಕ್ಕಾಗಿ ರೂಪಿಸಲಾಗಿದೆ. ಆದರೆ, ಗ್ರಾಹಕರು ಮೋಸ ಹೋದಾಗ ಎಲ್ಲಿ ಹೋಗಿ ದೂರು ನೀಡಬೇಕು ಎಂದು ಅವರಿಗೆ ತಿಳಿದಿಲ್ಲ. ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಜನ ಎಚ್ಚರಿಕೆಯಿಂದ ವ್ಯವಹರಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಕವಿತಾ ಹುಷಾರೆ ಮಾತನಾಡಿ, ಗ್ರಾಹಕರಿಗೆ ಸಮಸ್ಯೆ ಆದಾಗ ಎಲ್ಲಿಗೆ ಹೋಗಿ ದೂರು ಕೊಡಬೇಕು ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಅದರ ಬಗ್ಗೆ ಅರಿವು ಮೂಡಿಸಲು ವಿವಿಧ ಶಾಲಾ- ಕಾಲೇಜುಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಾಬು ಸಾಹೇಬ್‌ ಎಚ್. ಛಬ್ಬಿ ಮಾತನಾಡಿ, ಜಿಲ್ಲಾ ಗ್ರಾಹಕರ ಪರಿಹಾರ ಆಯೋಗದಿಂದ ₹5 ಲಕ್ಷದ ವರೆಗೆ ಉಚಿತವಾಗಿ ಗ್ರಾಹಕರಿಗೆ ಸೇವೆ ಒದಗಿಸಲಾಗುತ್ತದೆ. ಗ್ರಾಹಕರು ಖರೀದಿಸಿದ ಪ್ರತಿ ವಸ್ತುಗಳ ರಸೀದಿ  ಇಟ್ಟುಕೊಂಡಿರಬೇಕು ಎಂದು ಹೇಳಿದರು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಸುರೇಖಾ ಮಾತನಾಡಿ, ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಮೋಸ, ವಂಚನೆ, ಅನ್ಯಾಯಕ್ಕೆ ಒಳಗಾಗದಂತೆ ಅವರಿಗೆ ಅವರ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಗ್ರಾಹಕರ ಹಕ್ಕುಗಳ ದಿನ ಆಚರಿಸಲಾಗುತ್ತದೆ ಎಂದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನೋಳ್ಳಿ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಚಾಲಕ ಬಸವರಾಜ ಪವಾರ, ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಜಿಲ್ಲಾಧ್ಯಕ್ಷ ಬಿ.ಜಿ.ಶೆಟಕಾರ, ಜಿಲ್ಲಾ ಗ್ರಾಹಕರ ರಕ್ಷಣಾ ಪರಿಷತ್ ಸದಸ್ಯರಾದ ಮಹೇಶ ಪಾಲಂ, ಲುಂಬಿಣಿ ಗೌತಮ, ಕೆಎಫ್‌ಸಿಎಸ್‌ ಜಿಲ್ಲಾ ವ್ಯವಸ್ಥಾಪಕ ವಿನೋದ, ಕಾನೂನು ಮಾಪನಶಾಸ್ತ್ರದ ಸಹಾಯಕ ನಿಯಂತ್ರಕ ರಾಜು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್‌ ಸಿದ್ದಮ್ಮ ಹಂಗರಗಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿ ಸಂತೋಷ ಕಾಳೆ, ಶಿಕ್ಷಣಾಧಿಕಾರಿ ಗುಂಡಪ್ಪ ಹುಡಗೆ, ಬೀದರ್‌ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಎಸ್.ಮನೋಹರ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT