ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿ ವಿರುದ್ಧ ಮುಂದುವರಿದ ಪ್ರತಿಭಟನೆ

ಮೇಲಧಿಕಾರಿಗಳ ಆದೇಶ ಪಾಲಿಸದ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ
Last Updated 25 ಜೂನ್ 2021, 16:19 IST
ಅಕ್ಷರ ಗಾತ್ರ

ಬೀದರ್‌: ಕೃಷಿ ಜಂಟಿ ನಿರ್ದೇಶಕಿ ತಾರಾಮಣಿ ಅವರನ್ನು ಬೀದರ್‌ ಜಿಲ್ಲೆಯಿಂದ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಶುಕ್ರವಾರ ರಾಜ್ಯ ಕೃಷಿ ಅಧಿಕಾರಿಗಳ ಸಂಘದ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಕೃಷಿ ಅಧಿಕಾರಿಗಳು ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.

ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿಗಳು ಸೇರಿ ಒಟ್ಟು 64 ಸಿಬ್ಬಂದಿ ಸಾಮೂಹಿಕ ರಜೆ ಹಾಕಿ ಕರ್ತವ್ಯದಿಂದ ದೂರ ಉಳಿದರು. ಅನೇಕ ಸಿಬ್ಬಂದಿ ಕಚೇರಿಗೆ ಬಾರದ ಕಾರಣ ಕಚೇರಿಗಳು ಭಣಗುಡುತ್ತಿದ್ದವು. ಕೆಲ ರೈತ ಸಂಪರ್ಕ ಕೇಂದ್ರಗಳು ಬಾಗಿಲು ತೆರೆದಿರಲಿಲ್ಲ. ಕೃಷಿ ಕಾರ್ಯಕ್ಕೆ ಕೇಂದ್ರಗಳಿಗೆ ಬಂದ ರೈತರು ತೊಂದರೆ ಅನುಭವಿಸಬೇಕಾಯಿತು.

‘ಬೀದರ್‌ ಕೃಷಿ ಜಂಟಿ ನಿರ್ದೇಶಕಿ ತಾರಾಮಣಿ ಅವರನ್ನು ವರ್ಗಾವಣೆ ಮಾಡುವಂತೆ ಕಲ್ಯಾಣ ಕರ್ನಾಟಕದ ಬೀದರ್‌, ಕಲಬುರ್ಗಿ, ಯಾದಗಿರಿ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಕೃಷಿ ಅಧಿಕಾರಿಗಳು ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದ್ದಾರೆ.

‘ನೌಕರರ ಹಿತ ಕಾಪಾಡುವುದು ಸರ್ಕಾರಿ ನೌಕರರ ಸಂಘದ ಉದ್ದೇಶವಾಗಿದೆ. ಜಂಟಿ ನಿರ್ದೇಶಕಿಯ ವರ್ಗಾವಣೆ ಆದೇಶ ಹೊರಡುವ ವರೆಗೂ ಪ್ರತಿಭಟನೆ ಮುಂದುವರಿಯಲಿದೆ’ ಎಂದು ಹೇಳಿದ್ದಾರೆ.

ಯಾವುದೇ ಅಕ್ರಮ ನಡೆದಿಲ್ಲ

‘ಬೀದರ್‌ ಜಿಲ್ಲೆಗೆ ಬೇಡಿಕೆಗಿಂತಲೂ ಹೆಚ್ಚು ಬೀಜ ಪೂರೈಕೆ ಮಾಡಲಾಗಿದೆ. ಕಚೇರಿಯಲ್ಲಿ ಎಲ್ಲ ದಾಖಲೆಗಳು ಇವೆ. ಬೀಜ ಪೂರೈಕೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆದಿಲ್ಲ’ ಎಂದು ಕೃಷಿ ಜಂಟಿ ನಿರ್ದೇಶಕಿ ತಾರಾಮಣಿ ಸ್ಪಷ್ಟಪಡಿಸಿದ್ದಾರೆ.
‘ಅಚ್ಚುಕಟ್ಟಾಗಿ ಕೆಲಸ ಮಾಡಿಸುವುದು ಅಧಿಕಾರಿಯ ಜವಾಬ್ದಾರಿ. ಅದನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ಸರ್ಕಾರ ನಾಲ್ವರು ಕೃಷಿ ಅಧಿಕಾರಿಗಳ ವರ್ಗಾವಣೆಗೆ ಮುಂದಾಗಿರುವ ಯಾವುದೇ ಮಾಹಿತಿ ಇಲ್ಲ’ ಎಂದು ತಿಳಿಸಿದ್ದಾರೆ.

ಆರು ಕೃಷಿ ಅಧಿಕಾರಿಗಳ ವರ್ಗಾವಣೆ

ಬೀದರ್ ಜಿಲ್ಲೆಯ ಆರು ಸಹಾಯಕ ಕೃಷಿ ನಿರ್ದೇಶಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಕೃಷಿ ಇಲಾಖೆಯ ಅಧೀನ ಕಾರ್ಯದರ್ಶಿ ಜಾನ್‌ ಪ್ರಕಾಶ ರೊಡ್ರಿಗ್ಸ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಔರಾದ್‌ನ ಸಹಾಯಕ ಕೃಷಿ ನಿರ್ದೇಶಕ ಅಬ್ದುಲ್‌ ಮಾಜೀದ್ ಅವರನ್ನು ಉಡುಪಿ ಜಿಲ್ಲೆ ಕಾರ್ಕಳಕ್ಕೆ, ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಜಾರಿ ದಳದ ಸಹಾಯಕ ನಿರ್ದೇಶಕ ಅನ್ಸಾರಿ ಮಾಕ್ ಅವರನ್ನು ಔರಾದ್‌ಗೆ , ಬಸವಕಲ್ಯಾಣದ ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ಅವರನ್ನು ದಕ್ಷಿಣ ಕನ್ನಡದ ಸುಳ್ಯಕ್ಕೆ, ಸಹಾಯಕ ಕೃಷಿ ನಿರ್ದೇಶಕ ಮಾರ್ತಂಡ್‌ ಅವರನ್ನು ಬಸವಕಲ್ಯಾಣಕ್ಕೆ, ಭಾಲ್ಕಿಯ ಸಹಾಯಕ ಕೃಷಿ ನಿರ್ದೇಶಕ ರಮೇಶ ಮಸ್ಕಲೆ ಹಾಗೂ ಹುಮನಾಬಾದ್‌ನ ಮಲ್ಲಿಕಾರ್ಜುನ ಪಿ.ಎಂ. ಅವರನ್ನು ಕಾರವಾರಕ್ಕೆ ವರ್ಗಾವಣೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಕೃಷಿ ಇಲಾಖೆಯಲ್ಲಿ ಗೊಂದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದು ವಿವರಣೆ ಕೊಡುವಂತೆ ಕೃಷಿ ಜಂಟಿ ನಿರ್ದೇಶಕಿ ತಾರಾಮಣಿ ಅವರಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT